ಕುಮಾರ ಷಷ್ಠೀ… ಈ ದಿನದಂದು ಕುಮಾರ ಷಷ್ಠೀ ವ್ರತವನ್ನು ನಿಷ್ಠೆಯಿಂದ ಆಚರಿಸಿದರೆ ಸಂಕಷ್ಟಗಳು ದೂರವಾಗುತ್ತವೆ..!!

0
1577

ಮಾಘ ಮಾಸದ ಶುದ್ಧ ಷಷ್ಠೀಯು ಅತ್ಯಂತ ಪವಿತ್ರ ದಿನ. ಈ ದಿನವನ್ನು ಕುಮಾರ ಷಷ್ಠೀ ಅಥವಾ ಕುಕ್ಕೆ ಷಷ್ಠೀಯೆಂದೇ ಪ್ರಸಿದ್ಧ. ಇದು ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಈ ಮಾಸವು ಶ್ರೇಷ್ಠ ಮಾಸವಾಗಿದ್ದು ಪವಿತ್ರ ಕ್ಷೇತ್ರಗಳಲ್ಲಿ, ನದಿ, ಸಂಗಮಗಳಲ್ಲಿ ಸಂಕಲ್ಪ ಮಾಡಿ ಸ್ನಾನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ, ಮೋಕ್ಷ ಪಡೆಯಲು ಸಾಧ್ಯವಿದೆ. ಈ ದಿನದ ಪ್ರಮುಖ ಆಚರಣೆಗಳಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಧಾನವಾದದ್ದು.

ಈ ದಿನದಂದು ಆಯು, ಆರೋಗ್ಯ, ಸರ್ವ ದೋಷ, ರೋಗ ನಿವಾರಣೆಗಾಗಿ ಕುಮಾರ ಸುಬ್ರಹ್ಮಣ್ಯ ಷಷ್ಠೀಯನ್ನು ನಿಷ್ಠೆಯಿಂದ ಆಚರಿಸಿದರೆ ಸಂಕಷ್ಟಗಳು ದೂರವಾಗುತ್ತವೆ. ಈ ದಿನದಂದು ಸುಬ್ರಹ್ಮಣ್ಯ ಸೇರಿದಂತೆ ಹಲವು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಿನಿಂದ ಸಂಜೆ ತನಕ ಪೂಜಾ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಸುಬ್ರಮಣ್ಯ ಷಷ್ಠೀ ಆಚರಣೆ ಅವರವರ ಭಾವಕ್ಕೆ ತಕ್ಕಂತೆ ನಡೆದರೂ ನಾಗರಪೂಜೆ ಮತ್ತು ಹುತ್ತಕ್ಕೆ ಹಾಲು ಎರೆಯುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಸುಬ್ರಮಣ್ಯ ಷಷ್ಠಿಗೆ ಒಪ್ಪೊತ್ತಿನ ಉಪವಾಸ ವಾಡಿಕೆ.

ಕುಮಾರ ಷಷ್ಠೀಯ ಪೂಜಾ ವಿಧಾನ
ಮಾಘ ಮಾಸದ ಷಷ್ಠೀಯಂದು ಸುಬ್ರಹ್ಮಣ್ಯನನ್ನು ವಟುವಿನ ರೂಪದಲ್ಲಿ ಆರಾಧಿಸಲಾಗುತ್ತದೆ. ಸುಬ್ರಹ್ಮಣ್ಯನನ್ನು ವಟು(ಬ್ರಹ್ಮಚಾರಿ) ಸ್ವರೂಪದಲ್ಲಿ ಆರಾಧಿಸಲಾಗುವುದರಿಂದ ಷಷ್ಠೀ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬಿಕೆ.

ಕುಮಾರ ಷಷ್ಠೀಯ ದಿನದಂದು ಬ್ರಹ್ಮಚಾರಿಗಳಿಗೆ ಆಹ್ವಾನ ನೀಡಿ ವಸ್ತ್ರಗಳನ್ನು ಫಲತಾಂಬೂಲಗಳನ್ನಿತ್ತು ನಮಸ್ಕರಿಸುವ ಮೂಲಕ ಸುಬ್ರಹ್ಮಣ್ಯನ ಸ್ವರೂಪವನ್ನು ಪೂಜಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ. ಕರ್ನಾಟಕದಲ್ಲಿರುವ ಅನೇಕ ಸುಬ್ರಹ್ಮಣ್ಯ ದೇವಾಲಯಗಳಿರುವ ಕ್ಷೇತ್ರಗಳಲ್ಲಿ ಇಂದಿಗೂ ಈ ಆಚರಣೆ ನಡೆಯುತ್ತಿದೆ.