ಈ ಸೂತ್ರಗಳನ್ನು ಪಾಲಿಸಿದರೆ ಯಾರು ಬೇಕಾದರೂ ಬುದ್ದಿವಂತರಾಗಬಹುದು!!

0
1653

ಬುದ್ಧಿವಂತಕೆ ಸೂತ್ರಗಳು

ಬುದ್ಧಿವಂತಿಕೆ ಎನ್ನುವುದು ಹುಟ್ಟಿನಿಂದ ಬರುವುದು. ತಕ್ಕಮಟ್ಟಿಗೆ ಅದರ ಬದಲಾವಣೆ ಸಾಧ್ಯ – ಎನ್ನುವುದಾದರೆ, ಅದನ್ನು ಹೆಚ್ಚಿಸಿಕೊಳ್ಳುವ ನಿರ್ದಿಷ್ಟ ವಿಧಾನವೂ ಇರಬೇಕಲ್ಲ? ಅದ್ಯಾವುದು?
ತಾತ್ಕಾಲಿಕವಾಗಿ, ಔಷಧೀಯ ವಿಧಾನಗಳಿಂದ (ಅದು ಅಪಾಯಕಾರಿ ಯಾದ್ದರಿಂದ ಅದರ ಬಗ್ಗೆ ಇಲ್ಲಿ ವಿವರಣೆ ನೀಡುತ್ತಿಲ್ಲ) ಯಾರು ಬೇಕಾದರೂ ತಮ್ಮ ಬುದ್ಧಿಶಕ್ತಿಯನ್ನು ಒಂದಿಷ್ಟು ಹೆಚ್ಚಿಸಿಕೊಳ್ಳಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ. ಆದರೆ ಆ ತರಹದ ಬುದ್ಧಿವಂತಿಕೆ ಶಾಶ್ವತವಲ್ಲ.

ನಿರಾಶೆ ಬೇಡ. ಸದಾ ಲವಲವಿಕೆ ಇರಬೇಕಾದರೆ, ಬುದ್ಧಿ ತೀಕ್ಷ್ಣವಾಗಿರಬೇಕಾದರೆ, ಚೆನ್ನಾಗಿ ನೆನಪಿರಬೇಕಾದರೆ, ಒಟ್ಟಿನಲ್ಲಿ `ಸ್ಮಾರ್ಟ್’ ಎನಿಸಿಕೊಳ್ಳಬೇಕಾದರೆ ತುಂಬ ಕಷ್ಟ ಪಡಬೇಕಿಲ್ಲ. ಒಳ್ಳೆಯ ಊಟ, ಒಳ್ಳೆಯ ವ್ಯಾಯಾಮ ಹಾಗೂ ಉತ್ತಮ ನಿದ್ರೆ ಸಿಕ್ಕರೆ ಸಾಕು. ಜೊತೆಗೆ ಶಿಸ್ತುಬದ್ಧವಾಗಿ ಕಲಿಯುವ, ಪಟ್ಟಾಗಿ ಕುಳಿತು ಓದುವ ಅಭ್ಯಾಸವೂ ಬೇಕು. ಸೋಮಾರಿತನ ಇರಬಾರದು.
ದೇಹದ, ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ದೈಹಿಕ ವ್ಯಾಯಾಮ ಹಾಗೂ ಆಟಗಳು ಅಗತ್ಯ. ಹೊರಾಂಗಣ ಆಟಗಳ ಜೊತೆಗೆ ಬುದ್ಧಿಗೆ ಸವಾಲು ಹಾಕುವ ಬೌದ್ಧಿಕ ವ್ಯಾಯಾಮ/ಆಟಗಳೂ ಬೇಕು. ಉತ್ತಮ ಪೌಷ್ಟಿಕ ಆಹಾರ ಬೇಕೇಬೇಕು. ಮಾನಸಿಕ ಒತ್ತಡ ಇರಬಾರದು. ಉತ್ತಮ ಹವ್ಯಾಸಗಳು ಇದ್ದರೆ ಒಳ್ಳೆಯದು.

ಇಷ್ಟೆಲ್ಲ ಇದ್ದರೆ ನೀವು ಸ್ಮಾರ್ಟ್!

