ಒತ್ತಡಗಳ ಮಧ್ಯೆ ನೆಮ್ಮದಿ ಅರಸುತ್ತಿದ್ದರೆ ಈ ವೀಕೆಂಡ್ ಬೆಂಗಳೂರಿನ ಹೊರವಲಯದಲ್ಲಿರುವ ನವಗ್ರಹಗಳ ಬನ ಶ್ರೀಧರ ಶ್ರೀಗುಡ್ಡಕ್ಕೆ ತಪ್ಪದೇ ಭೇಟಿ ಕೊಡಿ..

0
1187

Kannada News | Karnataka Temple History

ಬೆಂಗಳೂರಿನಿಂದ ಸುಮಾರೂ ೨೦ ಕಿಮಿ ದೂರದಲ್ಲಿರುವ, ಉತ್ತರಹಳ್ಳಿಯಿಂದ ಕೆಂಗೇರಿಗೆ ಸಾಗುವ ರಸ್ತೆಯಲ್ಲಿ ಎಡಕ್ಕೆ ಶ್ರೀಧರ ಶ್ರೀಗುಡ್ಡವೆಂಬ ಸಣ್ಣ ನಾಮಫಲಕವೊಂದು ಕಣ್ಣಿಗೆ ಬೀಳುತ್ತದೆ. ಅಲ್ಲಿಂದ ಸುಮಾರು ಒಂದೂವರೆ ಕಿಮೀ ಪಯಣಿಸಿದ್ದಲ್ಲಿ ಆತ್ಮ ಸಂಶೋಧನಾ ಕೇಂದ್ರ ಶ್ರೀಧರ ಶ್ರೀಗುಡ್ಡವು ನಿಮ್ಮನ್ನು ಬರ ಮಾಡಿಕೊಳ್ಳುತ್ತದೆ.

ಭೂದೇವಿಯ  ಪಾದುಕೆಯಿಂದ ಅಲಂಕೃತಗೊಂಡ ಕರುಣಾಕ್ಷಿ ದೇವಿಯು ಶ್ರೀಚಕ್ರ ಸ್ವರೂಪಿಣಿಯಾಗಿ ಈ ಪ್ರಶಾಂತವಾದ ಏಕಾಂತ ಸ್ಥಳದಲ್ಲಿ ನೆಲೆಸಿದ್ದಾಳೆ. ಈ ದೇಗುಲದ ಎದುರಿಗೆ ಕರುಣೇಶ್ವರ ದೇವಸ್ಥಾನವಿದ್ದು, ಅಕ್ಕಪಕ್ಕದಲ್ಲಿ ಶ್ರೀ ಶಿವ ಶಕ್ತಿ ಚೈತನ್ಯ ಗಣಪತಿ ಹಾಗು ಸುಬ್ರಮಣ್ಯ ಸ್ವಾಮಿಯ ಮೂರ್ತಿಗಳನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಅತ್ಯಂತ ವಿಶಾಲವಾಗಿರುವ ದೇಗುಲದ ಪ್ರಾಂಗಣದ ಪರಿಸರವು ಇಲ್ಲಿನ ಮೌನವೇ ಪೂಜೆ ಎಂಬ ಮಾತನ್ನು ಪುನಃರುಚ್ಚರಿಸುತ್ತದೆ.

ಪ್ರವೇಶ ಚೀಟಿ ಪಡೆದು ಈ ದೇಗುಲಕ್ಕೆ ಹೊಂದಿಕೊಂಡಿರುವ ಗುಡ್ಡವನ್ನು ಏರಲು ಪ್ರಾರಂಭಿಸಿದ್ದಲ್ಲಿ ಇಕ್ಕೆಲಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ನಾವಾವರಣಗಳಿಂದ ಆವೃತವಾದ ನವಗ್ರಹಗಳ ಪ್ರತ್ಯೇಕವಾದ ಪುಟ್ಟ ಪುಟ್ಟ ಮಂದಿರಗಳು ಆಸ್ತಿಕರನ್ನು ಸ್ವಾಗತಿಸುತ್ತವೆ. ಇಲ್ಲಿ ಆಯಾ ಗ್ರಹಗಳಿಗೆ ಸಂಬಂಧಿಸಿದ ಶ್ಲೋಕ ಮತ್ತು ಗಿಡಗಳನ್ನು ಕಾಣಬಹುದು. ಹೀಗೆ ಇಡೀ ಗುಡ್ಡವು ಹಸಿರಿನಿಂದ ಕೂಡಿದ್ದು ಅತ್ಯಂತ ಶೋಭಾಯಮಾನವಾಗಿ ಕಾಣಿಸುತ್ತದೆ.ಗುಡ್ಡವೇರಿ ನಿಂತಲ್ಲಿ ಶ್ರೀ ಚಕ್ರ ಸ್ವರೂಪವು ರೂಪುಗೊಂಡಿರುವ ನಾವಾವರಣಗಳನ್ನೊಳಗೊಂಡ ಕಮಾನುಗಳಿಂದ ಇಡೀ ಗುಡ್ಡವು ಅತ್ಯಂತ ಶೋಭಾಯಮಾನವಾಗಿ ಪ್ರಜ್ವಲಿಸುತ್ತದೆ. ಗುಡ್ಡದ ಮೇಲಿನ ಸುತ್ತ ಮುತ್ತಲ ಪ್ರದೇಶದ ರಮ್ಯ ಪರಿಸರವು ಕಣ್ಣಿಗೆ ಹಬ್ಬ ನೀಡುತ್ತದೆ.

