ಅಯೋಧ್ಯೆಯ ಜಾಗ ಕೈಬಿಡಲು ಮುಂದಾದ ಸುನ್ನಿ ವಕ್ಫ್ ಮಂಡಳಿ; ಹಾಗಾದ್ರೆ ರಾಮಮಂದಿರ ನಿರ್ಮಾಣ ಪಕ್ಕಾನಾ??

0
163

ಅಯೋಧ್ಯಾ ರಾಮಮಂದಿರ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದೆರಡು ತಿಂಗಳಿಂದ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ತೀರ್ಪನ್ನು ಕಾಯ್ದಿರಿಸಿದೆ ಈ ಹಿನ್ನೆಲೆಯಲ್ಲಿ ಮಹತ್ವದ ಟ್ವಿಸ್ಟ್ ಒಂದು ಸಿಕ್ಕಿದ್ದು, ಅಯೋಧ್ಯೆಯ ವಿವಾದಿತ ಜಾಗದ ಕುರಿತಾದ ತನ್ನ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಪ್ರಸ್ತಾಪಿಸಿದೆ. ಸರ್ಕಾರವು ರಾಮ ಮಂದಿರಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಹೇಳಿದೆ ಎಂದು ಮೂಲಗಳಿಂದ ಮಾಹಿತಿ ಇದೆ.

ಜಾಗ ಕೈಬಿಡಲು ಮುಂದಾದ ಸುನ್ನಿ ವಕ್ಫ್ ಮಂಡಳಿ?

ಹೌದು 134 ವರ್ಷಗಳ ಹಳೆಯ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಪ್ರಗತಿಗೆ ಕಾರಣವಾಗುವ ವರದಿಯನ್ನು ಮೂಲಗಳು ಬಹಿರಂಗಪಡಿಸಿವೆ. ವಕ್ಫ್ ಮಂಡಳಿಯು ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಲು ಒಪ್ಪಿದ್ದಲ್ಲದೆ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಮಸೀದಿಗಳನ್ನು ಸರ್ಕಾರವು ನವೀಕರಿಸಬೇಕೆಂದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ವಕ್ಫ್ ಮಂಡಳಿಯು ಬೇರೊಂದು ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಮುಂದಾಗಿದೆ. ಎನ್ನುವ ಮಾಹಿತಿ ಬಂದಿದೆ. ವಕ್ಫ್ ಮಂಡಳಿಯು ಭಾರತೀಯ ಪುರಾತತ್ವ ಇಲಾಖೆ(ಎಎಸ್‍ಐ) ಮಸೀದಿಗಳ ಪಟ್ಟಿಯನ್ನು ಸಲ್ಲಿಸಬಹುದು. ಜೊತೆಗೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯು ಪ್ರಾರ್ಥನೆಗಾಗಿ ಸ್ಥಳದ ಹೆಸರನ್ನು ಪ್ರಸ್ತಾಪಿಸಬಹುದು ಎಂದು ಮಧ್ಯಸ್ಥಿಕೆ ಸಮಿತಿ ವರದಿ ಹೇಳುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿಯಲ್ಲಿದೆ.

ಸರಿಸುಮಾರು ಒಂದು ಶತಮಾನದಿಂದ ಹಿಂದೂ ಮುಸ್ಲಿಮರ ನಡುವೆ ಕಗ್ಗಂಟಾಗಿ ಪರಿಣಮಿಸಿದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ ದೇಶದ ಹೈಪ್ರೊಫೈಲ್ ಕೇಸ್ ಅಯೋಧ್ಯೆಯ ಬಾಬ್ರಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ ಆರಂಭದಿಂದ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 40 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ್ದು ಇಂದು ಮುಕ್ತಾಯವಾಗಿದೆ. ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿ ಆಗುತ್ತಿದ್ದು, ಅಷ್ಟರೊಳಗೆ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಹೀಗಾಗಿ ಕುತೂಹಲ ಗರಿಗೆದರಿದೆ.

ಲೆಕ್ಕಾಚಾರಗಳು ಜೋರಾಗಿವೆ. ಅಯೋಧ್ಯೆ ವಿವಾದ ಮೇಲ್ನೋಟಕ್ಕೆ ಹಿಂದೂ ಮುಸ್ಲಿಮರ ನಡುವಣ ವಿವಾದವಾಗಿ ಕಾಣಿಸುತ್ತೆ. ಆದ್ರೆ, ಇದು ಕೋಟಿ ಕೋಟಿ ಹಿಂದೂಗಳು- ಮುಸ್ಲಿಮರ ಪಾಲಿಗೆ ಭಾವನಾತ್ಮಕ ವಿಚಾರ. ಇದೇ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಹೋರಾಟ ಸಂಘಟಿಸಿದ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಘಟಾನುಘಟಿ ನಾಯಕರನ್ನು ಕೋರ್ಟ್ ಕಟಕಟೆಗೆ ಎಳೆದುತಂದು ನಿಲ್ಲಿಸಿದೆ. ಎರಡು ಧರ್ಮಗಳ ನಡುವೆ ಅಂತರ ಹೆಚ್ಚಿಸಿದೆ. ಅಪಾರ ಸಾವು ನೋವಿಗೂ ಪರೋಕ್ಷವಾಗಿ ಕಾರಣವಾಗಿದೆ.

ಗೃಹ ಸಚಿವ ಅಮಿತ್​ ಶಾ, ಬರವಸೆ?

ಇದಕ್ಕೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ, 1950ರಿಂದ ಸುಪ್ರೀಂ ಕೋರ್ಟ್​​ನಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಕೊಂಚ ವಿಳಂಬವಾಗಿದೆ, ಇನ್ನು ಕೆಲವೇ ದಿನಗಳಲ್ಲಿ ತೀರ್ಪು ಬರಲಿದೆ. ಸುಪ್ರೀಂ ಕೋರ್ಟ್​ ತೀರ್ಪಿನಿಂದ ಅಯೋಧ್ಯೆ ವಿವಾದ ಬಗೆಹರಿಯುವ ವಿಶ್ವಾಸವಿದೆ. ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​​​ ತೀರ್ಪನ್ನು ಹಿಂದೂ-ಮುಸ್ಲಿಂ ಎರಡೂ ಧರ್ಮದವರೂ ಒಪ್ಪಿಕೊಳ್ಳುವ ವಿಶ್ವಾಸವಿದೆ. ಸುಪ್ರೀಂ ಕೋರ್ಟ್​ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಅಮಿತ್ ಶಾ ತಿಳಿಸಿದರು.