ಮನಸ್ಸಿನ ಮೇಲೆ ನಿಯಂತ್ರಣ ತಂದುಕೊಳ್ಳುವುದು ಹೇಗೆ??

0
2933

ಮನಸ್ಸು, ಮುಗ್ಧ ಮನಸ್ಸು..
ಮನಸ್ಸಿನ ಮೇಲೆ ಐದು ವಿಷಯಗಳು ಪ್ರಭಾವಗೊಳಿಸುತ್ತವೆ. ಅದುವೇ ಸ್ಥಳ, ಕಾಲ, ಆಹಾರ, ಗತದ ಸಂಸ್ಕಾರಗಳು ಮತ್ತು ಸಂಘ ಮತ್ತು ಕೃತ್ಯಗಳು…
ಸ್ಥಳ : ನೀವಿರುವ ಪ್ರತಿಯೊಂದು ಸ್ಥಳವೂ ಮನಸ್ಸಿನ ಮೇಲೆ ವಿವಿಧ ರೀತಿಯ ಪ್ರಭಾವವನ್ನು ಬೀರುತ್ತದೆ. ನಿಮ್ಮ ಮನೆಯಲ್ಲೂ ಗಮನಿಸಿದರೆ, ವಿವಿಧ ಕೋಣೆಗಳಲ್ಲಿ ಬೇರೆ ಬೇರೆ ರೀತಿಯಾಗಿ ಅನಿಸುತ್ತದೆ. ಹಾಡಿ, ಮಂತ್ರೋಚ್ಚಾರಣೆ ಮತ್ತು ಧ್ಯಾನ ಮಾಡಿದ ಸ್ಥಳವು ಮನಸ್ಸಿನ ಮೇಲೆ ಬೇರೆ ರೀತಿಯ ಪ್ರಭಾವವನ್ನು ಉಂಟು ಮಾಡಿದರೆ, ಜಗಳಗಳಾದ, ಅಲ್ಲೋಲಕಲ್ಲೋಲವಿರುವ ಸ್ಥಳವು ಮತ್ತೊಂದು ರೀತಿಯ ಪ್ರಭಾವವನ್ನು ಬೀರುತ್ತದೆ.
ಕಾಲ : ದಿನದ ವಿವಿಧ ಸಮಯಗಳು ಮತ್ತು ವರ್ಷದ ವಿವಿಧ ಸಮಯಗಳು ಮನಸ್ಸಿನ ಮೇಲೆ ವಿವಿಧ ರೀತಿಗಳಲ್ಲಿ ಪ್ರಭಾವವನ್ನು ಬೀರುತ್ತವೆ.
ಆಹಾರ : ನೀವು ತಿನ್ನುವ ವಿವಿಧ ರೀತಿಯ ಆಹಾರಗಳು ಮನಸ್ಸಿನ ಮೇಲೆ ಅನೇಕ ದಿವಸಗಳವರೆಗೆ ಪ್ರಭಾವವನ್ನು ಬೀರುತ್ತವೆ.
ಗತದ ಸಂಸ್ಕಾರಗಳು : ಕರ್ಮ ಮನಸ್ಸಿನ ಮೇಲೆ ವಿವಿಧ ರೀತಿಗಳಲ್ಲಿ ಪ್ರಭಾವವನ್ನು ಬೀರುತ್ತವೆ. ಅರಿವಿನಿಂದ, ಜಾಗೃತಿಯಿಂದ, ಜ್ಞಾನದಿಂದ ಮತ್ತು ಧ್ಯಾನದಿಂದ ಗತದ ಕರ್ಮಗಳನ್ನು ಅಳಿಸಿಬಿಡಬಹುದು.
ಸಂಘ ಮತ್ತು ಕೃತ್ಯಗಳು : ಜನರು ಮತ್ತು ನೀವು ಸಂಬಂಧಪಟ್ಟಿರುವ ಘಟನೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಒಂದು ನಿರ್ದಿಷ್ಟವಾದ ಸಂಘದಲ್ಲಿ ನಿಮ್ಮ ಮನಸ್ಸು ಒಂದು ರೀತಿಯಾಗಿ ವರ್ತಿಸಿದರೆ, ಇತರರೊಡನೆ ನಿಮ್ಮ ಮನಸ್ಸು ಬೇರೆ ರೀತಿಯಾಗಿ ವರ್ತಿಸುತ್ತದೆ.
ಈ ಐದು ಅಂಶಗಳು ನಿಮ್ಮ ಜೀವನದ ಮೇಲೆ, ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಜ್ಞಾನದಲ್ಲಿ ನೀವು ಬೆಳೆದಂತೆ ಇವುಗಳ ಮೇಲೆ ನೀವು, ನಿಮ್ಮ ಪ್ರಭಾವವನ್ನು ಬೀರಬಹುದು.
ಯಾರೇ ನಮ್ಮ ಜೀವನದಲ್ಲಿ ಬಂದುಹೋದರೂ ಕೊನೆಗೆ ನೋವಾಗುವುದು ಮನಸ್ಸಿಗೆ. ದೇಹಕ್ಕಾದ ಪೆಟ್ಟುಗಳಿಗೆ ಔಷಧಿ ಹಚ್ಚಿ ವಾಸಿ ಮಾಡಿಕೊಳ್ಳಬಹುದು, ಆದರೆ ಮನಸ್ಸಿಗಾದ ಗಾಯಗಳನ್ನು ಹೇಗೆ ವಾಸಿಮಾಡಿಕೊಳ್ಳುವುದು? ನಮ್ಮ ಮನಸ್ಸಿಗೆ ಗಾಯ ಮಾಡಿದವರನ್ನು ನಾವು ಮರೆತಿದ್ದೇವೆ ಎಂದು ಹೊರಗಿನಿಂದ ತೋರ್ಪಡಿಸಿಕೊಂಡರೂ ಒಳಗಿನ ನೋವು ಸಾಯುವವರೆಗೂ ಇದ್ದೇ ಇರುತ್ತದೆ.

