ಜಲಪಾತ ನೋಡ್ಬೇಕಂದ್ರೆ ತುಂಬಾ ದೂರ ಹೋಗ್ಬೇಕಾಗಿಲ್ಲ, ನಮ್ಮ ಬೆಂಗಳೂರಿನಲ್ಲೇ ಇದೆ ನಯನಮನೋಹರ ಟಿ.ಕೆ ಫಾಲ್ಸ್…!!

0
2946

ಬೆಂಗಳೂರು ಪರಿಸರದಲ್ಲೊಂದು ಮಲೆನಾಡ ಕಂಪು, ಅಲ್ಲೊಂದು ಸುಂದರ ಜಲಪಾತ, ಎಲ್ಲಿ ನೋಡಿದರಲ್ಲಿ ಹಸಿರು, ಇದುವೇ ಬೆಂಗಳೂರು ಪಕ್ಕದಲ್ಲಿರುವ ಕೇವಲ ೩೦ ಕಿಮಿ ದೂರದಲ್ಲಿವೆ ತೊಟ್ಟಿಕಲ್ಲು ಜಲಪಾತದ ದೃಶ್ಯ ವೈಭೋಗ.

ರಾಜಧಾನಿಯಿಂದ ಕನಕಪುರ ಮಾರ್ಗದಲ್ಲಿ ಕಗ್ಗಲೀಪುರದಿಂದ ಎಡಕ್ಕೆ ಬನ್ನೇರುಘಟ್ಟಕ್ಕೆ ಹೋಗುವ ದಾರಿಯಲ್ಲಿ ಸರಿಯಾಗಿ ೫ ಕಿಮೀ ಕ್ರಮಿಸಿದ್ದಲ್ಲಿ ಎದುರಾಗುತ್ತದೆ ಬಾಲ್ಯದ ಮರದೊಡ್ಡಿಎಂಬ ಪುಟ್ಟ ಗ್ರಾಮ.ಇಲ್ಲಿ ಎಡಕ್ಕೆ ಒರಟಾದ ಕಲ್ಲು ಮಣ್ಣಿನ ಹಾದಿಯಲ್ಲಿ ಒಂದು ಕಿಮೀ ನಡೆದ್ದಲ್ಲಿ ಕಾಣಸಿಗುತ್ತದೆ ತೊಟ್ಟಿಕ್ಕಲ್ಲು ಶ್ರೀ ಮುನೇಶ್ವರ ಸ್ವಾಮೀ ದೇವಸ್ಥಾನ.

ಈ ತೊಟ್ಟಿಕಲ್ಲು ದೇಗುಲವಿರುವ ಪರಿಸರವೇ ಬಹಳ ವಿಶೇಷವಾದದ್ದು. ಎಂತಹ ಕಠಿಣ ಮನಗಳನ್ನೂ ತನ್ನ ವನಸಿರಿಯ ಸೊಬಗಿನಲ್ಲಿ ಮೃದುವಾಗಿಸುತ್ತದೆ.ಹಸಿರುತ್ತಾ ಗುಡ್ಡ ಪ್ರದೇಶಗಳಿಂದ ಆವೃತವಾಗಿರುವ ಈ ಮುನೇಶ್ವರ ಸನ್ನಿಧಿಯೂ ಇಲ್ಲಿಯ ಮಂಟಪಗಳಿಂದ, ನಾಗರ ಕಲ್ಲುಗಳಿಂದ ವಿಶೇಷ ಶೋಭೆಯನ್ನು ಹೊಂದಿದೆ. ಎದುರಿಗೆ ಜುಳು ಜುಳು ಸದ್ದಿನೊಂದಿಗೆ ಒಂದು ವಿಶಾಲವಾದ ಬೃಹತ್ ಬಂಡೆಯ ಬಲ ತುದಿಯಿಂದ ಸುಮಾರು ಹತ್ತು ಅಡಿ ಎತ್ತರದಿಂದ ಧುಮುಕುತ್ತ ಒಂದು ಸರೋವರವನ್ನು ಸೃಷ್ಟಿಸಿದೆ.

ಇಲ್ಲಿಂದ ಮುಂದೆ ಅನತಿ ದೂರದಲ್ಲಿ ಕಾಣಿಸುವ ಒಂದು ದೊಡ್ಡ ಬಂಡೆಗಳ ಸಮುಚ್ಛಯದೆಡೆಗೆ ಒಂದರ್ಧ ಫಾರ್ಲಾಂಗ್ ಏರಿಬಂದಲ್ಲಿ ಎದುರಾಗುತ್ತದೆ ಒಂದು ಸುಂದರ್ ಜಲಪಾತ.ಅದುವೇ ತೊಟ್ಟಿಕಲ್ಲು ಜಲಪಾತ. ಸ್ಥಳೀಯರ ಬಾಯಿಯಲ್ಲಿ ಟಿ.ಕೆ ಜಲಪಾತವಾಗಿದೆ. ಬನ್ನೇರುಘಟ್ಟದ ಸ್ವರ್ಣಮುಖಿ ಕಾನನ ಪ್ರದೇಶದಲ್ಲಿರುವುದರಿಂದ ಇದನ್ನು ಸ್ವರ್ಣಮುಖಿ ಜಲಪಾತವೆಂದು ಕರೆಯುತ್ತಾರೆ. ಸುಮಾರು ೫೦ ರಿಂದ ೬೦ ಅಡಿ ಎತ್ತರದ ಒಂದು ನೂರಡಿಗಿಂತಲೂ ವಿಶಾಲವಾಗಿ ಹರಡಿರುವ ಬೃಹತ್ ಏಕಶಿಲೆಯ ಬಂಡೆಯ ಒಂದು ಬದಿಯಲ್ಲಿ ಹಾವಿನ ನಡೆಯಂತೆ , ಬಳಕುವ ಬಳ್ಳಿಯಂತೆ ಧೋ ಎಂದು ಧುಮ್ಮುಕ್ಕುತ್ತಿರುವ ಆ ಜಲಧಾರೆಯ ಸೊಬಗು ನಿಜಕ್ಕೂ ನೋಡುಗರನ್ನು ಪುಳಕಿತಗೊಳಿಸುತ್ತದೆ.

ಟಿ.ಕೆ ಜಲಪಾತಕ್ಕೆ ಬನ್ನೇರುಘಟ್ಟದಿಂದಲೂ ಬರಬಹುದಾಗಿದ್ದು, ಬನ್ನೇರುಘಟ್ಟದ ವೃತ್ತದಿಂದ ಬಲಕ್ಕೆ ಕಗ್ಗಲೀಪುರಕ್ಕೆ ಹೋಗುವ ಹಾದಿಯಲ್ಲಿ ಸುಮಾರು ೮ ಕಿಮೀ ಸಾಗಿಬಂದಲ್ಲಿ ಟಿ.ಕೆ ಜಲಪಾತವನ್ನು ತಲುಪಬಹುದು.ಬನ್ನೇರುಘಟ್ಟದ ಸುವರ್ಣಮುಖಿ ಅರಣ್ಯಧಾಮದ ರಮ್ಯ ಪರಿಸರದ ಮಡಿಲಲ್ಲಿ ಸಾಗುತ್ತಾ, ಅಲ್ಲಿಯ ಚೆನ್ನಮ್ಮನಕೆರೆ, ಹೊಸಕೆರೆಗಳ ಐಸಿರಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ಪಯಣಿಸಬಹುದು.