ಯೋಗ, ವೇಗವಾಗಿ ನಡೆಯುವುದು, ಓಡುವುದು, ಈಜುವುದು, ಸೈಕಲ್ ಹೊಡೆಯುವುದು, ಟೆನಿಸ್, ಫುಟ್‍ಬಾಲ್, ಬ್ಯಾಸ್ಕೆಟ್ ಬಾಲ್ ಮುಂತಾದ ಆಟವಾಡುವುದು – ಇವುಗಳಲ್ಲಿ ಸಾಧ್ಯವಾದ ಎಲ್ಲವನ್ನೂ ಮಾಡಿರಿ. ಹೊಸದನ್ನು ತಿಳಿದುಕೊಳ್ಳುವ ಕುತೂಹಲ ಸದಾ ಇರಬೇಕು. ಓದುವ ಅಭ್ಯಾಸ ಬಹಳ ಮುಖ್ಯ.
ಕಂಪ್ಯೂಟರ್ ಗೇಮ್ಸ್‍ಗಳು ಐಕ್ಯೂ ಹೆಚ್ಚಿಸುತ್ತವೆ ಎಂಬ ಅಂಶ ಈಚೆಗೆ ವೈಜ್ಞಾನಿಕವಾಗಿ ಸಾಬೀತಾಗಿದೆ. ಅವಕಾಶವಿದ್ದವರು ಒಂದಿಷ್ಟು ಸಮಯವನ್ನು ಅದಕ್ಕೂ ಮೀಸಲಿಟ್ಟು ಹಿತಮಿತವಾಗಿ ಆಡಬಹುದು. ಕಂಪ್ಯೂಟರಿನಲ್ಲೂ ಬುದ್ಧಿಗೆ ಸವಾಲು ಒಡ್ಡುವ ಪಜಲ್ ಆಟಗಳಿರುತ್ತವೆ. ತಿಳಿವಳಿಕೆ ನೀಡುವ ಎನ್‍ಸೈಕ್ಲೊಪೀಡಿಯಾಗಳಿರುತ್ತವೆ. ಅವುಗಳನ್ನು ಬಳಸಬಹುದು. ದಿನವೂ ಇಂತಿಷ್ಟು ಹೊತ್ತು ಎಂದು ನಿಗದಿ ಮಾಡಿಕೊಂಡು ಚೆಸ್, ಸುಡೊಕು, ಪದಬಂಧ ಮುಂತಾದ ಬುದ್ಧಿಗೆ ಕಸರತ್ತು ನೀಡುವ ಆಟಗಳನ್ನು ಆಡಬಹುದು. ಚಿತ್ರಕಲೆ, ಸಂಗೀತ, ಕಸೂತಿ, ಅಡುಗೆ ಹೀಗೆ ಆಸಕ್ತಿ ಇರುವ ಯಾವುದನ್ನಾದರೂ ಸತತ ಅಭ್ಯಾಸ ಮಾಡುತ್ತಿರಬೇಕು.

ವೈವಿಧ್ಯಮಯವಾದ ಆಹಾರ ಸೇವನೆ ಶರೀರದ ಹಾಗೂ ಬುದ್ಧಿಯ ಬೆಳವಣಿಗೆಗೆ ಅತಿ ಮುಖ್ಯ. ಕಾಳುಗಳು, ಸೊಪ್ಪುಗಳು, ತರಕಾರಿಗಳು, ಬೇಳೆಗಳು, ಹಣ್ಣುಗಳು, ಧಾನ್ಯಗಳು, ಹಾಲು, ಮೊಸರು – ಹೀಗೆ ಸಮತೋಲಿತ ಆಹಾರ ತೆಗೆದುಕೊಳ್ಳಿ. ಧೂಮಪಾನ, ಮದ್ಯಪಾನ, ಕೋಲಾಗಳು, ಚಾಕೊಲೇಟ್‍ಗಳು, ಕಾಫಿ, ಟೀ, ಬಿಸ್ಕತ್ತುಗಳು, ಐಸ್‍ಕ್ರೀಂ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು (`ಜಂಕ್ ಫೂಡ್ ಐಟೆಮ್ಸ್’), ಅಪಾಯಕಾರಿ ರಾಸಾಯನಿಕಗಳನ್ನು ಸಾಧ್ಯವಾದಷ್ಟೂ ದೂರವಿಡಿ.

