ದತ್ತ ನಾಮೋಚ್ಚಾರಣೆ ಭವಕತ್ತಲನ್ನು ದೂರಮಾಡುತ್ತದೆ..ಅಂತಹ ದತ್ತ ಜಯಂತಿಯ ಮಹತ್ವದ ಬಗ್ಗೆ ತಿಳಿಯಲು ಇದನ್ನು ಓದಿ…

0
1228

ಶ್ರೀ ದತ್ತಜಯಂತಿ ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು, ಆದುದರಿಂದ ಆ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ ಈ ಬಾರಿ ಇಂದು 03-ಡಿಸೆಂಬರ್-2017 ರಂದು ದತ್ತಾತ್ರೇಯ ಜಯಂತಿಯನ್ನು ನಾಡಿನಲ್ಲಿ ಎಲ್ಲೆಡೆ ಆಚರಿಸಲಾಗುತ್ತಿದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ಮುಕ್ತಿ ಸಿಗುತ್ತದೆ.

ದತ್ತಾತ್ರೇಯ ಗುರುವಿನ ಜನ್ಮದ ಇತಿಹಾಸ

ಗುರು ದತ್ತಾತ್ರೇಯರು ಬ್ರಹ್ಮ ,ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಸೇರಿದ ಅವತಾರ. ಔದುಂಬರ ವ್ರಕ್ಷದಲ್ಲಿ ವಾಸ ಮಾಡುತ್ತಾರೆ. ಅತ್ರಿ ಮುನಿಗಳು ಹಾಗು ಅನಸೂಯ ದೇವಿಗೆತ್ರಿಮೂರ್ತಿಗಳು ಪುತ್ರರಾಗಿ ಜನಿಸಿದರು.

ಒಮ್ಮೆ ಇಂದ್ರಾದಿ ದೇವತೆಗಳು, ನಾರದರು ಅನಸೂಯಾದೇವಿಯ ಪಾತಿವ್ರತೆಯನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ತ್ರಿಮೂರ್ತಿಗಳು, ತಾವೇ ಸ್ವತಃ ಹೋಗಿ ಅದನ್ನು ಕಣ್ಣಾರೆ ನೋಡುವ ಆಸೆ ಆಯಿತು. ಒಂದು ದಿನ ಮಧ್ಯಾಹ್ನ ಅತ್ರಿ ಮುನಿಗಳು ಮನೆಯಲ್ಲಿಲ್ಲದಿರುವಾಗ, ಬ್ರಹ್ಮ , ವಿಷ್ಣು ಮಹೇಶ್ವರರು ಬ್ರಾಹ್ಮಣವೇಷ ಧರಿಸಿ ಭಿಕ್ಷಾಂ ದೇಹಿ ಎಂದು ಹೇಳುತ್ತಾ ಅನುಯ ದೇವಿ ಮನೆಗೆ ಬಂದರು. ಆಕೆಯು ಸಂತಸದಿಂದ ಇವರನ್ನು ಬರಮಾಡಿಕೊಂಡು ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲು ಹೊರಟಳು. ಅಡಿಗೆಯಾದ ನಂತರ ಇವರಿಗೆ ಊಟ ಬಡಿಸಲು ಬಂದಾಗ, ತ್ರಿಮೂರ್ತಿಗಳು ” ನೀನು ಭಿಕ್ಷೆ ಬೇಡಿ ಬಂದವರಿಗೆ ಇಚ್ಛಾ ಭೋಜನ ಮಾಡಿಸುತ್ತೀಯ ಅಂತ ಕೇಳಿದ್ದೀವಿ.

