ಆಧುನಿಕ ಜೀವನ ಶೈಲಿಯೇ`ಭಯಂಕರ’ ಒತ್ತಡಕ್ಕೆ ಕಾರಣ

0
1030

ಆಧುನಿಕ ಜೀವನ ಪದ್ಧತಿ ಕೊಟ್ಟಿರುವ ಸೌಲಭ್ಯಗಳಿಂದ ಮನುಷ್ಯ ಸುಖವಾಗಿರುವುದಕ್ಕಿಂತ ಒತ್ತಡದಲ್ಲಿ ಬದುಕುತ್ತಿರುವುದೇ ಹೆಚ್ಚು. ತಂತ್ರಜ್ಞಾನ, ವಿಜ್ಞಾನ ಜಗತ್ತಿನ ಯಾವುದೇ ಮೂಲೆಯಲ್ಲಿರುವವರನ್ನು ಸಂಪರ್ಕಿಸ ಬಹುದಾದಷ್ಟು ಕ್ರಾಂತಿ ಮಾಡಿದೆಯಾದರೂ ಈ ಯಾಂತ್ರಿಕ ಬದುಕು ಮನುಷ್ಯನಿಂದ ನೆಮ್ಮದಿಯನ್ನು ಕಸಿದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಎದುರಿಸುವ ಅನಿವಾರ್ಯತೆಯಿಂದ ಒತ್ತಡ ನಮ್ಮ ದಿನ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಡಬ್ಲ್ಯೂಹೆಚ್‍ಒ (ವಲ್ರ್ಡ್ ಹೆಲ್ತ್ ಆರ್ಗನೈಸೇಷನ್) ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 5 ಜನರಲ್ಲಿ ಒಬ್ಬರು ಮಾನಸಿಕ ಒತ್ತಡದಿಂದ ನರಳುತ್ತಿದ್ದಾರೆ.

ಮಾನಸಿಕ ಒತ್ತಡ ಅಥವಾ ಸ್ಟ್ರೆಸ್ (ಎಸ್‍ಟಿಆರಿಎಸ್) ಮನುಷ್ಯ ಜೀವನದ ಗತಿಯನ್ನೇ ಬದಲಿಸುವಷ್ಟು ಪರಿಣಾಮ ಬೀರುವುದರಿಂದ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕ. ಶಿಕ್ಷಣ ಹಾಗೂ ಕಾರ್ಯ ಕ್ಷೇತ್ರದಲ್ಲಿನ ಒತ್ತಡದಿಂದ ಮಕ್ಕಳು, ಹಿರಿಯರು ಜರ್ಜರಿತರಾಗುತ್ತಿದ್ದಾರೆ. ಶಿಕ್ಷಣ ಪದ್ಧತಿಯಿಂದ ಮಕ್ಕಳು ದಿನಪೂರ್ತಿ ಶಾಲೆ ಹಾಗೂ ಮನೆಗಳಲ್ಲಿ ಓದಿನಲ್ಲೇ ಕಳೆಯುವಂತಾಗುವುದು ಅವರ ಇತರೆ ಚಟುವಟಿಕೆ ಆಸ್ಪದವಿಲ್ಲದೆ ಏಕತಾನತೆ ಹಾಗೂ ಅಂಕ ಗಳಿಕೆ ಹಿಂದೆ ಬಿದ್ದು, ಮಕ್ಕಳು ಒತ್ತಡಕ್ಕೆ ಸಿಲುಕಿ ಕೆಲಸ ನಿರ್ವಹಣೆ ಮಾಡುವುದು, ಜೀವನದ ಜಂಜಾಟಗಳು, ಏರುತ್ತಿರುವ ಅವಶ್ಯಕತೆಗಳ ಪಟ್ಟಿ ಇದರೊಂದಿಗೆ ಸದಾ ಓಡುವ ಜನರೂ ನೆಮ್ಮದಿ ಇಲ್ಲದೆ ಕಂಗೆಟ್ಟಿದ್ದಾರೆ. ಇಂಥವರು ಒತ್ತಡವೆಂಬ ಮಹಾಮಾರಿಗೆ ಬಲಿಯಾಗುತ್ತಿರುವುದರಿಂದ ಶೇ.50ರಷ್ಟು ಜನ ಮಾನಸಿಕ ತುಮುಲಕ್ಕೆ ಒಳಗಾಗುತ್ತಿದ್ದಾರೆ.

