ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಪತಿ ವಿರುದ್ಧ ಭೂಕಬಳಿಕೆ ಆರೋಪ..!

0
461

 ಭೋಪಾಲ್: ಕೇಂದ್ರ ಸಚಿವೆ ಪತಿ ಝುಬಿನ್ ಇರಾನಿ ಅವರು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ಶಾಲೆಗೆ ಸೇರಿದ ಭೂಮಿ ಕಬಳಿಸಿದ್ದಾರೆ ಎಂದು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರೊಬ್ಬರು ಆರೋಪ ಮಾಡಿದ್ದಾರೆ.

ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಪತಿ ಝುಬಿನ್ ಇರಾನಿ ಅವರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ.

ಝುಬಿನ್ ಇರಾನಿ ಅವರು ನಿರ್ದೇಶಕರಾಗಿರುವ ಕಂಪನಿಯು ಬಾಂದವ್ಗಡ್ ರಾಷ್ಟ್ರೀಯ ಉದ್ಯಾನದ ಸಮೀಪದ ಕುಚವಹಿ ಗ್ರಾಮದಲ್ಲಿರುವ ಶಾಲಾ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಮುಖ್ಯ ಶಿಕ್ಷಕಿ ಜಾನಕಿ ಪ್ರಸಾದ್ ತಿವಾರಿ ಅವರು ಆರೋಪಿಸಿದ್ದು, ಈ ಕುರಿತು ಜಿಲ್ಲಾ ಆಡಳಿತ ತನಿಖೆಗೆ ಆದೇಶಿಸಿದೆ.

ರಕ್ಷಣೆಗೆ ಹಾಕಿರುವ ಬೇಲಿಯನ್ನು ಉಲ್ಲಂಘಿಸಿ ಐದು ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಈ ಕುರಿತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನು ಕೂಡ ವಿಚಾರಣೆ ನಡೆಸಲಾಗಿದೆ. ಭೂಮಿಯ ಮಾಲೀಕನೆಂದು ಹೇಳಿಕೊಂಡಿರುವ ಹಜಾರಿ ಬನಿ ಕಳೆದ 5 ವರ್ಷಗಳಿಂದ ಕಾಣೆಯಾಗಿದ್ದಾನೆ. ಇನ್ನು ಖರೀದಿಸಿರುವ ಭೂಮಿಯಲ್ಲಿ ನಿರ್ಮಿಸಲಾಗಿರುವ ಹೋಟೆಲ್​​ಗೆ ಜುಬಿನ್ ಕೂಡ ನಿರ್ದೇಶಕರಾಗಿದ್ದಾರೆ.

ಇನ್ನು ಈ ಭೂಮಿಯನ್ನು ಜೈಕರಣ್ ಬನಿ ಹೆಸರಿಗೆ ವರ್ಗಾವಣೆ ಮಾಡಲಾಗಿದ್ದು, ಅದರ ನಂತರ ಜುಬಿನ್ ಇರಾನಿ ಗ್ರೂಪ್ಸ್​​ಗೆ ಮಾರುವ ಮುನ್ನ ಅಕ್ರಮವಾಗಿ ರಾಮ್​​ಸುಮೇರ್ ಶುಕ್ಲಾ ಅವರ ಹೆಸರಿನಲ್ಲಿ ಕೊಳ್ಳಲಾಗಿದೆ ಎಂದು ಕೂಡ ವರದಿಯಾಗಿದೆ.

ಫೆನ್ಸಿಂಗ್ ಹಾಕಿದ ಸುಮಾರು 5 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಜಾನಕಿ ಪ್ರಸಾದ್ ತಿವಾರಿ ಅವರು ದೂರಿದ್ದಾರೆ. ಅಲ್ಲದೆ ತನೆಗೆ ಸೇರಿದ ಈ 5 ಎಕರೆ ಜಮೀನನ್ನು ಖರೀದಿ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.