ಮಹಾನ್ ವಿಜ್ಞಾನಿ ನಿಕೊಲಸ್ ಕೋಪರ್ನಿಕಸ್

0
854

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳು ಈ ಜಗತ್ತಿಗೆ ಹಲವು ವಿಷಯಗಳನ್ನು ಸಂಶೋಧಿಸಿ ತಿಳಿಸಿದ್ದಾರೆ. ನಾವು ಇರುವ ಭೂಮಿಯನ್ನೂ ಒಳಗೊಂಡಂತೆ ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಲ್ಲದರ ಬಗ್ಗೆ ಹಲವಾರು ವಿಷಯಗಳ ಹೊಸ ಆವಷ್ಕಾರ ಆಗುತ್ತಲೇ ಇರುತ್ತದೆ. ನಮ್ಮ ಈ ವಿಶ್ವಕ್ಕೆ ಕೇಂದ್ರ ಭೂಮಿಯಲ್ಲ, ಸೂರ್ಯ ಎಂಬ ವಾದವನ್ನು ಮಂಡಿಸಿ, ಸ್ಥಾಪಿಸಿದ ವಿಜ್ಞಾನಿ ನಿಕೊಲಾಸ್ ಕೋಪರ್ನಿಕಸ್.

ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದ ನಿಕೊಲಾಸ್ ಕೋಪರ್ನಿಕಸ್ ಖಗೋಳ ವಿಜ್ಞಾನಕ್ಕೆ ಹೊಸ ತಿರುವು ನೀಡಿದ ವಿಜ್ಞಾನಿ. ಮೂಲತಃ ಕಲಿತದ್ದು ವೈದ್ಯಕೀಯವಾದರೂ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದ ಕಡೆಗಿತ್ತು. ಹಾಗಾಗಿ ವೈದ್ಯಕೀಯ ಕಲಿತ ನಂತರವೂ ವ್ಯಾಸಂಗ ಮುಂದುವರೆಸಿದರು. ಬೊಲೊನ ವಿಶ್ವವಿದ್ಯಾಲಯದಲ್ಲಿ ಖಗೋಳ ಶಾಸ್ತ್ರ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾದರು. ನಂತರ ಇದನ್ನೂ ಬಿಟ್ಟು ಮತ್ತೆ ವೈದ್ಯವೃತ್ತಿ ಆರಂಭಿಸಿದರು.

ಬಡವರ ಬಗ್ಗೆ ಪ್ರೀತ್ಯಾದರ ಇದ್ದ ಕರುಣಾಮಯಿಯಾಗಿದ್ದ ಕೋಪರ್ನಿಕಸ್ ಬಡಬಗ್ಗರಿಗೆ ಪುಕ್ಕಟೆ ಔಷಧಿ ಕೊಡುತ್ತಿದ್ದರು.ಆಕಾಶಕಾಯಗಳ ಚಲನೆಯನ್ನು ವಿವರಿಸಿ ವಿಶ್ವದ ನಟ್ಟನಡುವೆ ಸೂರ್ಯ, ಅವನ ಸುತ್ತ ಭೂಮಿ ಇತ್ಯಾದಿ ಗ್ರಹಗಳು ವೃತ್ತಾಕಾರದಲ್ಲಿ ಚಲಿಸುತ್ತಿವೆ ಎಂಬ ವಾದವನ್ನು ಪ್ರತಿಪಾದಿಸಿದರು. ಭೂಮಿಯು ಆಕಾಶಕಾಯಗಳಾದ ಚಂದ್ರ, ಸೂರ್ಯ ಹಾಗೂ ಸುತ್ತಮುತ್ತಲಿನ ಇತರ ಕಾಯಗಳೊಂದಿಗೆ ಸಂಬಂಧ ಹೊಂದಿರುವ ಬಗೆಯನ್ನು ವಿವರಿಸಿದರು. ಇದನ್ನು ಆರಂಭದಲ್ಲಿ ಹಲವು ಚಿಂತಕರು ಅಷ್ಟಿಷ್ಟು ಊಹಿಸಿದ್ದರು. ಆದರೆ ಎಲ್ಲವನ್ನೂ ಆಧಾರವಾಗಿಟ್ಟುಕೊಂಡ ಚರ್ಚ್‍ನ ಮೌಢ್ಯದ ವಿರುದ್ಧ ಕೋಪರ್ನಿಕಸ್ ಕೆಲಸ ಮಾಡಿದನು.

ದೀರ್ಘಕಾಲದ ಧಾರ್ಮಿಕ ವಿರೋಧ ಎದುರಿಸಿದನು.ಮುಂದಿನ ದಿನಗಳಲ್ಲಿ ಕೆಪ್ಲರ್, ಗೆಲಿಲಿಯೋ, ನ್ಯೂಟನ್ ಮುಂತಾದ ವಿಜ್ಞಾನಿಗಳ ಸಂಶೋಧನೆಗಳು ಕಾಲಕ್ಕನುಗುಣವಾಗಿ ತೀವ್ರ ಸವಾಲುಗಳನ್ನು ಎದುರಿಸಿಯೂ ಕೋಪರ್ನಿಕಸ್ ಚಿಂತನೆ ಆಧರಿಸಿ ಅವರ ಶ್ರೇಷ್ಠ ಚಿಂತನೆಯನ್ನು ಜಗತ್ತು ಒಪ್ಪುವಂತೆ ಮಾಡಿದೆ. ಪೊಲಿಷ್, ಜರ್ಮನ್, ಲ್ಯಾಟಿನ್, ಗ್ರೀಕ್ ಭಾಷೆಗಳನ್ನು ಅರಿತಿದ್ದ ಕೋಪರ್ನಿಕಸ್ ಸರ್ವತೋಮುಖ ಪ್ರಜ್ಞೆಯ ವ್ಯಕ್ತಿಯಾಗಿದ್ದರು. ಪುನರುತ್ಥಾನ ಕಾಲದ ಚಿಂತಕ ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು.

ಕ್ರಿಸ್ತ ಸನ್ಯಾಸಿಯೂ ಆಗಿದ್ದ ಅವರು ರೆವಲೂಷನ್ ಪುಸ್ತಕದಲ್ಲಿ ತಿಳಿಸಿರುವಂತೆ ತ್ರಿಕೋನಮಿತಿಯನ್ನು ಹಲವು ವಿಧದಲ್ಲಿ ಬಳಸಿದ ಶ್ರೇಷ್ಟ ಗಣಿತಜ್ಞ. ಮೇ. 24, 1543ರಂದು ಕೋಪರ್ನಿಕಸ್ ನಿಧನ ಹೊಂದಿದರು.