ಬಣಗುಟ್ಟಿದ ಮೆಜೆಸ್ಟಿಕ್…

0
616

ಬಿಕೋ ಎನ್ನುತ್ತಿರುವ ರಸ್ತೆಗಳು… ಪರದಾಡುತ್ತಿರುವ ಜನರು… ನಮ್ಮದೇ ಸಾಮ್ರಾಜ್ಯ ಎನ್ನುತ್ತಾ ಬಾಯಿಗೆ ಬಂದಂತೆ ದುಡ್ಡನ್ನು ವಸೂಲಿ ಮಾಡುತ್ತಿರುವ ಆಟೋದವರು, ಅವರಿಗಿಂತ ನಾವೇನು ಕಡಿಮೆ ಎನ್ನುತ್ತಾ ದುಡ್ಡನ್ನು ಕೊಳ್ಳೆ ಹೊಡೆಯುತ್ತಿರುವ ಖಾಸಗಿ ಬಸ್ಸುಗಳು… ಮೆಜೆಸ್ಟಿಕ್ನಲ್ಲಿ ಇಂದು ನಾವು ಕಣ್ಣಾರೆ ಕಂಡಂತಹ ದೃಶ್ಯಗಳು.

WhatsApp-Image-20160726

ನೀವೇನಾದರೂ ಇವತ್ತು ಬೆಂಗಳೂರಿನಲ್ಲಿ ಬಸ್ ಪ್ರಯಾಣ ಇಟ್ಟುಕೊಂಡ್ಡಿದರೆ ದಯಮಾಡಿ ಅನ್ಯ ಮಾರ್ಗ ಹುಡುಕಿಕೊಳ್ಳಿ, ಏಕೆಂದರೆ B.M.T.C ಬಸ್ಸುಗಳು ನಿಮ್ಮನು ಕರೆದೊಯ್ಯಲು ಇಂದು ಇರುವುದಿಲ್ಲ… ನಿಮಗೇ ಗೊತ್ತಿರುವ ಹಾಗೆ ಪ್ರತಿ ದಿನ ಲಕ್ಷಾಂತರ ಮಂದಿ B.M.T.C ಮತ್ತು K.S.R.T.C ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಇದು ಹೀಗೆ ಮುಂದುವರೆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣಗಳು ಕಾಣುತ್ತಿವೆ. ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗಲು ಬಂದಿದ್ದವರ ಗೋಳಂತೂ ಹೇಳ ತೀರದು, ದುಡ್ಡಿದ್ದವರು ಆಟೋದಲ್ಲಿ ಹೋದರೆ, ಹೊತ್ತು ಹೊತ್ತಿಗೂ ದುಡಿದು ತಿನ್ನುವ ಮಂದಿ ಎಲ್ಲಿ ಹೋಗಬೇಕು ನೀವೇ ಹೇಳಿ… ಆಟೋದವರು ಒಂದು ಕಿ.ಮೀ ದೂರ ಹೋಗಲೂ ಸಹ 100 ರೂ 150 ರೂ ಬೇಡಿಕೆ ಇಡುತ್ತಿದ್ದಾರೆ…

WhatsApp-Image-20160726 (6)

ವೇತನ ಪರಿಷ್ಕರಣೆ, ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಕೈಗೊಂಡಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬಸ್ ಸಂಚಾರ ಸ್ಥಗಿತದಿಂದ ಸಾರ್ವಜನಿಕರ ಪರದಾಟ ಮುಂದುವರೆದಿದೆ. ನಿನ್ನೆ 4 ಸಾರಿಗೆ ನಿಗಮಗಳ ಪ್ರತಿಭಟನೆಯಿಂದ ಬರೋಬ್ಬರಿ 18 ಕೋಟಿ ನಷ್ಟವುಂಟಾಗಿದೆ. ಸರ್ಕಾರದ ಮನವಿಗೆ ಸಾರಿಗೆ ನೌಕರರ ಸಂಘಟನೆಗಳು ಬಗ್ಗುತ್ತಿಲ್ಲ. ನೌಕರರ ಬೇಡಿಕೆಗಳಿಗೆ ಸರ್ಕಾರ ಜಗ್ಗುತ್ತಿಲ್ಲ. ಈ ಹಗ್ಗ-ಜಗ್ಗಾಟದ ನಡುವೆ ವಿದ್ಯಾರ್ಥಿಗಳು, ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ.ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಭಾಗಶಃ ಕಡಿಮೆಯಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ.

WhatsApp-Image-20160726 (4)

ದೂರದೂರುಗಳಿಂದ ಬಂದಂತಹ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲೇ ಕಾಲ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದ್ದ ಸರ್ಕಾರ, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವರಂತೂ ಬಸ್ ನಿಲ್ದಾಣಗಳಲ್ಲೇ ರಾತ್ರಿ ಕಳೆದಿದ್ದರು. ಅತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇದೇ ಚಿತ್ರಣ. ಪ್ರವಾಸಿಗರು ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ. ಮೈಸೂರು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

WhatsApp-Image-20160726 (2)

ಪರ್ಯಾಯ ಮಾರ್ಗ ಸೃಷ್ಟಿಸಲು ಹೆಣಗಾಡುತ್ತಿರುವ ಸರ್ಕಾರ ಇಂತಹ ಸಮಯದಲ್ಲಿ ಕೈಚೆಲ್ಲಿ ಕುಳಿತಿದೆ… ಸರ್ಕಾರದ ಬೊಕ್ಕಸಕ್ಕೆ ಪೆಟ್ಟು ಬಿದ್ದರೂ ಸಾರಿಗೆ ಇಲಾಖೆ ಮೌನ ತಾಳಿರುವುದು ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ, ಇವರ ಕಿತ್ತಾಟದ ಮದ್ಯೆ ಸಾಮಾನ್ಯ ನಾಗರಿಕ ಹೈರಾಣಾಗುತ್ತಿದಾನೆ…

-ಗಿರೀಶ್ ಗೌಡ