ಅಸಿಡಿಟಿ ಸಮಸ್ಯೆಗೆ ಸಿಕ್ಕ ಸಿಕ್ಕ ಮಾತ್ರೆ ಸೇವಿಸುವ ಬದಲು ಈ ಸುಲಭ ಮನೆಮದ್ದುಗಳನ್ನು ಪಾಲಿಸಿ, ತಕ್ಷಣ ಪರಿಹಾರ ಸಿಗುತ್ತೆ..

0
4136

ಅಸಿಡಿಟಿ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹಾಗಂತ ಇದು ದೊಡ್ಡ ಕಾಯಿಲೆ ಏನೂ ಅಲ್ಲ, ಹಾಗೆ ಉತ್ತಮ ಆರೋಗ್ಯದ ಸಂಕೇತವೂ ಅಲ್ಲ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಅಸಿಡಿಟಿ ಎಂದು ಕರೆಯಲಾಗಿದೆ. ಅಸಿಡಿಟಿಯಿಂದ ಹೊಟ್ಟೆ ಉರಿ, ಹೊಟ್ಟೆ ನೋವು, ಕೆಟ್ಟ ಅನಿಲ ಬಿಡುಗಡೆ ಅಥವಾ ಗ್ಯಾಸ್ ಹುಳಿತೇಗು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಆದರೆ ಅದನ್ನು ನಿರ್ಲಕ್ಷಿಸಿದರೆ ಅಪಾಯ ಜಾಸ್ತಿ. ಹಾಗೇ ಸರಿಯಾದ ಸಮಯಕ್ಕೆ ಅಸಿಡಿಟಿಗೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದಲ್ಲಿ ಸಮಸ್ಯೆ ಉಲ್ಭಣವಾಗಬಹುದು. ಅಸಿಡಿಟಿ ನಿವಾರಣೆಗೆ ಕೆಲವು ಸರಳ ಸುಲಭೋಪಾಯಗಳು ಇಲ್ಲಿ ಸೂಚಿಸಲಾಗಿದೆ.

  • ಸ್ವಲ್ಪ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಜೊತೆಯಲ್ಲಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಅಸಿಡಿಟಿಯ ನೋವು ಶಮನವಾಗುತ್ತದೆ.
  • ಪುದೀನಾ ದಲ್ಲಿ ಆಕ್ರಲಿಕ್ ಆಸಿಡ್, ಕಬ್ಬಿಣ ಸತ್ವ, ವಿಟಮಿನ್ ಎ,ಬಿ,ಸಿ ಸತ್ವಗಳು ಮತ್ತು ರಂಜಕ ಅಧಿಕವಾಗಿರುವುದರಿಂದ ಹೊಟ್ಟೆ ಉರಿ, ಅಜೀರ್ಣ ಕ್ಕೆಲ್ಲ ಇದು ರಾಮಬಾಣ. ಹಾಗು ಒಂದು ಚಮಚ ಪುದೀನಾ ರಸಕ್ಕೆ 1/2 ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಎದೆ ಉರಿ ನಿವಾರಣೆಯಾಗುತ್ತದೆ.
  • ಜೀರಿಗೆ ಉತ್ತಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುವ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ. ಅಸಿಡಿಟಿಯಿಂದಾಗಿ ಬರುವ ಹೊಟ್ಟೆ ಉರಿ ಇದ್ದಲ್ಲಿ ಖಾಲಿ ಹೊಟ್ಟೆಯಿಂದ ಸಮಪ್ರಮಾಣದ ಹುರಿದ ಜೀರಿಗೆ ಮತ್ತು ಒಣಗಿಸಿದ ಬೆಲ್ಲ ಹಾಗೂ ತುಪ್ಪ ಸೇವಿಸಬೇಕು.

  • ಕೊತ್ತಂಬರಿ ಬೀಜ ಮತ್ತು ಒಣಶುಂಠಿಯ ಕಷಾಯ ತಯಾರಿಸಿ ಸೇವಿಸಿದರೆ ಅಸಿಡಿಟಿಯಿಂದಾಗುವ ಹೊಟ್ಟೆನೋವು ಗುಣವಾಗುವದು. ಮತ್ತು ಒಂದು ಚಮಚ ಕೊತ್ತಂಬರಿ ಬೀಜವನ್ನು ಎರಡು ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ. ನಂತರ ಸೋಸಿದ ನೀರನ್ನು ಕುಡಿದರೆ ಅಸಿಡಿಟಿ ಸಂಪೂರ್ಣವಾಗಿ ಗುಣವಾಗುತ್ತದೆ.
  • ನಿಂಬೆಯಲ್ಲಿ ಲ್ಯಾಕ್ಟಿಕ್ ಆಮ್ಲವು ಹೆಚ್ಚಾಗಿದ್ದು, ಇದು ಹೊಟ್ಟೆಯಲ್ಲಿನ ಅತಿಯಾದ ಆಮ್ಲತೆಯನ್ನು ಸರಿಪಡಿಸುತ್ತದೆ. ಒಂದು ನಿಂಬೆ ರಸಕ್ಕೆ 5 ಗ್ರಾಂ ಸಕ್ಕರೆ ಕಲಸಿ ಸೇವಿಸಿದರೆ ಎದೆ ಉರಿ ಕಡಿಮೆಯಾಗುತ್ತದೆ.
  • ಪಾನ್ ಬೀಡಾದ ಸಿಹಿ ‘ಗುಲ್ಕಂದ್’ ಕಳಪೆ ಆಹಾರದ ಸೇವನೆ ಮೊದಲಾದ ಕಾರಣಗಳಿಂದ ಉಂಟಾಗುವ ಆಮ್ಲೀಯತೆಯನ್ನು ತಕ್ಷಣ ಕಡಿಮೆಮಾಡುತ್ತದೆ. ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.
  • ತನ್ನೊಳಗೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಬೂದುಕುಂಬಳದ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಖಾಲಿ ಹೊಟ್ಟೆಗೆ ಕುಡಿದರೆ ಅಸಿಡಿಟಿ ತಕ್ಷಣವೇ ಗುಣವಾಗುತ್ತದೆ.
  • ರಾತ್ರಿ ನೀರಿನಲ್ಲಿ 10 ಗ್ರಾಂ ಒಣ ದ್ರಾಕ್ಷಿ ಹಾಗೂ 5 ಗ್ರಾಂ ಸೊಂಪು ಎರಡನ್ನೂ ನೆನೆಸಿ ಬೆಳಗ್ಗೆ ಅದನ್ನು ಕಲಸಿ ಸೇವಿಸಿದರೆ ಹೊಟ್ಟೆಯ ಮೇಲಾಗುವ ಗ್ಯಾಸ್ಟ್ರಿಕ್ ಆಮ್ಲಗಳ ಪರಿಣಾಮಗಳನ್ನು ಕಡಿಮೆ ಮಾಡಿ ಅಸಿಡಿಟಿ ನಿವಾರಣೆಯಾಗುತ್ತದೆ.