ಸರಳತೆಯೇ ಜೀವನದ ಧ್ಯೇಯ ಎಂಬುದಕ್ಕೆ ಅದ್ಭುತ ಮಾದರಿ ಸುಧಾ ಮೂರ್ತಿ

0
3191

ಸುಧಾ ಮೂರ್ತಿಯವರು ಒಬ್ಬ ಹೆಣ್ಣು ಮಗಳು ಎಷ್ಟು ಸಿಂಪಲ್ ಆಗಿ ಇರಬೇಕು, ಎಷ್ಟು ಆತ್ಮೀಯವಾಗಿ ಇರಬೇಕು, ಸಮಾಜದಲ್ಲಿ ಆಕೆಯ ಪಾತ್ರ ಹೇಗಿರ ಬೇಕು ಇವೆಲ್ಲವುಗಳಿಗೆ ಒಂದು ಬೆಸ್ಟ್ ಎಕ್ಸಾಮ್ ಪಲ್….!!

ಜ್ಞಾನದ ಹಿಂದೆ ಓಡುವವನಿಗೆ ಯಶಸ್ಸು ತಾನಾಗಿಯೇ ದೊರೆಯುತ್ತದೆ ಎಂಬುದನ್ನು ಅರಿತು ಜೀವನದಲ್ಲಿ ಶ್ರದ್ಧೆ, ಶಿಸ್ತು ರೂಢಿಸಿಕೊಂಡು ಮುನ್ನಡೆಯುವಂತಹ ವ್ಯಕ್ತಿಗಳ ಸಾಲನ್ನು ಎಣಿಸುವುದಾದರೆ ಮೊದಲು ನೆನಪಿಗೆ ಬರುವುದು ಸುಧಾ ಮೂರ್ತಿ. ಪರಿಶ್ರಮಕ್ಕೆ ಸರಿಯಾದ ವ್ಯಕ್ತಿ. ಕೋಟಿಗಟ್ಟಲೆ ಆಸ್ತಿ, VVIP ಸ್ಟೇಟಸ್, ಇಂಟರ್ ನ್ಯಾಷನಲ್ ಬ್ರಾಂಡ್ ಕಂಪನಿ, ಪ್ರಪಂಚದಾದ್ಯಂತ ಬ್ರಾಂಚ್ ಗಳು. ಎಲ್ಲಾ ಇದ್ರೂ ಕೂಡ ಇವರ ಬದುಕು ಎಷ್ಟು ಸರಳ ಅಂದರೆ, ಮುಡಿಗೆ ಮಲ್ಲಿಗೆಯ ಹೊರತು ಮತ್ಯಾವುದೇ ಆಭರಣವಿಲ್ಲ. “ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ” ಎಂಬ ಗಾದೆ ಮಾತಿನಂತೆ ಬಾಳುವ ಕೆಲ ಹೆಣ್ಮಕ್ಕಳು ಸುಧಾ ಮೂರ್ತಿಯವರನ್ನು ನೋಡಿ ಕಲಿಯಬೇಕು.

ಇಂತಹ ಮೇರು ವ್ಯಕ್ತಿತ್ವದ ಸುಧಾ ಮೂರ್ತಿರವರ ಜನನ 1950 ರ ಆಗಸ್ಟ್ 19 ರಂದು ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಗಳಿಗೆ ಮೂರನೇ ಮಗಳಾಗಿ ಹಾವೇರಿ ಜಿಲ್ಲೆಯಲ್ಲಿ ಜನಿಸಿದರು. ತಂದೆ ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀರೋಗ ತಜ್ಞರು ಹಾಗೂ ಪ್ರಾಧ್ಯಾಪಕರಾಗಿದ್ದರು. ತಾಯಿ ವಿಮಲಾ ಕುಲಕರ್ಣಿ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಇಂತಹ ವಿದ್ವತ್ ವಾತಾವರಣದಲ್ಲಿ ಬೆಳೆದ ಸುಧಾ ಮೂರ್ತಿರವರು ಮಾಧರಿ ವ್ಯಕ್ತಿತ್ವವನ್ನು ಪಡೆದರು. ಟಾಟ ಇಸ್ಟಿಟ್ಯೂಟ್ ಬೆಂಗಳೂರು ಎಂಬಲ್ಲಿ ಎಂ.ಇ ಯಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿಧ್ಯಾರ್ಥಿನಿ.

