ಸೌಂದರ್ಯದ ಗಣಿ ! ಸುಂದರಿ ಸೌಂದರ್ಯ ಜನ್ಮದಿನ ಇಂದು.

0
827

ಬೆಂಗಳೂರು: ಒಮ್ಮೆ ನೋಡಿದ್ರೆ ಮತ್ತೆ ನೋಡಬೇಕೆನ್ನುವ ಮುಖ, ಮುದ್ದಾದ ನಗು, ಅಪಾರ ಚೆಲುವಿನ ಒಡತಿಯಾಗಿದ್ದ ನಟಿ ಸೌಂದರ್ಯ ಮರೆಯಾಗಿ ಹತ್ತು ವರ್ಷ ಕಳೆದಿದೆ.. ಸೌಂದರ್ಯದ ಗಣಿ ! ಸುಂದರಿ ಸೌಂದರ್ಯ ಜನ್ಮದಿನ ಇಂದು.

ಸೌಂದರ್ಯ ಎಂಬ ಹೆಸರು ಅದೆಷ್ಟು ಸೌಂದರ್ಯಯುತವಾದದ್ದು. ಈ ಸೌಂದರ್ಯ ಎಂಬುದು ಕೆಲವೊಂದು ವ್ಯಕ್ತಿಗಳಲ್ಲಿ ಅಪೂರ್ವವಾಗಿ ಹೊರಸೂಸುತ್ತದೆ. ಇಂತಹ ಸೌಂದರ್ಯವಂತರಲ್ಲಿ ತಮ್ಮ ರೂಪ, ಗುಣ, ಅಭಿರುಚಿ, ಘನತೆ, ಸಜ್ಜನಿಕೆ ಇತ್ಯಾದಿ ‘ಸಕಲಗುಣ ಸೌಂದರ್ಯವತಿ ಯಾಗಿ’ ಶೋಭಿಸಿದವರು ಸೌಂದರ್ಯ.  ಇಂದು ಇವರ ಜನ್ಮದಿನ.

ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಕೋಟಿ ಲಿಂಗೇಶ್ವರ ನಡುವೆ ಬರುವ ಗಂಜಿಗುಂಟದ ಕಾಶಿಪುರದ ಸೌಮ್ಯ ಚಿತ್ರರಂಗಕ್ಕೆ ಬಂದು ಸೌಂದರ್ಯ ಆಗಿದ್ದು. ನಟಿಯಾಗಿ ಬಹುಬೇಡಿಕೆಯಲ್ಲಿದ್ದಾಗಲೇ ಯಾವುದೇ ಅಧಿಕಾರ, ಅಂತಸ್ತು ಬಯಸದೆ ‘ಕಮಲ’ ಪಕ್ಷವನ್ನು ಮುಡಿಗೇರಿಸಿಕೊಂಡ ನಟಿ. ಆದರೆ, ಪಕ್ಷದ ಪ್ರಚಾರಕ್ಕೆ ಲೋಹದ ಹಕ್ಕಿಯಲ್ಲಿ ಹಾರಲು ಹೊರಟ ಸೌಂದರ್ಯ ಹಾರಿದಷ್ಟೇ ವೇಗವಾಗಿ ನೆಲಕ್ಕುರುಳಿದರು. ಸೌಂದರ್ಯ ಇಲ್ಲ ಎನ್ನುವ ಕಹಿ ಸುದ್ದಿಗೆ ಈಗ ಹತ್ತು ವರ್ಷ. ನಮ್ಮ ತಾರೆಯನ್ನು ಬಲಿ ಪಡೆದ ಚುನಾವಣೆ ಬರುತ್ತದೆ, ಹೋಗುತ್ತೆ. ಆದರೆ, ಸೌಂದರ್ಯ ಮಾತ್ರ ಸದಾ ನಮ್ಮ ನೆನಪಿನಲ್ಲಿರುತ್ತಾಳೆ.