ಸುಮಾರು ೧೨ ವರ್ಷಗಳ ಹಿಂದೆ ನಿರ್ಜನವಾಗಿದ್ದ ಈ  ಗುಡ್ಡವು ಇಂದು ಪವಿತ್ರ ಕ್ಷೇತ್ರವಾಗಿ ಮಾರ್ಪಡಲು ಶ್ರೀ ಗುರುಮಾತಾ ಅಮ್ಮನವರೇ  ಕಾರಣ. ಈ ದಿವ್ಯ ಸನ್ನಿಧಿಯ ಆವರಣದಲ್ಲಿ ಮತ್ತು ಪಕ್ಕದ  ಗಾಯತ್ರಿ ಸಭಾಂಗಣದಲ್ಲಿ ಪ್ರತಿ ಭಾನುವಾರದಂದು ಪ್ರವಚನ, ಸತ್ಸಂಗ, ಉಪನ್ಯಾಸಗಳಿರುತ್ತವೆ. ಅತಿಥಿದೇವೋ ಭವಃ ಎಂಬ ಯುಕ್ತಿಯಂತೆ ಭಾನುವಾರ ಮತ್ತು ಶುಕ್ರವಾರದಂದು ಇಲ್ಲಿ ಅನ್ನದಾನ ವಿರುತ್ತದೆ. ಇಲ್ಲೊಂದು ವೇದ ವ್ಯಾಸ ಪೀಠವು ಸ್ಥಾಪನೆಯಾಗಿದ್ದು ಅಲ್ಲಿ ನಿತ್ಯ ವೇದ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಶ್ರೀಶಂಕರರಿಂದ ರಚಿತವಾದ ಸೌಂದರ್ಯಲಹರಿಯನ್ನು ಕಪ್ಪು ಶಿಲೆಗಳ ಮೇಲೆ ಸ್ಪುಟವಾಗಿ ಕೆತ್ತಲಾಗಿದೆ.
ಈ ಸನ್ನಿಧಿಯೂ ಬೆಳಿಗ್ಗೆ ೫ ರಿಂದ ೧೨ ಮತ್ತು ಸಂಜೆ ೫ ರಿಂದ ೮ ರ ವರೆಗೆ ಮಾತ್ರ ತೆರೆದಿರುತ್ತದೆ. ಭಾನುವಾರದಂದು ಮಧ್ಯಾಹ್ನ ೧.೩೦ ರ ವರೆಗೂ ತೆರೆದಿರುತ್ತಎ. ಸಂಜೆ ೬.೩೦ ರ ನಂತರ ಗುಡ್ಡವೇರಲು, ನವಗ್ರಹ ದರ್ಶನ ಮಾಡಲು ಅವಕಾಶವಿರುವುದಿಲ್ಲ.

ಏಕಾಂತತೆಗೆ, ಪ್ರಾಶಾಂತತೆಗೆ ತವಕಿಸುತ್ತಿರುವ ಮಹಾ ನಗರದ ಜನತೆಗೆ ಪ್ರಾಕೃತಿಕ ಹಾಗು ಆಧ್ಯಾತ್ಮಿಕ ಹಿನ್ನಲೆಯಿರುವ ಈ ಪೂಜ್ಯ ಸನ್ನಿಧಿಯೂ ನೆಮ್ಮದಿಯ, ಮನಃ ಶಾಂತಿಯ ದಿವ್ಯೋಷಧವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.

Also Read: ಚಾಲುಕ್ಯರು ಕಟ್ಟಿದ ಸೂರ್ಯ ಕುಂದ ದೇವಾಲಯದ ಮುಂದೆ ತಾಜ್ ಮಹಾಲ್ ಏನೇನು ಅಲ್ಲ.. ಈ ಅಧ್ಬುತ ದೇವಾಲಯವನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಿ..