ಸಡಗರದ ಸ್ವರ್ಣ ಗೌರಿ ಹಬ್ಬದ ವಿಶಿಷ್ಟತೆ ಮತ್ತು ವ್ರತಾಚರಣೆ ಮಾಡುವ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ..!

0
1385

ಭಾದ್ರಪದ ಶುದ್ಧ ತದಿಗೆಯೇ ಗೌರಿ ತದಿಗೆ. ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ಗೌರಿ ಹಬ್ಬ ಎಂದರೆ ಮುಖ್ಯವಾಗಿ ಹೆಂಗಳೆಯರ ಹಬ್ಬ ಎಂದೇ ಖ್ಯಾತಿ. ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ. ಗೌರಿ ತವರಿಗೆ ಬರುವಳೆಂದರೆ ಇಡೀ ನಾಡೇ ಸಂಭ್ರಮಿಸುತ್ತದೆ. ಗೌರಮ್ಮನನ್ನು ಎಲ್ಲರ ಮನೆಯಲ್ಲಿ ಕುರಿಸುವುದಿಲ್ಲ. ಪದ್ಧತಿ ಇದ್ದವರು ಮಾತ್ರ ಕೂರಿಸುವರು. ಉಳಿದವರು ಗೌರಿ ಇತ್ತ ಮನೆಗೆ ಹೋಗಿ ಪೂಜೆಮಾಡಿ ಬರುವ ವಾಡಿಕೆ ಇದೆ.

ಇತ್ತೀಚಿನ ದಿನಗಳಲ್ಲಿ ಅಣಿಮಾಡಿದ ಸಾಮಾನುಗಳನ್ನು ತೆಗೆದುಕೊಂಡು ಗೌರಿ ಮನೆಗೆ ಹೋಗುವುದು ಕಷ್ಟಸಾಧ್ಯವೆಂದು ಅವರವರ ಮನೆಯಲ್ಲಿ ಅರಿಶಿನದ ಗೌರಿಮಾಡಿಕೊಂಡು, ಗಂಗೆ ತುಂಬಿಟ್ಟುಕೊಂಡು ಪೂಜೆ ಮಾಡುವ ಸಂಪ್ರದಾಯ ಬಂದಿದೆ. ಕೆಲವರು ಮಾತ್ರ ಗೌರಿಮನೆಗೆ ಹೋಗಿ ವ್ರತ ಮಾಡಿಕೊಂಡು ಬರುವರು. ಕರ್ನಾಟಕದಲ್ಲಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಎರಡೂ ಜತೆ ಜತೆಯಲ್ಲಿಯೇ ಆಚರಿಸಲಾಗುತ್ತಿದೆ. ಇದು ದೇವಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.

ಗೌರಿ ಎಂಬುದು ಪರಮೇಶ್ವರನ ಪತ್ನಿ ಪಾರ್ವತಿಯ ಮತ್ತೊಂದು ಹೆಸರು. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಈ ಹಬ್ಬ ಭಾದ್ರಪದ ತೃತೀಯಾ ದಿನದಂದು ಬರುತ್ತದೆ. ಮೂರನೆಯ ದಿನ ಚೌತಿ ಎಂದರೆ ವಿನಾಯಕ ಚೌತಿ. ಆ ದಿನ ಆಕೆಯ ಮಗ ಗಣಪ(ವಿನಾಯಕ)ಬಂದು ಆಕೆಯನ್ನು ಗಂಡನ ಮನೆಗೆ ಕರೆದೊಯ್ಯುತ್ತಾನೆ ಎಂಬುದು ಪೌರಾಣಿಕ ಹಿನ್ನಲೆ.

ಸ್ವರ್ಣ ಗೌರಿ ಪೂಜಾ ವಿಧಾನ

ಈ ದಿನ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ. ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ.
“ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ ಮಯಾದತ್ತಾಣಿ ಸೂರ್ಪಾಣಿ ಗೃಹಾಣಿ ಮಾನಿ ಜಾನಕಿ ‘

ದೇವರ ವಿಸರ್ಜನೆ ಮಾಡುವ ವಿಧಾನ

ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ (ತೆಂಗಿನಕಾಯಿ ಅಥವಾ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ, ಬೆಲ್ಲದಚ್ಚು, ಬಳೆ ಬಿಚ್ಚೋಲೆ, ವಿಳ್ಳೆದೆಲೆ, ಅಡಿಕೆ, ದಕ್ಷಿಣೆ, ಸೀರೆ, ಎರೆಡು ರವಿಕೆ ಕಣಗಳು) ಇಡಬೇಕು. ನಂತರ ಮಂಗಳಾರತಿ ಮಾಡಿ ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು.

“ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ”.

ಸ್ವರ್ಣಗೌರಿ ಹಬ್ಬದ ದಿನ ಈ ಮೇಲಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.