2019ರ ಲೋಕಸಭಾ ಚುನಾವಣೆಗೆ ಏನೆಲ್ಲ ಹೊಸ ವಿಧಾನಗಳಿವೆ? ಚುನಾವಣೆಗೆ ಆಯೋಗ ಏನೆಲ್ಲ ಸಿದ್ಧತೆ ಮಾಡಿಕೊಂಡಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

0
257

ಈ ಬಾರಿ ಲೋಕಸಭಾ ಚುನಾವಣೆಯನ್ನು ಇಡೀ ದೇಶ ಕಾತರದಿಂದ ಕಾಯುತ್ತಿದ್ದು. ಈ ಬಾರಿ ಒಟ್ಟು 89.98 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಏ.11ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿ ಮೇ. 19ರ ವರೆಗೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆ ಜೊತೆಗೆ ನಡೆಯಲಿದ್ದು ವಿಶೇಷವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ಚುನಾವಣೆಗೆ ಆಯೋಗ ಏನೆಲ್ಲ ಸಿದ್ಧತೆ ಮಾಡಿಕೊಂಡಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಮತದಾನ ಯಂತ್ರದಲ್ಲಿ ಪಕ್ಷದ ಚಿಹ್ನೆ:

ಈ ಬಾರಿ ಇದೇ ಮೊದಲ ಬಾರಿಗೆ ಮತದಾನ ಯಂತ್ರದಲ್ಲಿ ಪಕ್ಷದ ಚಿಹ್ನೆ ಜೊತೆಗೆ ಅಭ್ಯರ್ಥಿಯ ಫೋಟೋ ಕೂಡ ಕಾಣಲಿದ್ದು, ಮತದಾರನಿಗೆ ತಾನು ಮತದಾನ ಮಾಡಿದ ಅಭ್ಯರ್ಥಿಯ ಫೋಟೋ ಕಾಣಲಿದೆ ಎಂದು ಚುನವಣಾ ಆಯೋಗ ತಿಳಿಸಿದೆ. ಅಲ್ಲದೇ ಇವಿಎಂ ಜೊತೆಗೆ ವಿವಿ ಪ್ಯಾಟ್‌ಗಳನ್ನೂ ಬಳಸಿಕೊಳ್ಳಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ. 23 ರಾಜ್ಯ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶದಲ್ಲಿ ಶೇ. 100ರಷ್ಟು ಮತದಾನ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಆಯೋಗ ಹೇಳಿದ್ದು, ಈ ಬಾರಿ ಒಟ್ಟು 8.45 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.

ಸಂಧರ್ಬಿಕ ಚಿತ್ರ

ರಾಜ್ಯದಲ್ಲಿ ಚುನಾವಣೆ ಸಿದ್ದತೆ ಹೇಗೆ?

ರಾಜ್ಯದಲ್ಲಿ ಒಟ್ಟು 5 ಕೋಟಿ ಮತದಾರರಿದ್ದಾರೆ. ಆ ಪೈಕಿ ದಿವ್ಯಾಂಗರು, ಹಿರಿಯ ನಾಗರಿಕರು ಬಂದು ಮತದಾನ ಮಾಡುವ ಕಾರಣಕ್ಕೆ ರಾಜ್ಯಾದ್ಯಂತ 58,186 ಮತಕೇಂದ್ರಗಳನ್ನು ಕೇವಲ ನೆಲ ಅಂತಸ್ತಿನಲ್ಲೇ ಮಾಡಲಾಗುತ್ತದೆ. ಚುನಾವಣಾ ಆಯೋಗ ಪ್ರತಿ ಬಾರಿಯಂತೆ ಈ ಬಾರಿಯೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಕ್ಲಬ್, ಜಾಗೃತಿ ಕಾರ್ಯಕ್ರಮ, ಬೀದಿ ನಾಟಕ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ.