ನಮಗೆ ನೀನು ವಿವಸ್ತ್ರಳಾಗಿ ಊಟ ಬಡಿಸಿದರೆ ಮಾತ್ರ ಊಟ ಮಾಡುತ್ತೀವಿ, ಇಲ್ಲದಿದ್ದರೆ ಬೇರೆ ಮನೆಗೆ ಹೋಗುತ್ತಿವಿ ” ಎಂದರು. ಇದನ್ನು ಕೇಳಿದ ಅನಸೂಯಾದೇವಿ ಇವರು ಸಾಮಾನ್ಯ ಪುರುಷರಲ್ಲ ಎಂದು ಅರಿತಳು. ತನ್ನ ಪಾತಿವ್ರತೆಯನ್ನು ಪರೀಕ್ಷಿಸಲು ಬಂದಿದ್ದಾರೆ ಎಂದುಕೊಂಡಳು. ತನ್ನ ಪತಿಯನ್ನು ನೆನೆದು ವಿವಸ್ತ್ರಳಾಗಿ ಊಟ ಬಡಿಸಲು ಹೊರಬಂದು ನೋಡಿದರೆ, ತ್ರಿಮೂರ್ತಿಗಳು ಪುಟ್ಟ ಮಕ್ಕಳಾಗಿ ಎಲೆಯ ಮುಂದೆ ಅಂಬೆಗಾಲು ಇಡುತ್ತ ಅಳುತ್ತಿದ್ದರು. ಈ ಅಳುವ ಕಂದಮ್ಮಗಳಿಗೆ ಅನಸೂಯಾ ತನ್ನ ಹಾಲು ಕುಡಿಸಿ, ಜೋಲಿಯಲ್ಲಿ ಹಾಕಿ ಮಲಗಿಸಿದಳು. ಅಷ್ಟು ಹೊತ್ತಿಗೆ ಮನೆಗೆ ಬಂದ ಅತ್ರಿಮುನಿಗಳು, ಈ ಮಕ್ಕಳನ್ನು ನೋಡಿ, ಯಾರಿವರು ಎಂದು ಪತ್ನಿಯನ್ನು ಕೇಳಿದರು. ನಡೆದ ಸಂಗತಿಯನ್ನು ಪತ್ನಿಯಿಂದ ತಿಳಿದ ಅತ್ರಿಗಳು, ಇವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು.

ಆಗ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರತ್ಯಕ್ಷರಾದರು. ಅನಸೂಯಾ ದೇವಿಯ ಪಾತಿವ್ರತೆಯನ್ನು ಕೊಂಡಾಡಿ, ಏನು ವರ ಬೇಕಾದರೂ ಕೇಳು ಎಂದರು. ಆಕೆಯು, “ತ್ರಿಮೂರ್ತಿಗಳೇ, ನೀವು ಮಕ್ಕಳಾಗಿ ನಮ್ಮ ಮನೆಗೆ ಬಂದಿದ್ದಿರಾ, ನಮ ಮನೆಯಲ್ಲೇ ಇರಿ” ಎಂದು ಕೇಳಿದಳು. ಅವರು ತಥಾಸ್ತು ಎನ್ನಲು, ಆ ಮೂರೂ ಮಕ್ಕಳು, ಅತ್ರಿ ಮುನಿಗಳ ಮನೆಯಲ್ಲೇ ಇಳಿದರು. ದೊಡ್ಡವರಾದ ಮೇಲೆ, ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೆ ತೆರಳಿದನು, ಮಹೇಶ್ವರನು ಧೂರ್ವಸನಾಗಿ ತೆರಳಿದನು. ಇವರಿಬ್ಬರು ಹೋಗುವ ಮುನ್ನ ತಮ್ಮ ಒಂದು ಅಂಶವನ್ನು ವಿಷ್ಣುವಿನಲ್ಲಿ ಬಿಟ್ಟು ಹೋದರು. ಆಗ ವಿಷ್ಣು ಸ್ವರೂಪನಾದ ದತ್ತನಿಗೆ ಮೂರು ಮುಖಗಳಾವು. ಇವರೇ ಗುರು ದತ್ತಾತ್ರೇಯರಾದರು.

ಜಯಂತಿ ವಿಶೇಷ:

ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಮೂರ್ತಿ ಆರಾಧನೆ, ದತ್ತ ಭಜನೆ, ಔದುಂಬರ ವೃಕ್ಷಕ್ಕೆ ಪೂಜೆ, ಗುರುಚರಿತ್ರೆ ಪಾರಯಣೆ ಮಾಡುತ್ತಾರೆ. ದತ್ತಾತ್ರೇಯ ಅಷ್ಟೋತ್ತರ ನಾಮಗಳನ್ನು ಹೇಳಲಾಗುತ್ತದೆ. ದತ್ತಾತ್ರೇಯರು ಗುರು ಪರಂಪರೆಯಲ್ಲಿ ಆದಿ ಗುರು. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸಾಯಿ ಬಾಬಾ ಇವರೆಲ್ಲ ಗುರುಗಳ ಅವತಾರಗಳು. ಈ ಕಲಿಯುಗದಲ್ಲಿ ಗುರುವಿನ ಸೇವೆ ಮಾಡಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.