ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಉಜ್ಜಿರೆ ‘ಸೂರ್ಯ ದೇವಸ್ಥಾನ’ದ ವಿಶಿಷ್ಟ ಧಾರ್ಮಿಕ ಆಚರಣೆ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳಿ

1
4296

ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ.!

ಶ್ರೀ ಸದಾಶಿವ ರುದ್ರ ದೇವಸ್ಥಾನ “ಸೂರ್ಯ ದೇವಸ್ಥಾನ” ಎಂದೇ ಪ್ರಖ್ಯಾತಿಯಾಗಿದೆ. ಶ್ರೀ ಸದಾಶಿವ ದೇವಸ್ಥಾನ ಒಂದು ವಿಶಿಷ್ಟ ಧಾರ್ಮಿಕ ಆಚರಣೆಗೆ ಪ್ರಸಿದ್ಧಿ ಪಡೆದಿದೆ. ಸಾಮಾನ್ಯವಾಗಿ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಹಣ,ಚಿನ್ನವನ್ನು ಅರ್ಪಿಸುತ್ತಾರೆ. ಆದರೆ ಈ ದೇವಸ್ಥಾನದಲ್ಲಿ ಮಣ್ಣಿನ ಗೊಂಬೆಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. 13ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಬಾಂಗಾ ಅರಸರು ದೇವಳದ ಅಭಿವೃದ್ಧಿಗೆ ಕಾರಣಕರ್ತರು ಎಂದು ಹೇಳಲಾಗಿದೆ. ಈ ಬಗ್ಗೆ ದೇವಳದ ಗರ್ಭಗುಡಿಯ ಎದುರು ಇರುವ ನಂದೀಶನ ಮೂರ್ತಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಸೂರ್ಯ ದೇವಾಲಯದ ಹಿಂದಿರುವ ದಂತ ಕತೆ

ಹಿಂದೆ ಹೆಂಗಸೊಬ್ಬಳು ತನ್ನ ಮಗ ಸುರೆಯನೊಂದಿಗೆ ಕಾಡಿಗೆ ಸೊಪ್ಪು ತರಲು ಹೋಗಿದ್ದಳು. ಆ ಸಂದರ್ಭ ಸೊಪ್ಪಿನೆಡೆ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿ ಹರಿಯಿತು. ಗಾಬರಿಗೊಂಡ ಆಕೆ ತನ್ನ ಮಗನನ್ನು ‘ಓ, ಸುರೆಯ…’ಎಂದು ಕೂಗಿದಳು, ಆ ಘಟನೆ ಬಳಿಕ ಕ್ಷೇತ್ರಕ್ಕೆ ಸುರಿಯ, ಸುರ್ಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಆ ಲಿಂಗ ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತಂತೆ.

ದೇವಸ್ಥಾನದ ಉತ್ತರಕ್ಕೆ ಸುಮಾರು ೧೦೦ ಮೀ. ದೂರದಲ್ಲಿ ಪ್ರಶಾಂತವಾದ ವನರಾಶಿಯ ಮಧ್ಯೆ ಮೇಲಿನ ಘಟನೆ ನಡೆಯಿತೆಂದು ಹೇಳಲಾಗುವ ಪ್ರದೇಶ ಹರಕೆಬನ ಇದೆ. ಮಣ್ಣಿನ ಮೂರ್ತಿಯೇ ಇಲ್ಲಿನ ಹರಕೆ. ಭಕ್ತರ ಪ್ರಾರ್ಥನೆಗೆ ಸ್ಪಂದಿಸುವ ರುದ್ರ ಪ್ರತಿಫಲವಾಗಿ ಮಣ್ಣಿನ ಮೂರ್ತಿಯನ್ನಷ್ಟೇ ಬಯಸುತ್ತಾನೆ ಎಂಬುದು ಆರಾಧಕರ ನಂಬಿಕೆ. ಭಕ್ತಾದಿಗಳು ತಾವು ಇರುವ ಜಾಗದಿಂದಲ್ಲೇ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಬಹುದು. ಸಂಕಲ್ಪಈಡೇರಿದ ನಂತರ ದೇವಸ್ಥಾನಕ್ಕೆ ಬಂದು ಮಣ್ಣಿನ ಗೊಂಬೆಗಳನ್ನು ಅರ್ಪಿಸಬಹುದು. ಅದಕೆಂದು ದೇವಸ್ಥಾನಕ್ಕೆ ಬರುವ ಅವಶ್ಯಕತೆ ಇಲ್ಲ.