ವಿಕಲಚೇತನರಿಗೆ 17 ಸಾವಿರ ವಾಹನಗಳನ್ನು:

ವಿಕಲಚೇತನರಿಗೆ ಮತದಾನಕ್ಕೆ ಮನೆಯಿಂದ ಕರೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ರಾಜ್ಯದಲ್ಲಿ ಒಟ್ಟು 4 ಲಕ್ಷದ 21 ಸಾವಿರ 67 ದಿವ್ಯಾಂಗರಿದ್ದಾರೆ. ಈ ಅಂಧರು ಮತಗಟ್ಟೆಗೆ ಬಂದು ಮತದಾನ ಮಾಡಲು ಒಟ್ಟು 40,823 ವೀಲ್ ಚೇರ್ ಗಳನ್ನು ಚುನಾವಣಾ ಆಯೋಗ ಬಳಸಲಿದೆ. ಚುನಾವಣೆ ದಿನ ದಿವ್ಯಾಂಗರನ್ನು ಮನೆಯಿಂದ ಮತದಾನ ಕೇಂದ್ರಕ್ಕೆ ಕರೆತಂದು ಪುನಃ ಡ್ರಾಪ್ ಮಾಡಲು 17,189 ವಾಹನಗಳ ಮೂಲಕ ಉಚಿತ ಸಾರಿಗೆ ವ್ಯವಸ್ಥೆ ಮಾಡುತ್ತಿದೆ. ಚುನಾವಣಾ ಆಯೋಗದ ಮೊಬೈಲ್ ಆ್ಯಪ್ ಅನ್ನು ಬಳಸಿ ಅಂಗವಿಕಲರು ಉಚಿತ ಸಾರಿಗೆ ವ್ಯವಸ್ಥೆಯನ್ನು ಬಳಸಬಹುದು. ಕಳೆದ ವರ್ಷವಷ್ಟೆ ವಿಧಾನಸಭಾ ಚುನಾವಣೆ ನಡೆಸಿದ್ದ ರಾಜ್ಯ ಚುನಾವಣಾ ಆಯೋಗ ಇದೇ ಉತ್ಸಾಹದಲ್ಲಿ ಏಪ್ರಿಲ್ 18 ಹಾಗೂ 23ರಂದು ಎರಡು ಹಂತದಲ್ಲಿ ಚುನಾವಣೆಗೆ ಸಕಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.

ಕಿವುಡ- ಮೂಗರ ಸಹಾಯಕ್ಕೆ ಸನ್ನೆನುಡಿ ತಜ್ಞರು:

ಮತದಾನ ಕೇಂದ್ರದಲ್ಲಿ ಕಿವುಡ- ಮೂಗರ ಸಹಾಯಕ್ಕೆ ಅನುಕೂಲವಾಗುವಂತೆ 405 ಸನ್ನೆನುಡಿ ತಜ್ಞರ ಸಹಾಯವನ್ನು ಆಯೋಗ ಪಡೆಯುತ್ತಿದೆ. ಮತಗಟ್ಟೆಯ ಪ್ರತಿ ಸಿಬ್ಬಂದಿಯೂ ದಿವ್ಯಾಂಗರೇ ಇರುವ 90 ಮತಕೇಂದ್ರಗಳನ್ನು ಚುನಾವಣಾ ಆಯೋಗ ಸ್ಥಾಪನೆ ಮಾಡಲಿದೆ. ಪೂರ್ತಿ ಮಹಿಳಾ ಸಿಬ್ಬಂದಿಯೇ ಇರುವ 639 ಪೋಲಿಂಗ್ ಸೆಂಟರ್ ಗಳನ್ನು ಚುನಾವಣಾ ಆಯೋಗ ನಿರ್ಮಿಸಲಿದೆ. ಬುಡಕಟ್ಟು ಮತದಾರರು ಹೆಚ್ಚಿರುವ 39 ಕಡೆ ಸಾಂಪ್ರದಾಯಿಕ ಮತಕೇಂದ್ರವನ್ನು ಆಯೋಗ ಸ್ಥಾಪಿಸಲಿದೆ. ಇವಿಎಂ ಯಂತ್ರದಲ್ಲಿ ಬ್ರೈಲ್ ಲಿಪಿ ಅಳವಡಿಕೆ ಇರಲಿದೆ.

