ತಿರುಪತಿಯ ಏಳು ಬೆಟ್ಟಗಳ ಮಹತ್ವ ತಿಳಿದುಕೊಳ್ಳಿ, ವೆಂಕಟೇಶ್ವರನ ದಿವ್ಯ ಕೃಪೆಗೆ ಪಾತ್ರರಾಗಿ..

0
2938

Kannada News | Karnataka Temple History

ತಿರುಪತಿ ತಿರುಮಲ ದೇವಸ್ಥಾನ ತಲುಪಲು ಭಕ್ತರು ಏಳು ಬೆಟ್ಟಗಳನ್ನು ಹತ್ತುತ್ತಾರೆ. ಈ ಏಳು ಬೆಟ್ಟಗಳು ಹೇಗೆ ಆದವು ಮತ್ತು ಅದರ ಹಿಂದಿನ ಕಾರಣ ಏನು ಗೊತ್ತೇ. ಅಷ್ಟಕ್ಕೂ ಈ ಏಳು ಬೆಟ್ಟಕ್ಕೂ ತಿಮ್ಮಪ್ಪನಿಗೂ ಏನು ಸಂಬಂಧ. ಯಾಕೆ ಭಕ್ತರು ಈ ಏಳು ಬೆಟ್ಟಗಳನ್ನು ಹತ್ತಿ ಬರುವ ಹಾಗೆ ಆಯಿತು ಅಂತ ಹೇಳುತ್ತೇವೆ ನೋಡಿ.

ಸಪ್ತಗಿರಿಗಳ ಒಡೆಯ ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದಲ್ಲಿ ಭೂಲೋಕದಲ್ಲಿ ಇರಲು ವೈಕುಂಠವೊಂದು ಇರಬೇಕು ಎಂದಿದ್ದನಂತೆ. ಅದಕ್ಕೆ ನಾರದ ಮುನ್ನಿಗಳು ಸ್ವರ್ಣಮುಖಿ ನದೀತೀರದ ಸೂಕ್ತ ಸ್ಥಳ ಎಂದಿದ್ದರಂತೆ. ವೈಕುಂಠವನ್ನೇ ಭೂಲೋಕದಲ್ಲಿ ಸೃಷ್ಟಿಸಬೇಕು ಅಂತ ಯೋಚಿಸಿ ಆದಿಶೇಷ ಆ ಏಳು ಬೆಟ್ಟಗಳಲ್ಲಿ ಒಂದು ಬೆಟ್ಟವಾದನಂತೆ. ಇನ್ನು ಈ ಏಳು ಬೆಟ್ಟಗಳಲ್ಲಿ ಒಂದೊಂದು ವಿಶೇಷವಿದೆ ಅದು ಏನು ಗೊತ್ತೇ.

1. ಗರುಡಾದ್ರಿ:

ಹಿರಣ್ಯಾಕ್ಷನಿಂದ ಭೂಮಿತಾಯಿಯನ್ನು ವರಾಹ ರೂಪದಲ್ಲಿ ಶ್ರೀ ವಿಷ್ಣು ಬಂದು ರಕ್ಷಣೆ ಮಾಡಿದ್ದು ನಮಗೆಲ್ಲ ಗೊತ್ತಿರುವ ವಿಚಾರ. ಆಗ ಭೂದೇವಿ ವರಾಹಸ್ವಾಮೀಯನ್ನು ತನ್ನೊಂದಿಗೇ ಇರಬೇಕು ಅಂತ ಕೇಳಿಕೊಂಡಿದ್ದಳಂತೆ. ವರಾಹಸ್ವಾಮಿ ಇದಕ್ಕೆ ಒಪ್ಪಿ ಸ್ವರ್ಗದಿಂದ ಸುಂದರ ಬೆಟ್ಟ ಒಂದನ್ನು ಭೂಮಿಗೆ ತರಲು ಗರುಡನಿಗೆ ಸೂಚಿಸಿದರಂತೆ. ಆ ಬೆಟ್ಟವೇ ಈ ಗರುಡಾದ್ರಿ. ಈಗಲೂ ವಿಷ್ಣು ವರಾಹ ರೂಪದಲ್ಲಿ ತಾಯಿ ಭೂದೇವಿ ಜೊತೆ ಇದೇ ಬೆಟ್ಟದ ಮೇಲೆ, ಪುಷ್ಕರಣಿಯ ಪಶ್ಚಿಮ ತೀರದಲ್ಲಿದ್ದಾನೆ ಅನ್ನೋದು ನಂಬಿಕೆ. ಅದೇ ವರಾಹ ಪುಷ್ಕರಣಿ.

