ರುಚಿಕರವಾದ ತಂಬಿಟ್ಟು ಮಾಡುವುದು ಹೇಗೆ????

0
2033

ಮಂಗಳ ಗೌರಿ ಪೂಜೆಯಲ್ಲಿ ನೈವೇದ್ಯರೂಪದಲ್ಲಿರುವ ತಂಬಿಟ್ಟು ವಿಶೇಷ- ರುಚಿಕಟ್ಟಾದ ತಂಬಿಟ್ಟು ಮಾಡುವ ಬಗೆ!

ಮಂಗಳ ಗೌರಿ ವ್ರತಕ್ಕೆ ಪೂಜಾಸಾಮಾಗ್ರಿಗಳ ಹೊರತಾಗಿ ಅಗತ್ಯವಾಗಿ ಬೇಕಾಗಿರುವುದೆಂದರೆ ಅದೇ ‘ತಂಬಿಟ್ಟು’ . ದೇವರ ಪೂಜೆಯಲ್ಲಿ ನೈವೇದ್ಯರೂಪದಲ್ಲಿರುವ ತಂಬಿಟ್ಟು ಬಳಿಕ ಪ್ರಸಾದದ ರೂಪದಲ್ಲಿ ಮನೆಯ ಸದಸ್ಯರೆಲ್ಲರ ಮನ ಗೆಲ್ಲುವುದು ಖಚಿತ. ರುಚಿಕರವಾದ ತಂಬಿಟ್ಟು ಮಾಡುವುದು ಹೇಗೆ ಎಂಬುದನ್ನು ಈಗ ನೋಡೋಣ…

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಹತ್ತು ನಿಮಿಷಗಳು

ತಯಾರಿಕಾ ಸಮಯ: ಹತ್ತು ನಿಮಿಷಗಳು

17-1439816268-tambittu

ಅಗತ್ಯವಿರುವ ಸಾಮಾಗ್ರಿಗಳು:

*ಗೋಧಿಹಿಟ್ಟು – ಒಂದು ಕಪ್
*ಬೆಲ್ಲ – ಒಂದು ಕಪ್ (ಉಂಡೆಗಳನ್ನು ಪುಡಿ ಮಾಡಿ ನಯವಾಗಿಸಿದ್ದು)-ಸಾಧ್ಯವಾದಷ್ಟು ಕಂದು ಬಣ್ಣದ ಮತ್ತು ಗಡುಸಾಗಿರದ ಬೆಲ್ಲವನ್ನೇ ಆರಿಸಿ. ಬೆಲ್ಲ ಎರಡು ಬೆರಳುಗಳಲ್ಲಿ ಮುರಿಯುವಂತಿದ್ದರೆ ಉತ್ತಮ. ಬಿಳಿ ಬೆಲ್ಲ ಬೇಡ, ಏಕೆಂದರೆ ಇದು ತಂಬಿಟ್ಟನ್ನು ಅತೀವ ಗಡಸಾಗಿಸುತ್ತದೆ.
*ತುಪ್ಪ – ಮುಕ್ಕಾಲು ಕಪ್
*ನೀರು – ಒಂದೂವರೆ ಕಪ್

ವಿಧಾನ:

1) ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಪೂರ್ಣವಾಗಿ ಕರಗುವವರೆಗೆ ಕಾಯಿರಿ.
2) ಈಗ ಗೋಧಿ ಹಿಟ್ಟು ಹಾಕಿ ಒಂದು ಕ್ಷಣವೂ ಬಿಡದೇ ತಿರುವುತ್ತಾ ಇರಿ (ಒಂದು ಕ್ಷಣ ಮೈಮರೆತರೂ ತಳ ಸುಡುವ ಮೂಲಕ ರುಚಿ ಕಹಿಯಾಗುತ್ತದೆ)
3) ಗೋಧಿ ಹಿಟ್ಟು ಸುಮಾರು ಕೆಂಪು ಬಣ್ಣ ಬರುವವರೆಗೆ ಹುರಿದ ಬಳಿಕ ಒಲೆ ಆರಿಸಿ ಒಂದು ಅಗಲವಾದ ತಟ್ಟೆಯಲ್ಲಿ ಹರಡಿ.
4) ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಹಾಕಿ ಕುದಿಸಿ. ಕುದಿ ಬರಲು ತೊಡಗುತ್ತಿದ್ದಂತೆಯೇ ಬೆಲ್ಲದ ಪುಡಿಹಾಕಿ ಕಲಕಿ.
5) ಬೆಲ್ಲವೆಲ್ಲಾ ಕರಗಿದೆ ಎಂದೆನಿಸಿದ ಬಳಿಕ ಈ ನೀರನ್ನು ಟೀ ಸೋಸುವ ಶೋಧಕದಲ್ಲಿ ಸೋಸಿ. ಇದರಲ್ಲಿ ಕರಗದ ಚಿಕ್ಕ ಕಲ್ಲು, ಮರಳು ಮೊದಲಾದವು ಬೇರ್ಪಟ್ಟಂತಾಗುತ್ತದೆ. ಈ ನೀರನ್ನು ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ.
6) ಕೊಂಚ ಕಾಲದ ಬಳಿಕ ತಣಿದ ಬೆಲ್ಲದ ನೀರನ್ನು ಒಂದು ಪಾತ್ರೆಗೆ ಹಾಕಿ ಹುರಿದ ಗೋಧಿಹಿಟ್ಟನ್ನು ಹಾಕಿ ಕೈಯಿಂದ ಗಂಟುಗಳಿಲ್ಲದಂತೆ ನಾದಿ. ಸುಮಾರು ಚಪಾತಿ ಹದಕ್ಕೆ ಬಂದ ಬಳಿಕ ಐದು ನಿಮಿಷ ಹಾಗೇ ಇಡಿ.
7) ತಂಬಿಟ್ಟು ಮಾಡಲು ಎರಡೂ ಕೈಗಳಿಗೆ ಕೊಂಚ ತುಪ್ಪ ಸವರಿ ಈ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ. ಒಂದು ಕಪ್‌ನಲ್ಲಿ ಸುಮಾರು ಮೂವತ್ತೆರಡು ತಂಬಿಟ್ಟುಗಳು ತಯಾರಾಗುತ್ತವೆ. ಇಷ್ಟೇ ಪ್ರಮಾಣ ಮಂಗಳ ಗೌರಿ ವ್ರತಕ್ಕೂ ಅಗತ್ಯವಿದೆ.

Source: kannada.boldsky.com