ವೀಲ್ ಚೇರ್ ನಲ್ಲಿ ಬರಲು ರ್ಯಾಂಪ್ ಸೌಕರ್ಯ:

ಮತದಾರರ ಅನುಕೂಲಕ್ಕಾಗಿ ಪ್ರತಿ ಮತಕೇಂದ್ರದಲ್ಲೂ ಸಹಾಯಕರ ನೆರವಿನಿಂದ ವೀಲ್ ಚೇರ್ ನಲ್ಲಿ ಬರಲು ರ್ಯಾಂಪ್ ಸೌಕರ್ಯ ಕಲ್ಪಿಸಲಿದೆ. ಮನೆ ಮನೆಗೆ ಆಯೋಗದ ಸಿಬ್ಬಂದಿ ವೋಟರ್ ಸ್ಲಿಪ್ ಜೊತೆಗೆ ವೋಟರ್ ಗೈಡ್ ಗಳನ್ನು ಪೂರೈಕೆ ಮಾಡ್ತಿದೆ. ಮತದಾನದ ದಿನ ಚುನಾವಣೆ ಕುರಿತಂತೆ ಚುನಾವಣಾ ಆಯೋಗ ಭಿತ್ತಿಪತ್ರಗಳಲ್ಲಿ ಮಾಹಿತಿಯನ್ನು ಒದಗಿಸಲಿದೆ. ಚುನಾವಣಾ ಆಯೋಗ ಸಾಕಷ್ಟು ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದು, ಈ ಬಾರಿ ಶೇ. 80ರಷ್ಟು ಮತದಾನವಾಗುವ ನಿರೀಕ್ಷೆಯಿದೆ ಎಂದು ಸ್ವೀಪ್ ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್​ವಸ್ತ್ರದ್ ತಿಳಿಸಿದ್ದಾರೆ.

ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?:

1. ರಾಜ್ಯದಲ್ಲಿನ 4.21 ಲಕ್ಷ ಅಂಧರಿಗೆ 40,823 ವೀಲ್ ಚೇರ್ ವ್ಯವಸ್ಥೆ,
2. ದಿವ್ಯಾಂಗರನ್ನು ಕರೆದುಕೊಂಡು ಹೋಗಲು 17,189 ವಾಹನ ವ್ಯವಸ್ಥೆ,
3. ಕಿವುಡ- ಮೂಗರ ಸಹಾಯಕ್ಕೆ 405 ಸನ್ನೆನುಡಿ ತಜ್ಞರ ಬಳಕೆ,
4. ದಿವ್ಯಾಂಗ ಮತಗಟ್ಟೆ ಅಧಿಕಾರಿಗಳೇ ಇರುವ 90 ಮತಕೇಂದ್ರಗಳ ಸ್ಥಾಪನೆ,
5. ಮಹಿಳಾ ಸಿಬ್ಬಂದಿಯಿರುವ 639 ಮತಕೇಂದ್ರ ಸ್ಥಾಪನೆ,
6. ಬುಡಕಟ್ಟು ಮತದಾರರು ಹೆಚ್ಚಿರುವ ಕಡೆ 39 ಸಾಂಪ್ರದಾಯಿಕ ಮತಕೇಂದ್ರಗಳು.
7. ಇವಿಎಂ ಯಂತ್ರದಲ್ಲಿ ಬ್ರೈಲ್ ಲಿಪಿ ಅಳವಡಿಕೆ ಕ್ರಮಗಳನ್ನು ಅಳವಡಿಸಲಾಗುವುದು.
8. ಮತಕೇಂದ್ರದ ಸಿಬ್ಬಂದಿಯ ಶೌಚಾಲಯ, ಪ್ರಥಮ ಚಿಕಿತ್ಸಾ ಪೆಟ್ಟಿಗೆ,
9. ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ,
10. ದೃಷ್ಟಿದೋಷವಿರುವವರಿಗೆ ಅಭ್ಯರ್ಥಿಗಳ ಪಟ್ಟಿ ವೀಕ್ಷಣೆಗೆ ಭೂತಗನ್ನಡಿ ಹೀಗೆ ಹಲವು ಸೌಲಭ್ಯಗಳನ್ನು ಚುನಾವಣಾ ಆಯೋಗ ಮತದಾರರಿಗೆ ಕಲ್ಪಿಸಿಕೊಡಲಿದೆ.