ಯೋಧರ ಪತ್ನಿಯರ ಸಾಹಸ! ಹೆಂಗಸರು, ಮಕ್ಕಳನ್ನು ಒತ್ತೆಯಾಗಿಸುವ ಉಗ್ರರ ಯತ್ನ ವಿಫಲ

0
611

ದೇಶ ಕಾಯುವ ಪರಿಸ್ಥಿತಿ ಬಂದಾಗ ಒಬವ್ವನಂತೆ ರಣರಂಗದಲ್ಲಿ ಶತ್ರುಗಳ ರುಂಡ ಚೆಂಡಾಡಿದ ವೀರ ವನಿತೆಯರು ಸಾಕಷ್ಟು ಮಂದಿ ಇದ್ದಾರೆ. ಪತಿ ಗಡಿಯಲ್ಲಿ ದೇಶ ಕಾಯುತ್ತಿದ್ದರೆ ಆತನಿಗಾಗಿ ಜೀವನ ತ್ಯಾಗ ಮಾಡುವ ಪತ್ನಿಯರ ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಒಂದು ತಾಜಾ ಉದಾಹರಣೆ ಅಂದರೆ ನಾಗ್ರೋಟಾದಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಒತ್ತೆಯಾಗಿಸಿಕೊಳ್ಳುವ ಉಗ್ರರ ಸಂಚನ್ನು ಸೈನಿಕರ ಪತ್ನಿಯರು ವಿಫಲಗೊಳಿಸಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಜಮ್ಮುವಿನಿಂದ 20 ಕಿ.ಮೀ. ದೂರದಲ್ಲಿರುವ ನಾಗ್ರೋಟಾ ಸೈನಿಕರ ನೆಲೆ ಮೇಲೆ ದಾಳಿ ಮಾಡಿದ ಉಗ್ರರ ದಾಳಿಯಲ್ಲಿ 3 ಯೋಧರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಯೋಧರು ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಉಗ್ರರು ಸೈನಿಕರ ಮೇಲೆ ದಾಳಿ ಮಾಡುವ ಮುನ್ನ ಸೈನಿಕರ ಕುಟುಂಬ ವಾಸವಿದ್ದ ಕ್ವಾಟರ್ಸ್ ಗೆ ನುಗ್ಗಿ ಅಧಿಕಾರಿಗಳ ಪತ್ನಿಯರು ಹಾಗೂ ಮಕ್ಕಳನ್ನು ಒತ್ತೆಯಾಳು ಮಾಡಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದರು. ಆದರೆ ಇಬ್ಬರು ಸೈನಿಕರ ಪತ್ನಿಯರು ಸಾಹಸ ಮೆರೆಯುವ ಮೂಲಕ ಉಗ್ರರ ಸಂಚನ್ನು ವಿಫಲಗೊಳಿಸಿದರು.

ಹೌದು, ನಸುಕಿನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಆಗಮಿಸಿದ್ದ ಉಗ್ರರು, ಸೈನಿಕರ ಕುಟುಂಬಗಳು ನೆಲೆಸಿದ್ದ ಕ್ವಾಟರ್ಸ್ ನೊಳಗೆ ಪ್ರವೇಶಿಸಿದ್ದರು. ಆಗ ನವಜಾತ ಶಿಶುಗಳೊಂದಿಗೆ ಇದ್ದ ಇಬ್ಬರು ಸೈನಿಕರ ಪತ್ನಿಯರು ಮನೆಯ ಗೃಹಪಯೋಗಿ ವಸ್ತುಗಳನ್ನೇ ತೂರಿ ಆತ್ಮರಕ್ಷಣೆ ಮಾಡಿಕೊಳ್ಳುವ ಜೊತೆಗೆ ಉಗ್ರರನ್ನು ಓಡಿಸುವಲ್ಲಿ ಯಶಸ್ವಿಯಾದರು.

ಕ್ವಾಟರ್ಸ್ ಒಳಗೆ ಕಾವಲು ಕಾಯಲು ಈ ಇಬ್ಬರು ಮಹಿಳೆಯರಿಗೆ ಹೇಳಲಾಗಿತ್ತು. ರಾತ್ರಿ ಪಾಳಿ ಮಾಡುತ್ತಿದ್ದ ಇವರಿಬ್ಬರು ಉಗ್ರರು ಒಳ ನುಗ್ಗಲು ಯತ್ನಿಸುತ್ತಿರುವುದರ ಸುಳಿವು ಹಿಡಿದ ಕೂಡಲೇ ಮನೆಯಲ್ಲಿದ್ದ ವಸ್ತುಗಳನ್ನು ಎಸೆದು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಂಡರು. ಒಂದು ವೇಳೆ ಉಗ್ರರು ತಮ್ಮ ಸಂಚು ಯಶಸ್ಸುಗೊಳಿಸಿದ್ದರೆ ಭಾರೀ ಪ್ರಮಾಣದ ಹಾನಿಯಾಗುತ್ತಿತ್ತು. ಆದರೆ ಇವರ ಧೈರ್ಯ- ಸಾಹಸ ಸೈನಿಕರ ವಿಶ್ವಾಸ ಹೆಚ್ಚಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಮಗುವಿಗೆ ೧೮ ತಿಂಗಳಾದರೆ, ಮತ್ತೊಂದು ಮಗುವಿಗೆ ೨ ತಿಂಗಳಷ್ಟೇ ಆಗಿತ್ತು. ಆದರೆ ಈ ಇಬ್ಬರು ಮಹಿಳೆಯರ ಹೆಸರು ಬಹಿರಂಗಡಿಸಲಾಗಿಲ್ಲ.