ವಿವೇಕಾನಂದರು ಇಂಗ್ಲೀಷ್‍ ಪರೀಕ್ಷೆಯಲ್ಲಿ ಪಡೆದ ಅಂಕ 47, 46, 56..!

0
801

ಸ್ವಾಮಿ ವಿವೇಕಾನಂದರು ಇಂಗ್ಲೀಷ್‍ ಭಾಷೆಯಲ್ಲೂ ಸಾಕಷ್ಟು ಪಾಂಡಿತ್ಯ ಪಡೆದಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅಮೆರಿಕದಲ್ಲಿ ಅವರು ಮಾಡಿದ ಭಾಷಣ ಈಗಲೂ ಪ್ರತಿಧ್ವನಿಸುತ್ತಲೇ ಇದೆ. ಆದರೆ ಪರೀಕ್ಷೆಗಳಲ್ಲಿ ಅವರು ಪಡೆದ ಅಂಕಗಳು ಸಾಧಾರಣ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

`ದಿ ಮಾಡರ್ನ್‍ ಮಾಂಕ್‍: ವಿವೇಕಾನಂದ ಮೀನ್ಸ್‍ ಟು ಅಸ್‍ ಟುಡೆ’ (ಆಧುನಿಕ ಸನ್ಯಾನಿ: ಈಗಿನ ಕಾಲದಲ್ಲಿ ನಮ್ಮ ಪಾಲಿಗೆ ವಿವೇಕಾನಂದರು) ಎಂಬ ಕೃತಿಯಲ್ಲಿ ಈ ಕುತೂಹಲಾರಿ ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಹಿಂದೊಲ್ ಸೇನ್‍ಗುಪ್ತ ರಚಿಸಿರುವ ಕೃತಿಯಲ್ಲಿ ಈಗಿನ ಕಾಲದ ಯುವ ಸಮುದಾಯಕ್ಕೆ ವಿವೇಕಾನಂದರು ಹೇಗೆ ಆದರ್ಶಪ್ರಾಯರಾಗುತ್ತಾರೆ ಎಂಬ ಬಗ್ಗೆ ಸವಿಸ್ತರವಾಗಿ ಚರ್ಚಿಸಲಾಗಿದೆ.

ಸಿದ್ಧಾಂತ, ವೇದಾಂತಗಳ ಪ್ರತಿಪಾದಕ ಮಾತ್ರವಲ್ಲ, ಪ್ರತಿಯೊಂದನ್ನೂ ಪ್ರಶ್ನಿಸಿ ಉತ್ತರ ಕಂಡುಕೊಳ್ಳುವ ಹೊಸ ದಾರಿ ಹುಡುಕಿಕೊಟ್ಟ ವಿವೇಕಾನಂದರು ಸರ್ವಕಾಲಕ್ಕೂ ಆದರಣೀಯರಾಗಿದ್ದಾರೆ.

ಶ್ರೀಮಂತ ವಕೀಲರ ಪುತ್ರರಾಗಿದ್ದ ವಿವೇಕಾನಂದರಿಗೆ ಅತ್ಯುನ್ನತ ಶಿಕ್ಷಣ ಕಷ್ಟಸಾಧ್ಯವೇನಾಗಿರಲಿಲ್ಲ. ಕೊಲ್ಕತಾದ ಮೆಟ್ರೊಪಾಲಿಟನ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಆದ್ದರಿಂದಲೇ ಅವರಿಗೆ ಆಂಗ್ಲ ಭಾಷೆ ಸರಾಗವಾಗಿ ಮಾತನಾಡಲು ಸಾಧ್ಯವಾಯಿತು ಎಂದು ಲೇಖಕರು ವಿವರಿಸಿದ್ದಾರೆ.

ವಿವೇಕಾನಂದರು ಮೂರು ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಫಸ್ಟ್‍ ಆರ್ಟ್ಸ್ ಸ್ಟ್ಯಾಂಡರ್ಸ್‍ (ಎಫ್‍ಎ), ನಂತರ ಬ್ಯಾಚಲರ್‍ ಆಫ್‍ ಆರ್ಟ್ಸ್ (ಬಿಎ) ಮತ್ತು ಬಿಎ ಎಂಟ್ರೆನ್ಸ್‍ ಪರೀಕ್ಷೆಗಳಲ್ಲಿ ತಲಾ ಶೇ. 47, 46 ಮತ್ತು 56 ರಷ್ಟು ಅಂಕ ಪಡೆದಿದ್ದರು.

ಇಂಗ್ಲೀಷ್‍ನಲ್ಲಿ ಮಾತ್ರವಲ್ಲ, ಗಣಿತ ಮತ್ತು ಸಂಸ್ಕೃತ ಭಾಷಾ ಪರೀಕ್ಷೆಗಳಲ್ಲೂ ವಿವೇಕಾನಂದರು ಗಳಿಸಿದ ಅಂಕ ಸರಾಸರಿ ಅಷ್ಟೇ ಎಂದು ಲೇಖಕರು ವಿವರಿಸಿದ್ದಾರೆ.

ಶಾಲಾ-ಕಾಲೇಜು ದಿನಗಳಲ್ಲಿ ಸರಾಸರಿ ಅಂಕಗಳನ್ನು ಪಡೆದಿದ್ದರೂ ವಿವೇಕಾನಂದರ ಭಾಷಾ ಪಾಂಡಿತ್ಯ ಅದ್ಭುತವಾಗಿತ್ತು. ಅವರ ಪ್ರತಿಯೊಂದು ಪತ್ರಗಳು ಇದಕ್ಕೆ ಸಾಕ್ಷಿಯಾಗಿವೆ.