ಓದು, ಕೆಲಸ, ಸಾಂಸಾರಿಕ ತೊಂದರೆಯಂತಹ ಹಲವಾರು ಕಾರಣಗಳಿಗೆ ಶೇ.50ರಷ್ಟು ಜನ, ದುಶ್ಚಟಗಳಿಂದ ಶೇ.30ರಷ್ಟು ಜನ ಕೀಳರಿಮೆಯಂತಹ ಸಮಸ್ಯೆಯಿಂದ, ಶೇ. 20ರಷ್ಟು ಜನ ಒತ್ತಡಕ್ಕೆ ಸಿಲುಕುತ್ತಾರೆ ಎಂಬ ಅಂದಾಜಿದೆ. ಒತ್ತಡ ಎಂದರೆ ಯಾವುದೇ ಸಮಯದಲ್ಲಿ ನೀವು ಎದುರಿಸುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಎದುರಿಸುವ ಅತಂಕ ಒತ್ತಡಕ್ಕೆ ಕಾರಣವಾಗುತ್ತದೆ. ದೈಹಿಕವಾಗಿ ಸದೃಢರಾಗಿರುವವರ ಮೇಲೂ ಮಾನಸಿಕ ಆಘಾತದ ನೋವು ಪರಿಣಾಮ ಬೀರುವುದರಿಂದ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಸ್ಟ್ರೋಕ್, ಮೆಂಟಲ್ ಇಲ್‍ನೆಸ್‍ನಂತಹ ತೊಂದರೆಗೆ ಸಿಲುಕುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಯಾವುದೇ ಮನುಷ್ಯ ತಮ್ಮ ನೋವು, ನಲಿವು, ತೊಂದರೆ, ಆಸೆ-ನಿರಾಸೆಯನ್ನು ಸೇರಿದಂತೆ ಪರಸ್ಪರ ಮಾತನಾಡಿ ಚರ್ಚಿಸಿ ಯಾವುದೇ ತೊಂದರೆ ನಿವಾರಣೆ ಮಾಡಿಕೊಳ್ಳದೆ ಪರಿಸ್ಥಿತಿಯ ಒತ್ತಡದಲ್ಲಿ ಸಿಲುಕಿ ಅಘಾತದಿಂದ ಹೊರಬರಲಾರದೆ ಹೋಗುವುದು ಒಂದು. ಇತ್ತೀಚಿನ ದಿನಗಳಲ್ಲಿ ಒಂದೇ ಕಂಪನಿ ಅಥವಾ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರೂ ಅಥವಾ ವಾಸಿಸುತ್ತಿದ್ದರೂ ಪರಸ್ಪರ ಮುಖ ಪರಿಚಯ ಬಿಟ್ಟರೆ ಮಾತುಕತೆ ಇಲ್ಲದವರಂತೆ ನಡೆದುಕೊಳ್ಳುವ ಸ್ವಭಾವವೇ ಅದೆಷ್ಟೊ ಸಮಸ್ಯೆಯನ್ನು ಹುಟ್ಟು ಹಾಕುತ್ತವೆ.

ಒಂದೇ ಮನೆಯಲ್ಲಿದ್ದರು ಕೆಲವೊಮ್ಮೆ ತಮ್ಮ ನೋವು-ನಲಿವು ಹಂಚಿಕೊಳ್ಳುವಷ್ಟು ಸಂಕುಚಿತ ಮನೋಭಾವ ನೆಲೆಯೂರಿದೆ. ಕೆಲವೊಮ್ಮೆ ಪರಸ್ಪರ ವೈಮನಸ್ಸು ಕುಟುಂಬದಲ್ಲಿನ ಬಿರುಕುಗಳು ಒತ್ತಡಕ್ಕೆ ಕಾರಣವಾಗುತ್ತದೆ. ಮತ್ತೊಂದು ಕಡೆ ಕುಟುಂಬದವರೆಲ್ಲರೂ ಕೂಡಿ ಒಟ್ಟಿಗೆ ಊಟ ಮಾಡಿ ಕಾಲ ಕಳೆಯುವ ಪರಿಸ್ಥಿತಿ ಈಗ ಇಲ್ಲವಾಗಿರುವುದು ಸಂಬಂಧಗಳ ನಡುವಿನ ಬದುಕಿಗೆ ದಾರಿಯಾಗಿದೆ. ಒಂದೇ ಮನೆಯಲ್ಲಿ ಅಪ್ಪ-ಅಮ್ಮ ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿ ಅದೆಷ್ಟೊ ದಿನಗಳು ಕಳೆದಿರುವುದು ಹಾಗೂ ನೋಡಿದರೂ ಮಾತನಾಡಲು ವ್ಯವಧಾನವಿಲ್ಲದಿರುವುದು ಸಹ ಸಮಸ್ಯೆಗಳನ್ನು ತಂದೊಡ್ಡುವ ಜೀವನ ಶೈಲಿ ಎಂಬುದಕ್ಕೆ ಸಾಕ್ಷಿಯಾಗುತ್ತದೆ.

ಟೆಲಿವಿಷನ್(ಟಿವಿ) ಎಲ್ಲರನ್ನು ಮೂರ್ಖರನ್ನಾಗಿ ಮಾಡುವ ಪೆಟ್ಟಿಗೆ ಎಂದೇ ಅಪಖ್ಯಾತಿ ಪಡೆದಿದ್ದರೂ ಅದರಿಂದ ಆಧುನಿಕ ಸಮಾಜ ದೂರವಾಗಿಲ್ಲ. ಇದರೊಂದಿಗೆ ಇನ್ನಷ್ಟು ಸಮಯವನ್ನು ಕಸಿದುಕೊಳ್ಳುತ್ತಿರುವ ಸಾಮಾಜಿಕ ಜಾಲತಾಣಗಳು, ವ್ಯಾಟ್ಸಪ್, ಟ್ವಿಟರ್, ಐಎಂಒ, ಸ್ಕೈಪ್, ಹೈಕ್‍ಗಳಲ್ಲಿ ಗ್ರೂಪ್‍ಗಳನ್ನು ಕಟ್ಟಿಕೊಂಡು ಅದರಲ್ಲಿ ಚಾಟ್ ಮಾಡುತ್ತಾ ಒಬ್ಬರ ಸಂದೇಶ ಇನ್ನೊಬ್ಬರಿಗೆ ರವಾನಿಸುತ್ತ ಮಾತನಾಡುವುದನ್ನು ಬಿಟ್ಟರೆ ಪರಸ್ಪರ ಒಬ್ಬರನೊಬ್ಬರ ಬಗ್ಗೆ ಏನನ್ನು ತಿಳಿದಿರುವುದಿಲ್ಲ.

ನೆಪ ಮಾತ್ರಕ್ಕೆ ಸ್ನೇಹಿತರಾದರೂ ಅವರ ಗುಣ ಸ್ವಭಾವಗಳೇ ಅರಿವಿರುವುದಿಲ್ಲ.ಇಂತಹ ಪರಿಸ್ಥಿತಿಯಲ್ಲಿ ಸಹಜವಾಗೇ ಮನುಷ್ಯ ಆತಂಕಕ್ಕೆ ಬಲಿಯಾಗುತ್ತಾನೆ. ಇವೆಲ್ಲ ಗುರುತಿಸಬಹುದಾದಂತಹ ಕೆಲವು ಕಾರಣಗಳಾದರೂ ಇದನ್ನು ಹೊರತುಪಡಿಸಿ ಅದೆಷ್ಟೋ ಕಾರಣಗಳು ಮಾನಸಿಕ ಆಘಾತ ಹಾಗೂ ಒತ್ತಡಕ್ಕೆ ಸಾಕಷ್ಟು ಕಾರಣವಾಗಿವೆ. ಅವುಗಳಲ್ಲಿ ದುಡುಕು ನಿರ್ಧಾರ, ಅತಿಯಾದ ಕೋಪ , ಪರಿಸ್ಥಿತಿಯ ಅರಿವಿಲ್ಲದೆ ನಡೆದುಕೊಳ್ಳುವ ರೀತಿ ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ವಿಷಯಗಳ ಪಟ್ಟಿಯೇ ಸಿಗುತ್ತದೆ. ನಾವು ಎದುರಿಸುತ್ತಿರುವ ಈ ಒತ್ತಡವನ್ನು ನಿವಾರಿಸಿಕೊಳ್ಳಲು ಮುಂದಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಚಿತೆ ದೇಹವನ್ನು ಸುಟ್ಟರೆ ಚಿಂತೆ ಮನಸ್ಸನ್ನೇ ಸುಟ್ಟು ಹಾಕುತ್ತದೆ ಎಂಬ ಮಾತಿನಂತೆ ಒತ್ತಡವು ನಮ್ಮನ್ನು ಒಳಗೊಳಗೆ ಸುಡುತ್ತದೆ. ಹಾಗಾಗಿ ಒತ್ತಡದಿಂದ ಹೊರಬರಲು ಕೆಲವೊಂದು ಮಾರ್ಗಗಳನ್ನು ಅನುಸರಿಸುವುದು ಅಗತ್ಯ. ನಿಮ್ಮ ಆಸಕ್ತಿದಾಯಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದು ಅದರಲ್ಲಿ ಪೇಂಟಿಂಗ್, ಚಿತ್ರಕಲೆ, ಗಾರ್ಡನಿಂಗ್, ಹಾಡುವುದು ಹೀಗೆ ಯಾವುದೇ ಹವ್ಯಾಸಗಳನ್ನಾದರೂ ಬೆಳೆಸಿಕೊಂಡರೆ ಒತ್ತಡವನ್ನು ಸುಲಭವಾಗಿ ನಿವಾರಿಸಬಹುದು.

ಮನಸ್ಸು ಪ್ರಫುಲ್ಲವಾಗಿದ್ದಾಗ ಕೈಗೊಳ್ಳುವ ನಿರ್ಣಯಗಳು ಹೆಚ್ಚು ಒಳಿತನ್ನೇ ಉಂಟು ಮಾಡುತ್ತದೆ ಎಂಬುದರ ಅರಿವಿರಬೇಕು. ನಿಮ್ಮಗೆ ಕಿರಿಕಿರಿ ಮಾಡುವಂತಹ ವಿಷಯಗಳು, ವ್ಯಕ್ತಿ ಹಾಗೂ ವಸ್ತುಗಳಿಂದ ದೂರವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ನೆರೆಹೊರೆಯವರೊಂದಿಗೆ ಉತ್ತಮ ಸಂವಹನ ಅಗತ್ಯ. ಇವೆಲ್ಲದರೊಂದಿಗೆ ವ್ಯಾಯಾಮ, ಯೋಗ, ಧ್ಯಾನದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿ ಒತ್ತಡ ನಿವಾರಣೆಗೆ ಹೆಚ್ಚು ಪೂರಕವಾಗಲಿದೆ.