ಹರಕೆ ಬನದ ಮೂಲದ ಬಗ್ಗೆ ಇರುವ ಸ್ಥಳಪುರಾಣ ಕಥೆ
ಭೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ನೆಲೆಯಾದರು ಎಂಬ ಪ್ರತೀತಿ ಇದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳೂ ಇವೆ ಅಂತೆ.

surya temple ujire2
source: temple-of-secrets.blogspot.in

ಕೇಳಿಕೊಂಡ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಅಕ್ಕಿ-ತೆಂಗಿನಕಾಯಿ ಇಟ್ಟ ಹರಿವಾಣದಲ್ಲಿ ಮಣ್ಣಿನ ಗೊಂಬೆ ಇಟ್ಟು ಬನಕ್ಕೆ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಅರ್ಪಿಸುವ ಮಣ್ಣಿನ ಗೊಂಬೆಗಳು ದೇವಸ್ಥಾನದಲ್ಲೆ ದೊರೆಯುತ್ತದೆ. ಈ ಗೊಂಬೆಗಳನ್ನು ಕೆಮ್ಮಣುನಿಂದ ಮಾಡಿರುತ್ತಾರೆ. ಇಲ್ಲಿ ದನ-ಕರು, ತಾಯಿ-ಮಗು, ಮನುಷ್ಯ, ಹೃದಯ, ಮೂತ್ರಪಿಂಡ, ಬೈಕ್, ಕಾರು, ಮನೆ, ಬೆಕ್ಕು, ನಾಯಿ, ಕಟ್ಟಡ, ಬಸ್, ವಿಮಾನ, ಕುರ್ಚಿ, ಮೇಜು, ಕಂಪ್ಯೂಟರ್, ಮೊಬೈಲ್… ಹೀಗೆ ಎಲ್ಲವೂ ಈ ಬನದಲ್ಲಿ ಹರಕೆಯ ವಸ್ತುಗಳಾಗಿ ಕಾಣಸಿಗುತ್ತದೆ.

surya temple ujire3
source: temple-of-secrets.blogspot.in

ದೇವಸ್ಥಾನದ ಪೂರ್ಣ ವಿಳಾಸ:
ಶ್ರೀ ಸದಾಶಿವ ರುದ್ರ ದೇವಸ್ಥಾನ (ಸೂರ್ಯ)
ನಡ ಗ್ರಾಮ, ಪೆರ್ಮಾನು, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ-೫೭೪೨೧೪
(ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ 13 ಕಿಮೀ. ಬೆಳ್ತಂಗಡಿಯಿಂದ ಕಿಲ್ಲೂರು ಮಾರ್ಗವಾಗಿ 8 ಕಿಮೀ.)

ದೇವರ ದರ್ಶನ: ಬೆಳಗ್ಗೆ 7.30 ರಿಂದ 2ಗಂಟೆ ವರೆಗೆ ಮತ್ತು ಸಂಜೆ 4 ರಿಂದ 6.30 ವರೆಗೆ
ಪೂಜಾ ಸಮಯ: ಬೆಳೆಗ್ಗಿನ ಪೂಜೆ 8 ಗಂಟೆಗೆ, ಮದ್ಯಾಹ್ನ ಪೂಜೆ 1 ಗಂಟೆಗೆ , ಸಂಜೆಯ ಪೂಜೆ 7 ಗಂಟೆಗೆ