2. ವೃಷಭಾದ್ರಿ:

ವೃಷಭಾಸುರ ಅಂತ ಒಬ್ಬ ರಾಕ್ಷಸ ಇಲ್ಲಿ ವಾಸವಿದ್ದನಂತೆ ಅವನು ತಪಸ್ಸು ಮಾಡೋ ರೀತಿ ಬಹಳ ವಿಚಿತ್ರವಾಗಿತ್ತು. ಪ್ರತೀ ದಿನ ತನ್ನ ತಲೆ ಕಡೆದು ಒಂದು ಹೂ ಜೊತೆ ಅದನ್ನು ದೇವರಿಗೆ ಅರ್ಪಿಸುತ್ತಿದ್ದನಂತೆ. ಆದರೆ, ದೇವರ ದಯೆಯಿಂದ ಅವನ ತಲೆ ಪ್ರತಿದಿನ ವಾಪಸ್ ದೇಹಕ್ಕೆ ಸೇರುತ್ತಿತ್ತು. ತಾನು ಸಾಯೋ ಸಮಯದಲ್ಲಿ ಅವನು ದೇವರಿಗೆ, ತಾನು ವಾಸವಿದ್ದ, ತಪಸ್ಸು ಮಾಡಿ, ಮೋಕ್ಷ ಪಡೆದ ಈ ಬೆಟ್ಟಕ್ಕೆ ತನ್ನದೇ ಹೆಸರಿಡಬೇಕು ಎಂದು ವಾರ ಪಡೆದನಂತೆ ಅದೇ ಈ ವೃಷಭಾದ್ರಿ.

3. ಅಂಜನಾದ್ರಿ:

ಕೇಸರಿ ಅಂತ ವಾನರ ರಾಜ ಇದ್ದ. ಅವನ ಹೆಂಡತಿ ಅಂಜನಾದೇವಿ. ಅವರಿಬ್ಬರಿಗೂ ಮದುವೆಯಾಗಿ ತುಂಬಾ ವರ್ಷ ಆದರೂ ಮಕ್ಕಳೇ ಇರಲಿಲ್ಲ. ಅಂಜನಾದೇವಿ ಆಕಾಶ ಗಂಗೆ ಹತ್ತಿರ ಇರೋ ಬೆಟ್ಟದ ಹತ್ತಿರ ಎಷ್ಟೋ ವರ್ಷಗಳ ಕಾಲ ತಪಸ್ಸು ಮಾಡುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿ ವಾಯು ದೇವರು ಅವಳ ಮುಂದೆ ಪ್ರತ್ಯಕ್ಷನಾಗಿ ಅವಳಿಗೊಂದು ಹಣ್ಣು ಕೊಡ್ತಾನೆ. ಅದನ್ನು ತಿಂದಿದ್ದರಿಂದ ಅಂಜನಾದೇವಿಗೆ ಚಿರಂಜೀವಿಯಾದ ಹನುಮಂತ ಹುಟ್ಟಿದ್ದು. ಹೀಗಾಗಿ, ಅಂಜನಾದೇವಿ ಹೆಸರಿನಿಂದ ಈ ಬೆಟ್ಟಕ್ಕೆ ಈ ಹೆಸರು ಬಂದಿದೆ.

4. ನೀಲಾದ್ರಿ:

ವೆಂಕಟೇಶ್ವರನಿಗೆ ಮೊದಲು ಮುಡಿ ಕೊಟ್ಟಿದ್ದೇ ನೀಲಾದೇವಿ ಅನ್ನೋ ಭಕ್ತೆ. ಇದರಿಂದ ಪ್ರಸನ್ನನಾಗಿ ವೆಂಕಟೇಶ್ವರ ಅವಳ ಹೆಸರನ್ನೇ ಈ ಬೆಟ್ಟಕ್ಕಿಟ್ಟನಂತೆ. ಗೊಲ್ಲನೊಬ್ಬ ವೆಂಕಟೇಶ್ವರನಿಗೆ ತಲೆ ಮೇಲೆ ಹೊಡೆದಾಗ, ಆ ಭಾಗದಲ್ಲಿದ್ದ ಸ್ವಲ್ಪ ಕೂದಲು ಉದುರಿ ಹೋಗತ್ತೆ. ಇದನ್ನು ನೋಡಿದ ಗಂಧರ್ವಕನ್ಯೆ ನೀಲಾದೇವಿ ಗೋವಿಂದನ ಸುಂದರ ಮುಖದಲ್ಲಿ ಯಾವ ಲೋಪ ಕೂಡ ಇರಕೂಡದು ಅಂತ ತನ್ನ ಕೂದಲನ್ನೇ ಕತ್ತರಿಸಿ ವೆಂಕಟೇಶನ ತಲೆಗೆ ತನ್ನ ಶಕ್ತಿಯಿಂದ ವರ್ಗಾಯಿಸ್ತಾಳೆ. ಹೆಣ್ಣಿನ ಅಂದಕ್ಕೆ ಕೂದಲು ಬಹಳ ಮುಖ್ಯ. ಅದನ್ನು ಲೆಕ್ಕಿಸದೆ ಅವಳು ಮಾಡಿದ ತ್ಯಾಗ ನೋಡಿ, ಭಕ್ತರು ತನಗೆ ಕೊಡೋ ಎಲ್ಲಾ ಕೂದಲು ನೀಲಾದೇವಿಗೆ ಸೇರತ್ತೆ ಅಂತ ವೆಂಕಟೇಶ್ವರ ಹೇಳಿದ.

5. ಶೇಷಾದ್ರಿ:

ಶೇಷಾದ್ರಿ, ಆದಿಶೇಷನ ರೂಪ, ಶ್ರೀ ವಿಷ್ಣು ಮಲಗೋ ಹಾಸಿಗೆ. ಒಮ್ಮೆ ವಾಯು ಮತ್ತೆ ಶೇಷನ ಮಧ್ಯ ಯಾರು ಹೆಚ್ಚು ಅನ್ನೋ ವಾದ ನಡೆಯತ್ತೆ. ಈ ಜಗಳ ನಡೆಯುತ್ತಿರುವಾಗ ನಾರದರು ಸುಮಧುರ ನಾದ ನುಡಿಸ್ತಾರೆ. ಅದನ್ನು ಕೇಳುತ್ತ ಆದಿಶೇಷ ಹೆಡೆ ಎತ್ತಿ ನಲೀತಿದ್ದನ್ನು ಕಂಡು, ಇದೇ ಒಳ್ಳೆ ಸಮಯ ಅಂತ ವಾಯು ಜೋರಾಗಿ ಗಾಳಿ ಊದಿ ಶೇಷ ಕೆಳಗೆ ಬೀಳೋ ಹಾಗೆ ಮಾಡುತ್ತಾನೆ. ಆದರೆ, ನಾರಾಯಣ ಮಲಗೋ ಹಾಸಿಗೆಗೆ ಈ ರೀತಿ ಮಾಡಿದೆನಲ್ಲ ಅಂತ ಪಶ್ಚಾತ್ತಾಪ ಪಟ್ಟು ವಾಯೂನೇ ಶೇಷನಿಗೆ ಕ್ಷಮೆ ಕೇಳಿ ವಾಪಸ್ಸು ಕೈಲಾಸಕ್ಕೆ ಹೋಗಕ್ಕೆ ಹೇಳ್ತಾನೆ. ಇದನ್ನು ಶೇಷನು ನಿರಾಕರಿಸಿ ಆಗೋದೆಲ್ಲಾ ದೇವರ ಇಚ್ಚೇನೇ ಅಂತಾನೆ. ಇದಕ್ಕೆ ಒಪ್ಪಿದ ಶ್ರೀ ವಿಷ್ಣು, ತಾನು ಕಲಿಯುಗದಲ್ಲಿ ಭೂಲೋಕದಲ್ಲಿರುವಾಗ ತನ್ನ ಹತ್ತಿರವೇ ಶೇಷಾಚಲನಾಗಿ ಬೆಟ್ಟದ ರೂಪದಲ್ಲಿರು ಎಂದು ಶೇಷನಿಗೆ ಅನುಗ್ರಹಿಸುತ್ತಾನೆ.

