ಸ್ಟೀಫನ್ ಹಾಕಿಂಗ್

0
1003

ಮಾಂಸಖಂಡ, ನರಗಳು ಹಾಗೂ ಸಂವೇದನಾ ಶಕ್ತಿ ನಶಿಸುತ್ತ ಹೋಗುವ, ವಾಸಿಯಾಗದ ಕಾಯಿಲೆಗೆ ತುತ್ತಾದರೂ ಪ್ರಖರವಾದ ಬುದ್ಧಿಶಕ್ತಿಯನ್ನು `ಹೇಗೋ’ ಉಳಿಸಿಕೊಂಡು ವೈಜ್ಞಾನಿಕ ಜಗತ್ತಿಗೆ ಮಹತ್ತರವಾದ ಕಾಣಿಕೆ ನೀಡುತ್ತಿರುವ ಮಹಾನ್ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್.ಸೈದ್ಧಾಂತಿಕ ಭೌತಶಾಸ್ತ್ರಜ್ಞರು ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ಮಾಡುವುದಿಲ್ಲ. ಉನ್ನತ ಮಟ್ಟದ ಭೌತಶಾಸ್ತ್ರೀಯ ಹಾಗೂ ಗಣಿತದ ಸಿದ್ಧಾಂತಗಳನ್ನು ಅನ್ವಯ ಮಾಡಿ ಭೌತಶಾಸ್ತ್ರೀಯ ವಿದ್ಯಮಾನಗಳ, ವಿಷಯಗಳ ಬಗ್ಗೆ ಸಂಶೋಧನೆ ಮಾಡುತ್ತಾರೆ. ತಮ್ಮ ಸಿದ್ಧಾಂತವನ್ನು ತಾರ್ಕಿಕವಾಗಿ ಮಂಡಿಸುತ್ತಾರೆ. ಹಾಕಿಂಗ್ ಒಬ್ಬ ಸೈದ್ಧಾಂತಿಕ ಭೌತವಿಜ್ಞಾನಿ.

ಕೃಷ್ಣಕುಹರಗಳ (ಬ್ಲಾಕ್ ಹೋಲ್ಸ್) ಬಗ್ಗೆ, ಆಕಾಶ ತತ್ತ್ವ ಹಾಗೂ ಕಾಲದ ಸ್ವರೂಪದ ಬಗ್ಗೆ ಅವರು ಮಂಡಿಸಿರುವ ಸಿದ್ಧಾಂತಗಳು ಭಾರಿ ಮನ್ನಣೆ ಗಳಿಸಿವೆ. ಸಾಪೇಕ್ಷವಾದ ಹಾಗೂ ಸೂಕ್ಷ್ಮ ಜಗತ್ತಿನ ವಿದ್ಯಮಾನಗಳನ್ನು ಅರಿಯುವ ಕ್ವಾಂಟಮ್ ಸಿದ್ಧಾಂತಗಳೆರಡನ್ನೂ ಬಳಸಿಕೊಂಡು ಹಾಕಿಂಗ್ ತಮ್ಮ ಸಿದ್ಧಾಂತಗಳನ್ನು ಮಂಡಿಸಿದ್ದಾರೆ.ಇಂಗ್ಲೆಂಡಿನ ಆಕ್ಸ್‍ಫರ್ಡ್‍ಶೈರ್‍ನಲ್ಲಿ 1942ರ ಜನವರಿ 8 ರಂದು ಹಾಕಿಂಗ್ ಜನಿಸಿದರು.

1962ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿ.ಎ. ಪದವಿ ಗಳಿಸಿದರು. 1966ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಹಾಲ್ ಕಾಲೇಜಿನಿಂದ ಪಿಎಚ್‍ಡಿ ಗಳಿಸಿದರು. ಅನಂತರ ಬಹುಕಾಲ ಬೋಧಕರಾಗಿ ಕೆಲಸ ಮಾಡಿದರು. 1960 ರ ದಶಕದ ಆರಂಭದಲ್ಲೇ ಕಾಯಿಲೆಗೆ ತುತ್ತಾದರೂ ಅವರು ಸಂಶೋಧನೆಗಳನ್ನು ಬಿಡಲಿಲ್ಲ. ಹಂತ ಹಂತವಾಗಿ ಅವರ ಮಾತು, ಶ್ರವಣ, ಓಡಾಟ ಎಲ್ಲ ನಿಂತುಹೋದವು. ಕ್ರಮೇಣ ನಿತ್ಯಕರ್ಮಗಳನ್ನು ಮಾಡುವುದೂ ಅಸಾಧ್ಯವಾಯಿತು. ಆದರೂ ಅಧ್ಯಯನ, ಸಂಶೋಧನೆಗಳ ಸೆಳೆತ ಬಿಡಲಿಲ್ಲ.

ಗಾಲಿಕುರ್ಚಿಯಲ್ಲಿ ಕುಳಿತು ಓಡಾಡುವ ಅವರು, ತಮ್ಮ ಆಲೋಚನೆಗಳನ್ನು ಧ್ವನಿಯ ರೂಪಕ್ಕೆ ಇಳಿಸುವ ಯಂತ್ರದ ಸಹಾಯದಿಂದ ಸಂಭಾಳಿಸಿ ನಡೆಸುತ್ತಾರೆ. ಸಾವನ್ನು ಗೆದ್ದಿರುವ ಅವರ ಪಾಲಿಗೆ ಈಗ ಕೇವಲ ಆಲೋಚನಾ ಶಕ್ತಿ ಮಾತ್ರ ಉಳಿದಿದೆ. ಅದನ್ನೇ ಬಳಸಿಕೊಂಡು ಅಧ್ಯಯನ ನಿರತರಾಗಿದ್ದಾರೆ.ಐನ್‍ಸ್ಟೀನ್ ನಂತರ ಭಾರಿ ಜನಪ್ರಿಯತೆ ಗಳಿಸಿರುವ ವಿಜ್ಞಾನಿ ಎಂದರೆ ಸ್ಟೀಫನ್ ಹಾಕಿಂಗ್. ನಾಲ್ಕು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಸಾಮಾನ್ಯ ಓದುಗರಿಗಾಗಿ ಅವರು ರಚಿಸಿರುವ `ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕ ಎಲ್ಲ ಕಾಲದ ದಾಖಲೆಗಳನ್ನೂ ಮುರಿದು ಅತಿ ಹೆಚ್ಚು ಮಾರಾಟವಾಗಿರುವ ವೈಜ್ಞಾನಿಕ ಪುಸ್ತಕ ಎನಿಸಿದೆ. ಅಧ್ಯಯನ ಶೀಲತೆಗೆ, ಜ್ಞಾನದ ನಿರಂತರ ಹಸಿವಿಗೆ ಸ್ಟೀಫನ್ ಹಾಕಿಂಗ್ ಅವರದು ಒಂದು ಅದ್ಭುತ ಹಾಗೂ ಆದರ್ಶ ಉದಾಹರಣೆ.