ಶಿವ ಹಾಗೂ ಪಾರ್ವತಿಗೆಂದೇ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹಿನ್ನಲೆ.!

0
1537

ಶ್ರೀಶೈಲಂ / ಶ್ರೀ ಶೈಲ ಹಿಂದುಗಳಿಗೆ ಧಾರ್ಮಿಕ ಸಂಪ್ರದಾಯಕ್ಕೆ ಪ್ರಾಮುಖ್ಯತೆಯನ್ನು ಪಡೆದಿರುವ ಪುಟ್ಟ ಪಟ್ಟಣ. ಈ ಪಟ್ಟಣವನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದ ಮೇಲೆ ಕಾಣಬಹುದು. ಈ ನಗರವು ಕೃಷ್ಣಾ ನದಿಯ ತಟದಲ್ಲಿ ಸ್ಥಾಪಿತವಾಗಿದೆ. ಶ್ರೀ ಶೈಲಂ ಪಟ್ಟಣವು ಹಿಂದೂಗಳ ಪವಿತ್ರ ನಗರ ಎಂದು ಗುರುತಿಸಲ್ಪಟ್ಟಿದ್ದು, ಪ್ರತಿ ವರ್ಷ ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಯಾತ್ರಿಗಳು ಬರುತ್ತಾರೆ. ಕೃಷ್ಣ ನದಿಯನ್ನು ಪಾತಾಳ ಗಂಗೆ ಅಂತ ಕೂಡ ಕರಿಯಲಾಗುತ್ತದೆ. ಇಲ್ಲಿ ಬರುವ ಭಕ್ತರು ಈ ಪಾತಾಳ ಗಂಗೆ ಯಲ್ಲಿ ಮುಳುಗಿ ಮಲ್ಲಿಕಾರ್ಜುನನ ದರ್ಶನ ಪಡೆದುಕೊಳ್ಳುತ್ತಾರೆ.

ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಇತಿಹಾಸ

ಶ್ರೀಶೈಲದ ಉಲ್ಲೇಖ ಮೊದಲು ಕಾಣಿಸಿಕೊಂಡಿರುವುದು ಶಾತವಾಹನರ ಕಾಲದಲ್ಲಿ. ಅತಿ ಪುರಾತನ ದಾಖಲೆ ಸಿಗುವುದು ಪುಲುಮವಿ ನಾಸಿಕದ ಒಂದು ಶಾಸನದಲ್ಲಿ. ಇದು ಸುಮಾರು ಒಂದನೇ ಶತಮಾನ ಎಂದು ಗುರುತಿಸಲಾಗಿದೆ. ಈ ದೇವಸ್ಥಾನವನ್ನು 6 ಶತಮಾನಗಳ ಹಿಂದೆ, ವಿಜಯನಗರ ಸಾಮ್ರಾಜ್ಯದ ರಾಜ ಹರಿಹರರಾಯ ವಿಜಯನಗರ ಶಿಲ್ಪ ಕಲೆಯ ಶೈಲಿಯಲ್ಲಿ ಕಟ್ಟಿಸಿದ್ದು. ಶ್ರೀಕೃಷ್ಣದೇವರಾಯ 15ನೇ ಶತಮಾನದಲ್ಲಿ ಪೂರ್ವ ದಿಕ್ಕಿಗೆ ಗೋಪುರವನ್ನು ಮತ್ತು ಸಾಲು ಮಂಟಪಗಳನ್ನು ಕಟ್ಟಿಸಿದ. ಕ್ರಿ.ಶ. 1667ರಲ್ಲಿ ಛತ್ರಪತಿ ಶಿವಾಜಿ ಉತ್ತರ ದಿಕ್ಕಿನ ಗೋಪುರವನ್ನು ಕಟ್ಟಿಸಿದ. ಅಹಲ್ಯಾಬಾಯಿ ಹೋಳ್ಕರ್ ಪಾತಾಳಗಂಗೆಯಿಂದ ದೇವಸ್ಥಾನದವರೆಗೆ ಮೆಟ್ಟಿಲನ್ನು ಕಟ್ಟಿಸಿಕೊಟ್ಟಳು.

ಇಲ್ಲಿನ ಅತ್ಯಂತ ಪ್ರಮುಖವಾದ ದೇವಾಲಯಗಳೆಂದರೆ ಶಿವ ಹಾಗೂ ಆತನ ಪತ್ನಿ ದೇವಿ ಪಾರ್ವತಿಗೆ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಇಲ್ಲಿ ಭಗವಾನ್ ಶಿವನನ್ನು ಮಲ್ಲಿಕಾರ್ಜುನ ಸ್ವಾಮಿ ಎಂತಲೂ ಹಾಗೂ ಪಾರ್ವತಿ ದೇವಿಯನ್ನು ಭ್ರಮರಾಂಭ ಎಂದೂ ಪೂಜಿಸಲಾಗುತ್ತದೆ. ಈ ದೇವಾಲಯವು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ, ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳ ನಡುವೆ ಇರುವುದು.

ಮಲ್ಲೆಲಾ ತೀರ್ಥಂ ಧಾರ್ಮಿಕ ದೃಷ್ಟಿಯಿಂದ ಇನ್ನಷ್ಟು ಪ್ರಸಿದ್ಧಿಯನ್ನು ಗಳಿಸಿರುವ ಸ್ಥಳ. ಇದೊಂದು ಜಲಪಾತವಾಗಿದ್ದು, ಈ ತೀರ್ಥದ ನೀರಿನಲ್ಲಿ ಸ್ನಾನ ಮಾಡಿದರೆ ಸ್ನಾನ ಮಾಡಿದ ವ್ಯಕ್ತಿಯ ಪಾಪ ತೊಳೆದು ಹೋಗುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಇಲ್ಲಿಗೆ ಭಕ್ತಾದಿಗಳು ನಿರಂತರವಾಗಿ ಬರುತ್ತಾರೆ. ಇಲ್ಲಿರುವ ಮಲ್ಲಿಕಾರ್ಜುನ ಮೂರ್ತಿಯ ಗರ್ಭಗುಡಿಗೆ ಭಕ್ತರ ಪ್ರವೇಶವಿದ್ದು, ಅದರೊಂದಿಗೆ ಲಿಂಗಕ್ಕೆ ಅಭಿಷೇಕ ಅರ್ಚನೆಗಳನ್ನೂ ಕೂಡ ಮಾಡ ಬಹುದು.