ವೈದ್ಯೆಯಾಗ ಹೊರಟು ಸಿನಿಮಾಗೆ ಬಂದರು

ಸೌಂದರ್ಯದ ಖನಿ ಎಂಬಂತೆ ಶೋಭಿಸುತ್ತಿದ್ದ ಸೌಂದರ್ಯ ಅವರು ಹುಟ್ಟಿದ್ದು ಜುಲೈ 18, 1972ರ ವರ್ಷದಲ್ಲಿ. ಬದುಕು ವ್ಯಕ್ತಿಗಳ ಬದುಕನ್ನು ನಡೆಸುವ ಪರಿಯೇ ವಿಚಿತ್ರ. ಆಕೆ ಎಂ.ಬಿ.ಬಿ.ಎಸ್ ಓದುತ್ತಿದ್ದರು. ತಂದೆ ಚಿತ್ರ ನಿರ್ಮಾಪಕರು ಮತ್ತು ಲೇಖಕರು. ಮನೆಗೆ ಬಂದವರೊಬ್ಬರು ಚಿತ್ರದಲ್ಲಿ ನಟಿಸುವಂತೆ ಕೇಳಿದರು. ಒಂದು ಚಿತ್ರ ಎಂಬುದು ಎರಡು ಮೂರಾಗಿ ಕಡೆಗೆ ವಿದ್ಯಾಭ್ಯಾಸಕ್ಕೆ ಕೊನೆ ಹಾಡಿದರು.

ಕನ್ನಡ ಚಿತ್ರಗಳಲ್ಲಿ

ಸೌಂದರ್ಯ ಅವರು, ಕನ್ನಡದಲ್ಲಿ ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ ಮುಂತಾದ ಚಿತ್ರಗಳಿಗೆ ಆಗಾಗ ಬಂದು ಹೋಗಿದ್ದರು. ಅವರ ಕನ್ನಡದಲ್ಲಿನ ಮಹತ್ವದ ಪ್ರವೇಶವೆಂದರೆ ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರ. ಈ ಚಿತ್ರದ ನಿರ್ಮಾಪಕಿಯಾಗಿ ಮತ್ತು ನಟಿಯಾಗಿ ಅವರು ಕನ್ನಡಕ್ಕೆ ದೊರಕಿದ ಬಗೆಯನ್ನು ಸಾರಲೋ ಎಂಬಂತೆ ಆ ಚಿತ್ರ ಅತ್ಯುತ್ತಮ ಚಿತ್ರಕ್ಕೆ ನೀಡಲಾಗುವ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಗಳಿಸಿತು.

ಚಿತ್ರನಟಿಯಾಗಿ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಸ್ವಲ್ಪದರಲ್ಲಿ ಕೈತಪ್ಪಿತಾದರೂ ನಿರ್ಮಾಪಕಿಯಾಗಿ ಸ್ವರ್ಣಕಮಲ ಪ್ರಶಸ್ತಿಯನ್ನು ಗಳಿಸುವ ಗೌರವ ಅವರದಾಯಿತು. ಆ ಚಿತ್ರಕ್ಕಾಗಿನ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಂದಿತು. ದೋಣಿ ಸಾಗಲಿ ಚಿತ್ರಕ್ಕೆ ಸಹಾ ಅವರಿಗೆ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ ಸಂದಿತ್ತು.

ಕನ್ನಡದಲ್ಲಿ ಇವರು ನಟಿಸಿದ ಪ್ರಮುಖ ಚಿತ್ರಗಳು

  • ಸಿಪಾಯಿ
  • ತೂಗುವೆ ಕೃಷ್ಣನ
  • ದ್ವೀಪ
  • ನಾನು ನನ್ನ ಹೆಂಡ್ತೀರು
  • ಶ್ರೀಮಂಜುನಾಥ
  • ನಾಗದೇವತೆ
  • ಆರ್ಯಭಟ
  • ದೋಣಿ ಸಾಗಲಿ
  • ಆಪ್ತಮಿತ್ರ

ವಿದಿಬರಹದಲ್ಲಿ ಸೌಂದರ್ಯರ ಇತಿಶ್ರೀ

ಸೌಂದರ್ಯ ವಿಮಾನ ಅಪಘಾತದಲ್ಲಿ ಶನಿವಾರ ಬೆಳಗ್ಗೆ( ಏಪ್ರಿಲ್ 17, 2004ರ ದಿನದಂದು) ನಿಧನರಾದರು. ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ(Cessna-180 single engine aircraft)ದಲ್ಲಿ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಜಕ್ಕೂರಿನಲ್ಲಿ ಈ ಅಪಘಾತ ಸಂಭವಿಸಿದೆ.