ರಾಮಜನ್ಮಭೂಮಿ ಜಮೀನು ರಾಮನ ಪಾಲು; ಅಯೋಧ್ಯೆ ವಿವಾದಾತ್ಮಕ ಸ್ಥಳದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್‍ ತೀರ್ಪು.!

0
209

ನೂರಾರು ವರ್ಷದಿಂದ ಇಡಿ ಪ್ರಪಂಚವೇ ಕುತೂಹಲದಿಂದ ಕಾದು ಕುಳಿತ್ತಿದ್ದ ಅಯೋಧ್ಯೆ ವಿವಾದಕ್ಕೆ ಇಂದು ಜಯ ಸಿಕ್ಕಿದ್ದು ರಾಮಜನ್ಮಭೂಮಿ ಜಮೀನು ರಾಮನ ಪಾಲಾಗಿದ್ದು, ಎರಡು ಧರ್ಮವನ್ನು ಕೂಡ ಎತ್ತಿ ಹಿಡಿದು ತೀರ್ಪು ನೀಡಿದೆ ಎನ್ನಬಹುದು. ಅಯೋಧ್ಯೆ ವಿವಾದಾತ್ಮಕ ಸ್ಥಳದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಹಸಿರುನಿಶಾನೆ ತೋರುವ ಮೂಲಕ ಶತಮಾನದ ವಿವಾದಕ್ಕೆ ಮುಕ್ತಿ ಹಾಡಿ ಸರ್ವಾನುಮತದ ಐತಿಹಾಸಿಕ ತೀರ್ಪು ನೀಡಿದೆ.

ಏನಿದು ತೀರ್ಪು?

ಅಯೋಧ್ಯೆಯ ವಿವಾದಾತ್ಮಕ 2.77 ಎಕರೆ ಸ್ಥಳ ರಾಮ್ ಲಲ್ಲಾ ಒಡೆತನಕ್ಕೆ ಸೇರಿದೆ ಎಂದು ತೀರ್ಪು ನೀಡಿ ರಾಮಮಂದಿರ ನಿರ್ಮಾಣವನ್ನು ಕೇಂದ್ರ ಸರ್ಕಾರದ ಹೊಣೆಗೆ ನೀಡಿದ್ದು ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಈ ಮೂಲಕ ಅತಿ ಹಳೆಯ ವಿವಾದಕ್ಕೆ ತೆರೆ ಎಳೆದಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ನ್ಯಾಯಮೂರ್ತಿಗಳ ಎಸ್.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್
ಅವರನ್ನೊಳಗೊಂಡ ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ 30 ನಿಮಿಷದಲ್ಲೇ ಶತಮಾನದ ವಿವಾದಕ್ಕೆ ತೆರೆ ಎಳೆಯಿತು. ಈವರೆಗೂ ಅಯೋಧ್ಯೆಯ ರಾಮಜನ್ಮ ಭೂಮಿ ತನಗೆ ಸೇರಬೇಕೆಂದು ಪ್ರತಿಪಾದಿಸಿದ್ದ ಸುನ್ನಿ ವಕ್ಫ್ ಬೋರ್ಡ್‍ಗೆ ಅಯೋಧ್ಯೆಯಲ್ಲೇ 5 ಎಕರೆ ಪರ್ಯಾಯ ಜಮೀನು ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೆ ಈ ಜಮೀನು ತನಗೇ ನೀಡಬೇಕೆಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದ ನಿರ್ಮೋಹಿ ಅಖಾಡ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು.

ಇದೇ ತಿಂಗಳ 17ರಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ನವೆಂಬರ್​ 17ರಂದು ತೀರ್ಪು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಿದೆ. ನ್ಯಾಯಮೂರ್ತಿಗಳು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದರು. ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು. ಬಾಬರ್​ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತ ತತ್ವದಡಿಯಲ್ಲಿ. ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯ ಪಟ್ಟಿತು.

ಅದರ ಜತೆಗೆ ನಿರ್ಮೋಹಿ ಅಖಾಡ ಮತ್ತು ಶೀಯಾ ವಕ್ಫ್​ ಬೋರ್ಡ್​ ಸಲ್ಲಿಸಿದ್ದ ಹಕ್ಕುದಾರಿಕೆ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿತು. ಫೈಜಾಬಾದ್​ ಕೋರ್ಟ್​ ಅರ್ಜಿಯನ್ನೂ ನ್ಯಾಯಮೂರ್ತಿಗಳು ವಜಾಗೊಳಿಸಿದರು. ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು, ಸಂಪೂರ್ಣ ತೀರ್ಪು ಓದಲು 30 ನಿಮಿಷ ಬೇಕು ಎಂದು ಹೇಳಿದರು. ಎಲ್ಲಾ ಧರ್ಮಗಳ ನಂಬಿಕೆಯನ್ನೂ ಸುಪ್ರೀಂ ಕೋರ್ಟ್​ ಗೌರವಿಸುತ್ತದೆ ಮತ್ತು ನಂಬಿಕೆಗಳಿಗೆ ಧಕ್ಕೆ ಮಾಡುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿತು. ಮಸೀದಿಯಲ್ಲಿ ನಮಾಜ್​ ಮಾಡುವ ನಂಬಿಕೆ ಪ್ರಶ್ನಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಂಬಿಕೆ ಮತ್ತು ಸಾಕ್ಷಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ ಎಂದ ಸುಪ್ರೀಂ, ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು ಎಂದು ಅಭಿಪ್ರಾಯ ಪಟ್ಟಿತು. ಒಟ್ಟಾರೆಯಾಗಿ ಹಿಂದೂಗಳಿಗೆ ‘ಅಯೋಧ್ಯೆ ಜಯ’, ಮುಸಲ್ಮಾನರಿಗೆ ಪರ್ಯಾಯ ಜಾಗ ಎನ್ನುವ ತೀರ್ಪು ಇದಾಗಿದೆ.