ಸುಧಾ ಮೂರ್ತಿಯವರನ್ನ ನೋಡಿದಾಗೆಲ್ಲ ಅವರ ಬಗ್ಗೆ ಒಂದು ಘಟನೆ ಹೇಳಲೇಬೇಕು ಎಂದೆನಿಸುತ್ತದೆ. ಅದೇನೆಂದರೆ ತಮ್ಮ ಎಂ.ಇ ಪದವಿಯನ್ನು ಮುಗಿಸಿದ ನಂತರ ತಮ್ಮ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಲು ಹೊರಟಿದ್ದಾಗ “ಕಾಲೇಜಿನ ಸೂಚನಾ ಫಲಕದಲ್ಲಿ ಟಾಟ ಸಂಸ್ಥೆ ಹುಡುಗರಿಗೆ ಮಾತ್ರ ಕೆಲಸಕ್ಕೆ ಅವಕಾಶ ಎಂದು ಬರಿದಿದ್ದ ವೃತ್ತಿ ಆಹ್ವಾನ ವಿರುತ್ತದೆ, ಇದನ್ನು ಗಮನಿಸಿದ ಸುಧಾ ಕುಲಕರ್ಣಿಯವರು ಆಗಿನ TATA ಕಂಪನಿಯ ‘ರತನ್ ಟಾಟ’ ಅವರಿಗೆ ಒಂದು ಪತ್ರ ಬರೆಯುತ್ತಾರೆ ಅದರಲ್ಲಿ ಅವರು “ಹುಡುಗಿಯರಿಗೆ ಅವಕಾಶ ಏಕಿಲ್ಲ” ಎಂದು ಹೆಣ್ಣು ಮಕ್ಕಳ ಪರ ಧ್ವನಿ ಎತ್ತುತ್ತಾರೆ. ಇದನ್ನು ಓದಿದ ರತನ್ ಟಾಟ, ಸುಧಾ ಕುಲಕರ್ಣಿಯವರ ಆತ್ಮವಿಶ್ವಾಸ ಮೆಚ್ಚಿ ಖುದ್ದಾಗಿ ಬಂದು ಸುಧಾ ಕುಲಕರ್ಣಿಯವರನ್ನ ಸಂದರ್ಶಿಸಿ ಕೆಲಸಕ್ಕೆ ಆಹ್ವಾನಿಸುತ್ತಾರೆ.

ಹೆಣ್ಣೆಂದರೆ ಕೇವಲ ಮನೆಗೆ ಮಾತ್ರ ಎಂದು ಸೀಮಿತವಾಗಿದ್ದ ಆ ಕಾಲದಲ್ಲೆ ಸುಧಾ ಕುಲಕರ್ಣಿಯವರು ಹೆಣ್ಣಿಗೆ ಗಂಡಿನಷ್ಟೇ ಸಮಾನ ಹಕ್ಕಿದೆ ಅವಳು ಕೂಡ ಗಂಡಿನ ಹಾಗೆ ಹೊರಗಡೆ ದುಡಿಯಬಲ್ಲಳು ಎಂದು ತೋರಿಸಿ ಕೊಡುತ್ತಾರೆ….!!

ಟಾಟ ಸಂಸ್ಥೆಯಲ್ಲಿ ವೃತ್ತಿ ಮಾಡುವ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಟಾಟ ಕಂಪನಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಅವರು ಕೆಲಸ ಮಾಡಿದ್ದು ಕೇವಲ ಆರು-ಏಳು ತಿಂಗಳು ಮಾತ್ರ ಅನಂತರ ಬೆಂಗಳೂರಿನ ಇನ್ಪೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣ ಮೂರ್ತಿ ಯವರನ್ನು ಪ್ರೇಮಿಸಿ ವಿವಾಹವಾಗುತ್ತಾರೆ. ಇವರು ಮದುವೆಗೆ ಖರ್ಚಾಗಿದ್ದು ಕೇವಲ ‘ನಾಲ್ಕು ನೂರು’ ರೂಪಾಯಿಗಳಂತೆ.

