ಎಲ್ಲ ಅಂಗಡಿ-ಮುಂಗಟ್ಟುಗಳ ಮೇಲೆ ನವೆಂಬರ್ 1ರ ಒಳಗೆ ಕನ್ನಡ ನಾಮಫಲಕ ಹಾಕದಿದ್ದರೆ ಪರವಾನಗಿ ರದ್ದು??

0
187

ಬಹುದಿನಗಳಿಂದ ಕೇಳಿ ಬರುತ್ತಿದ್ದ ಕನ್ನಡ ನಾಮಫಲಕ ವಿವಾದಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬೆಂಗಳೂರಿನ ಅಂಗಡಿ, ಶಾಪಿಂಗ್ ಮಾಲ್, ಹೋಟೆಲ್ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಹೊರ ಬಂದಿದ್ದು, ಪಾಲಿಕೆಯಿಂದ ಪರವಾನಗಿ ಪಡೆದ ಎಲ್ಲ ಉದ್ದಿಮೆಗಳು, ಮಳಿಗೆಗಳ ನಾಮಫಲಕಗಳ ಶೇ 60ರಷ್ಟು ಭಾಗ ಕನ್ನಡದಲ್ಲಿರಬೇಕು. ಸ್ಪಷ್ಟವಾಗಿ ಕಾಣುವಂತೆ ಕನ್ನಡ ಪದಗಳನ್ನು ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ, ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಹೌದು ನವೆಂಬರ್ 1ರಿಂದ ನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಹಾಕುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ನಗರದಲ್ಲಿರುವ ಹೋಟೆಗಳು, ಖಾಸಗಿ ಸಂಸ್ಥೆಗಳು, ಪರವಾನಗಿ ಪಡೆದಿರುವ ವ್ಯಾಪಾರಿಗಳು, ಅಂಗಡಿಮುಂಗಟ್ಟುಗಳ ಮಾಲೀಕರು ತಮ್ಮ ಮಳಿಗೆಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆ ಬಳಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಫಲಕಗಳಲ್ಲಿ ಕನ್ನಡ ಪದಗಳು ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಬೇಕು, ಒಂದು ವೇಳೆ ಕನ್ನಡ ಭಾಷೆಗೆ ಆದ್ಯತೆ ನೀಡದಿದ್ದರೆ ಅಂತಹ ಮಳಿಗೆಗಳ ವಾಣಿಜ್ಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಹೊಸದಾಗಿ ಪರವಾನಗಿ ಅರ್ಜಿ ಸಲ್ಲಿಸುವಂತಹ ಅರ್ಜಿದಾರರಿಗೂ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಅದಿಕಾರಿಗಳು ಸೂಚನೆ ನೀಡಬೇಕು ಎಂದು ಆಯುಕ್ತರು ಆದೇಶಿಸಿದ್ದಾರೆ. ಕನ್ನಡ ಅಭಿವೃದಿ ಪ್ರಾದಿಕಾರ ಹಾಗೂ ಕೆಲವು ಕನ್ನಡಪರ ಸಂಘಟನೆಗಳು ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಹಲವಾರು ಬಾರಿ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದವು.

ಕನ್ನಡ ನಾಮಫಲಕ ಯಾರಿಗೆ ಅನ್ವಯ?

ಚಿಲ್ಲರೆ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಮಾಲ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಹೋಟೆಲ್‌, ದರ್ಶಿನಿ, ಎಲ್ಲಮಾದರಿಯ ರೆಸ್ಟೋರೆಂಟ್‌ಗಳು, ಖಾಸಗಿ ಕಂಪನಿಗಳ ಕಚೇರಿಗಳು, ಕೈಗಾರಿಕೆಗಳು ಹಾಗೂ ಎಲ್ಲಮಾದರಿಯ ಉದ್ದಿಮೆಗಳು.

ಕನ್ನಡದ ಜೊತೆ ಇತರೆ ಭಾಷೆ ಬಳಸಬಹುದೇ?

ಕನ್ನಡಕ್ಕೆ ಪ್ರಥಮ ಆದ್ಯತೆ. ಅಂದರೆ ನಾಮಫಲಕದಲ್ಲಿಶೇ.60 ರಷ್ಟು ಭಾಗ ಕನ್ನಡ ಇರಬೇಕು. ಇದರ ಜೊತೆಗೆ ಇಂಗ್ಲಿಷ್‌ ಸೇರಿದಂತೆ ಇತರೆ ಭಾಷೆ ಅಳವಡಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಇತರೆ ಭಾಷೆ ಕನ್ನಡ ಅಕ್ಷರಗಳಿಗಿಂತ ದಪ್ಪ ಇರಬಾರದು.

ಹೊಸದಾಗಿ ಅಂಗಡಿ-ಮುಂಗಟ್ಟು, ಮಳಿಗೆಗಳನ್ನು ತೆರೆಯುವವರು ಕನ್ನಡ ಪ್ರಧಾನವಾಗಿ ಕಾಣಿಸುವಂತೆ ನಾಮಫಲಕ ಅಳವಡಿಸಿದ್ದರೆ ಮಾತ್ರ ಪರವಾನಗಿ ನೀಡಬೇಕೆಂದು ಸಂಬಂಧಪಟ್ಟ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಯಲ್ಲಿ ಕನ್ನಡೀಕರಣಕ್ಕೆ ಹಲವು ಅಂಶಗಳನ್ನು ಅನುಷ್ಠಾನಗೊಳಿಸುವಂತೆ ಈ ಹಿಂದೆಯೇ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದು, ”ನ. 1ರೊಳಗೆ ಕನ್ನಡ ನಾಮಫಲಕ ಅಳವಡಿಸದಿದ್ದರೆ, ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು. ಎಲ್‌ಇಡಿ ಫಲಕಗಳ ಬದಲಾವಣೆಗೆ ಕೊಂಚ ಕಾಲಾವಕಾಶ ಬೇಕಾಗಲಿದೆ. ಅಂಥವರಿಗೆ 10-15 ದಿನ ಹೆಚ್ಚುವರಿ ಸಮಯ ಮಾಡಲಾಗುವುದು. ಆನಂತರವೂ ಕನ್ನಡದಲ್ಲಿನಾಮಫಲಕ ಹಾಕದಿದ್ದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೇಯರ್‌ ಹೇಳಿದ್ದಾರೆ.

Also read: ಹಬ್ಬದ ಪ್ರಯಕ್ತ ಸುಲಿಗೆಗೆ ನಿಂತ ಬಸ್‍ಗಳು; ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ ಹಬ್ಬಕ್ಕೆ ಆಹ್ವಾನಿಸಿದ ಪ್ರಯಾಣಿಕ.!