ಕಾಲ ಕಳೆದಂತೆ ಎಲ್ಲವನ್ನೂ ಮರೆತು ಮುಂದೆ ಸಾಗಬಹುದು, ಕಾಲಾಯ ತಸ್ಮೈ ನಮಃ, ಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯಮಾಡಿ ಮುಂದೆ ಸಾಗುತ್ತೇವೆ. ಅದು ನಿಜವೇ. ಕಾಲ ಜೀವನದ ಪಾಠ ಕಲಿಸುತ್ತದೆ, ಆದರೆ ಮನಸ್ಸಿನೊಳಗೆ ಅಡಗಿರುವ ನೋವು ಕಾಲದ ಜೊತೆ ಸಹ ಸಾಯುವುದಿಲ್ಲ, ಅದು ಸಾಯವುದು ನಾವು ಸತ್ತಾಗಲೇ. ನಾವು ನೋವನ್ನು ಎಷ್ಟೇ ಮರೆತಿದ್ದೇವೆಂದು ಸುಮ್ಮನಿದ್ದರೂ ಒಂದಲ್ಲಾ ಒಂದು ದಿನ ಸಡನ್ನಾಗಿ ಮನಸ್ಸಿನೊಳಗೆ ತೊಳಲಾಟವನ್ನುಂಟು ಮಾಡುತ್ತದೆ. ಇಷ್ಟು ಹಿಂಸೆ ಕೊಡುವ ನೋವುಗಳಿಗೆ ಉತ್ತರವೇ ಇಲ್ಲವೇ ಅಂತ ಯೋಚಿಸಿದರೆ ಕೆಲವು ನೋವುಗಳಿಗೆ ಉತ್ತರ ಸಿಗುವುದು ಕಷ್ಟವೇ.