`ಮಾನಸಿಕ ಒತ್ತಡ’ ಎಲ್ಲ ವಯಸ್ಸಿನವರನ್ನೂ ಕಾಡುವ ಸಮಸ್ಯೆ. ದೇಹಕ್ಕೆ ಅಥವಾ ಮನಸ್ಸಿಗೆ ಆಗುವ ಎಲ್ಲ ರೀತಿಯ ಆಯಾಸಗಳನ್ನು ಒತ್ತಡ (ಸ್ಟ್ರೆಸ್) ಎನ್ನುತ್ತಾರೆ. ಏನಾದರೂ ಕೆಲಸಮಾಡಿ ದಣಿದಾಗ, ಬೇಡದ ಸಂಗತಿಗಳಲ್ಲಿ ತೊಡಗಿಕೊಂಡಾಗ, ಯಾವುದನ್ನಾದರೂ ಅತಿಯಾಗಿ ಮಾಡಿದಾಗ ಒತ್ತಡ ಉಂಟಾಗುತ್ತದೆ. ಬೇಜಾರು, ಕೋಪ, ದುಃಖ, ಭಯ, ಗಾಬರಿ, ಆತುರ, ಅಸಹಾಯಕ (ಏನೂ ಮಾಡಲಾಗದ) ಭಾವನೆ – ಹೀಗೆ ಅನೇಕ ಭಾವನೆಗಳು ಕೆಲವರಲ್ಲಿ ಉಂಟಾಗಬಹುದು. ಮೇಲೆ ಹೇಳಿದಂತೆ ದೈಹಿಕ ಹಾಗೂ ಬೌದ್ಧಿಕ ಚಟುವಟಿಕೆ ಇಟ್ಟುಕೊಂಡವರಿಗೆ ಒತ್ತಡವನ್ನು ನಿಭಾಯಿಸುವುದು ಸುಲಭ. ಒತ್ತಡವಿಲ್ಲದ ಮನಸ್ಸು ಸಂತೋಷವಾಗಿ, ಚುರುಕಾಗಿ ಇರುತ್ತದೆ.

ಜೀವನದಲ್ಲಿ ನಂಬಿಕೆ ಇರಬೇಕು. ಚೆನ್ನಾಗಿ (ದಿನಕ್ಕೆ ಎಂಟು ಗಂಟೆಗಳು) ನಿದ್ರೆ ಮಾಡಬೇಕು. ಧ್ಯಾನ ಮಾಡಿದರೆ ಏಕಾಗ್ರತೆ ಬರುತ್ತದೆ. ಮನಸ್ಸು, ಬುದ್ಧಿ ಚುರುಕಾಗುತ್ತವೆ. ಲವಲವಿಕೆ ಬರುತ್ತದೆ. ಆದರೆ ಸರಿಯಾಗಿ ಧ್ಯಾನ ಮಾಡಲು ತಿಳಿದವರ ಮಾರ್ಗದರ್ಶನ ಅಗತ್ಯ.
ಇವೆಲ್ಲ ದಿನವೂ ಮನೆಗಳಲ್ಲಿ ಅನೇಕರು ಮಾಡುತ್ತಿರುವ, ಮಾಡಬಹುದಾದ ಸರಳ, ಸಾಮಾನ್ಯ ವಿಷಯಗಳು. ಅದನ್ನು ಅನುಸರಿಸುವುದರಿಂದ ನಾವೂ `ಸ್ಮಾರ್ಟ್’ ಆಗಬಹುದು. ಇಷ್ಟನ್ನು ಬಿಟ್ಟರೆ ಇನ್ಯಾವ ಶಾರ್ಟ್‍ಕಟ್ ಮಾರ್ಗವೂ ಇಲ್ಲ. ಜಾಹೀರಾತುಗಳನ್ನು ನಂಬಿ ಮೋಸಹೋಗಬೇಡಿ.