ಎಸ್.ಎಂ, ಕೃಷ್ಣರ ಮುಂದಿನ ರಾಜಕೀಯ ಭವಿಷ್ಯ ಏನು??

0
856

ಕೃಷ್ಣ ಅತಂತ್ರ

ಹಿರಿಯ ಧುರೀಣ ಮಾಜಿ ಸಿಎಂ ಎಸ್.ಎಂ.ಕೃಷ್ಣ ಪಕ್ಷಕ್ಕೆ ರಾಜೀನಾಮೆ ಕೊಟ್ಟ ಮೇಲೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಉಂಟಾಗಿದೆ. ಕಳೆದ ಕೆಲ ವರ್ಷಗಳಿಂದ ಪಕ್ಷ ಚಟುವಟಿಕೆಗಳಿಂದ ದೂರ ಉಳಿದಿದ್ದ ಕೃಷ್ಣ ಅಧಿಕಾರ ಪಡೆಯಲು ಹವಣಿಸಿದ್ದು ಈಗ ಇತಿಹಾಸ. ತಮ್ಮನ್ನು ಕಡೆಗಣಿಸಿದ್ದನ್ನು ಪ್ರತಿಭಟಿಸಿ ಕೃಷ್ಣ ಹೊರಬಂದದ್ದು, ಅವರ ಜೊತೆಗಿದ್ದವರಿಗೆ ಮುಜುಗರ ಉಂಟುಮಾಡಿದೆ. ಅವರು ಕೈ ಬಿಟ್ಟಾಗ ತಾವೂ ಹೊರಬರುವ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿರಿಯ ಸಂಸದ ಪ್ರಕಾಶ ಹುಕ್ಕೇರಿ ಈಗ ಯು ಟರ್ನ ಆಗಿದ್ದಾರೆ.

Image result for sm krishna
Source: Coastal Digest

ಸಿಎಂ ಸಿದ್ದರಾಮಯ್ಯರನ್ನು ಸದಾ ಟೀಕಿಸುತ್ತಲೇ ಬಂದಿದ್ದ, ಪ್ರತಿ ನಿರ್ಧಾರಕ್ಕೂ ಹರಿಹಾಯುವ ಹಳೆ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿ ಕೃಷ್ಣ ಪಕ್ಷ ಬಿಟ್ಟಿದ್ದು ತಪ್ಪು ಎಂದು ವ್ಯಾಖ್ಯಾನಿಸಿದ್ದಾರೆ. ಇದರಂತೆ ಇನ್ನೋರ್ವ ಹಿರಿಯ ಧುರೀಣ ಜಾಫರ್ ಶರೀಫ್ ಕೂಡ ಕೃಷ್ಣ ಧೋರಣೆಯ ಕುರಿತು ಅಪಸ್ವರ ಎತ್ತಿದ್ದಾರೆ. ಅವರ ಕೋಪ ಸಿದ್ದು ಮೇಲೆ ಇದ್ದರೂ ಪಕ್ಷದ ಮೇಲಿಲ್ಲ. ಹೈಕಮಾಂಡ್ ಪಕ್ಷ ಉಳಿಸಲು ಸಿದ್ದರಾಮಯ್ಯರನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಖುದ್ದು ಕರ್ನಾಟಕ ರಾಜಕೀಯದತ್ತ ಚಿತ್ತ ಹರಿಸಬೇಕೆಂಬುದು ಅವರ ಅಭಿಪ್ರಾಯವಾಗಿದೆ.

ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಕೃಷ್ಣ ಮನ ಒಲಿಸಲು ಅವರ ಶಿಷ್ಯಂದಿರಾದ ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ ಮಾಡಿದ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಅವರ ಕಣ್ಣೀರಿಗೂ ಕೃಷ್ಣ ಮನಸ್ಸು ಕರಗಿಲ್ಲ. ಅವರ ಬೆಂಬಲಾರ್ಥ ಹಲವು ಮರಿ ಪುಢಾರಿಗಳು ರಾಜೀನಾಮೆ ಕೊಟ್ಟಿರಬಹುದು. ಆದರೆ ಗರಡಿಯಲ್ಲಿ ಬೆಳೆದ ನಾಯಕರು ಲಿಪ್ ಸಿಂಪಥಿ ತೋರಿಸಿದ್ದು ಸತ್ಯ.

Image result for sm krishna
Source: India Today

ಕೃಷ್ಣ ರಾಜೀನಾಮೆ ಕೊಟ್ಟ ಬೆನ್ನಲ್ಲೆ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದ ನಾಯಕರು ಕೃಷ್ಣ ಬಿಜೆಪಿಗೆ ಬರುತ್ತಾರೆ ಎಂದು ಅಲ್ಲಲ್ಲಿ ಹೇಳಿಕೆ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೃಷ್ಣ ಬಿಜೆಪಿ ಸೇರುವುದು ಖಚಿತ ಎಂದು ಹೇಳಿಕೆ ನೀಡಿದರಾದರೂ ಅದಕ್ಕೆ ಸ್ಪಂದನೆ ಇಲ್ಲ. ಕೃಷ್ಣ ಮಾತ್ರ ತಮ್ಮ ಬಾಗಿಲು ಬಂದ್ ಮಾಡಿ ಇತ್ತ ಕಾಂಗ್ರೆಸ್ ನಾಯಕರಿಗೂ ಸಿಗುತ್ತಿಲ್ಲ, ಅತ್ತ ಬಿಜೆಪಿ ನಾಯಕರತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಅವರ ಮುಂದಿನ ನಡೆ ಏನು? ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.