ಅಂದು ಕೇವಲ ನಾಲ್ಕು ನೂರು ರೂಪಾಯಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಮೂರ್ತಿ ದಂಪತಿಗಳು ಇಂದು ಲಕ್ಷಾಂತರ ಜೋಡಿಗೆ ಮದುವೆ ಮಾಡಿಸುತಿದ್ದಾರೆ, ಸುಮಾರು ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಅನಾಥರು, ವೃದ್ಧರಿಗೆ ದಾರಿ ದೀಪವಾಗಿದ್ದಾರೆ….! ಇವರ ಸರಳತೆಯ ಜೀವನ ಇಲ್ಲೇ ಗೊತ್ತಾಗುತ್ತದೆ. ಮದುವೆಯ ನಂತರ ಅಡಿಗೆ ಮನೆಗೆ ಸೀಮಿತವಾಗದೆ, ತನ್ನ ಪತಿಯೊಂದಿಗೆ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಅದನ್ನ ಬೆಳಸುವಲ್ಲಿ ಅವರೊಂದಿಗೆ ಸರಿಸಮಾನವಾಗಿ ನಿಂತು, ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಇದಷ್ಟೇ ಮಾತ್ರವಲ್ಲದೆ, ಇಂದು ಅದೆಷ್ಟೆಷ್ಟೋ ಊರುಗಳಲ್ಲಿ ಗ್ರಂಥಾಲಯಗಳು, ಶಾಲೆಯಲ್ಲಿನ ಕಲಿಕೆಯ ವ್ಯವಸ್ಥೆಗಳು, ನೈಸರ್ಗಿಕ ಸ್ವಚ್ಛತೆಯ ಸೌಲಭ್ಯಗಳು ಹೀಗೆ ಹಲವಾರು ಸಮಾಜಾಭಿವೃದ್ದಿ ಕಾರ್ಯಗಳನ್ನು ಇನ್ಫೋಸಿಸ್ ಫೌಂಡೇಷನ್ ಮೂಲಕ ಸಂಚಲನಗೊಳ್ಳಲು ನೀಡಿರುವ ಕೊಡುಗೆ ಮಹೋನ್ನತವಾದದ್ದು. ಅಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ನಿರಂತರವಾಗಿ ತೊಡಗಿಸಿ ಹಲವಾರು ಲೇಖನಗಳನ್ನು ನೀಡಿದ್ದಾರೆ. ಡಾ.ಸುಧಾ ಎನ್ ಮೂರ್ತಿಯವರು ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲೂ ಕೃತಿಗಳ ರಚನೆಯನ್ನು ಮಾಡಿದ್ದಾರೆ. ಅದರಲ್ಲೂ ಕನ್ನಡ ಸಾಹಿತ್ಯವೆಂದರೆ ಅಪಾರ ಒಲವು ಗೌರವ. ಹೀಗಾಗಿ ತನ್ನ ಕೈಲಾದಷ್ಟು ಕನ್ನಡ ರಚನಾ ಕಾರ್ಯದಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸುಮಾರು 16ಕ್ಕಿಂತ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಕೂಡ ಪ್ರಕಟವಾಗಿವೆ.

ಸುಧಾಮೂರ್ತಿಅವರಿಗೆ ಕಾಲೇಜ್ ನ ದಿನಗಳಿಂದಲೂ ಅನೇಕ ಪ್ರಶಸ್ತಿ/ಗೌರವ/ಪುರಸ್ಕಾರಗಳು ದೊರೆಯುತ್ತಲಿವೆ. ಇಂದಿಗೂ ಕೂಡ ಸುಧಾಮೂರ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿ ವರ್ಷವೂ ಉತ್ತರ ಕರ್ನಾಟಕದ ಲೇಖಕಿಯರಿಗೆ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಮೂರ್ತಿ ದಂಪತಿಗಳನ್ನ ನೋಡಿ ಹೇಳಿರಬೇಕು ಎಂದು ಅನಿಸುತ್ತದೆ….!! ಕೋಟಿಗಟ್ಟಲೆ ಹಣವಿದ್ದರೂ, ಸಮಾಜದಲ್ಲಿ ಒಳ್ಳೆಯ ಹೆಸರಿದ್ದರೂ ಒಂಚೂರು ಆಡಂಭರವಿಲ್ಲದೆ, ಸಮಾಜದ ಏಳಿಗೆಗಾಗಿ ಸರಳವಾಗಿ ಬಾಳುತಿರುವ ಇವರು ಎಲ್ಲರಿಗೂ ಆದರ್ಶ.
ಇವರ ಬಗ್ಗೆ ಬರೆದಷ್ಟು ಕಡಿಮೆ ಎನಿಸುತ್ತದೆ, ಅಷ್ಟು ಮೇರು ವ್ಯಕ್ತಿತ್ವದ ಮಹಿಳೆ ಸುಧಾ ಮೂರ್ತಿ.

thenewsism ತಂಡ ಇವರ ಸಾಧನೆಗೆ ಅಭಿನಂದಿಸುತ್ತೇವೆ. ಸುಧಾ ಮೂರ್ತಿಯವರು ಸದಾ ಹೀಗೆ ನಗು-ನಗುತಾ ನೂರು ಕಾಲ ಬಾಳಲಿ, ಅವರ ಬಾಳು ಎಂದೆಂದೂ ಹಸಿರಾಗೆ ಇರಲಿ ಎಂದು ಹಾರೈಸುತ್ತೇವೆ.