6. ವೆಂಕಟಾದ್ರಿ:

ವೆಂಕಟಾದ್ರಿಯು ನಮ್ಮ ಪಾಪಾನೆಲ್ಲಾ ನಾಶ ಮಾಡೋ ಪುಣ್ಯಸ್ಥಳ. ಮಾಧವ ಅನ್ನೋನು ತಾನು ಮಾಡಿರೋ ಪಾಪಗಳಿಂದ ಕುಷ್ಟರೋಗಿಯಾದ. ತಿರುಮಲೆಗೆ ಹೋಗುತ್ತಿದ್ದ ಯಾತ್ರಿಗಳ ಗುಂಪನ್ನು ಇವನೂ ಸೇರಿದ. ಅವರೆಲ್ಲಾ ಗೋವಿಂದ ಗೋವಿಂದ ಅನ್ನುತ್ತಿದ್ದಾರೆ ಇವನಿಗೆ ಅದೇನೋ ಆತ್ಮಸಂತೃಪ್ತಿ. ಮೈಯೆಲ್ಲಾ ಉರೀತಿದ್ಯಲ್ಲಾ ಅಂತ ನೋಡಿದರೆ, ಅವನ ಕುಷ್ಟ ರೋಗ ಅವನನ್ನು ಬಿಡುತ್ತಿತ್ತು. ಇದನ್ನು ಕಂಡ ಬ್ರಹ್ಮದೇವ, ಇದು ನಾವು ಮಾಡೋ ಪಾಪಗಳನ್ನೆಲ್ಲ ಪರಿಹಾರ ಮಾಡೋ ಪುಣ್ಯಕ್ಷೇತ್ರ ಅನ್ನೋದಕ್ಕೆ ನೀನೇ ಉದಾಹರಣೆ. ಇನ್ಮೇಲೆ ನಿನ್ನ ನೆನಪಲ್ಲಿ ಈ ಸ್ಥಳ ವೆಂಕಟಾದ್ರಿ ಎಂದು ಪ್ರಸಿದ್ಧಿಯಾಗಲಿ ಎಂದನಂತೆ. ಇಲ್ಲಿಯೇ ವೆಂಕಟೇಶ್ವರನ ದೇವಸ್ಥಾನ ಇರೋದು. ಸಂಸ್ಕೃತದಲ್ಲಿ “ವೆನ್” ಅಂದರೆ ಪಾಪ, “ಕಟ” ಅಂದರೆ ದಹಿಸೋದು.

7. ನಾರಾಯಣಾದ್ರಿ:

ನಾರಾಯಣ ಮಹಾರ್ಶಿಯವರು ವಿಷ್ಣುವನ್ನು ನೋಡಲು ತಪಸ್ಸು ಮಾಡಲು ಬಯಸಿದ್ದರು. ತನ್ನ ಪ್ರಾಯಶ್ಚಿತ್ತಕ್ಕೆ ಯಾವುದೇ ತೊಂದರೆಗಳಿಲ್ಲದಿರುವ ಸೂಕ್ತ ಸ್ಥಳವನ್ನು ತೋರಿಸಲು ಬ್ರಹ್ಮನನ್ನು ಕೇಳಿದರು. ಬ್ರಹ್ಮದೇವನು ಭಗವಾನ್ ವಿಷ್ಣುವಿನ ನೆಲೆಗಾಗಿ ಮಾಡಿದ ಸ್ಥಳವನ್ನು ತೋರಿಸಿದನು. ವಿಷ್ಣು ಮಹಾರ್ಶಿಯ ಪ್ರಾರ್ಥನೆಯಿಂದ ಸಂತೋಷಗೊಂಡನು, ಮಹಾರ್ಶಿಯ ಮುಂದೆ ಪ್ರತ್ಯಕ್ಷನಾದನು. ನಾರಾಯಣ ಮಹಾರ್ಶಿ ಅವರು ವಿಷ್ಣುವನ್ನು, ತಾನು ತಪಸ್ಸು ಮಾಡಿದ ಈ ಬೆಟ್ಟಕ್ಕೆ ತನ್ನ ಹೆಸರನ್ನು ಇಡೀ ಎಂದು ವರ ಕೇಳಿದರು. ಆದ್ದರಿಂದ ನಾರಾಯಣ ಋಷಿಯ ನೆನಪಲ್ಲಿ ಈ ಬೆಟ್ಟವನ್ನು ನಾರಾಯಣಾದ್ರಿ ಅಂತ ಕರೀತಾರೆ. ಹಲವು ಭಕ್ತರು ಇದಕ್ಕೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ. ನಮಗೆ ಜ್ಞಾನ ಕೋಡೋದ್ರಿಂದ ಜ್ಞಾನಾದ್ರಿ ಅಂತಾರೆ. ನಮ್ಮ ಆಸೆಗಳನ್ನು ಈಡೇರಿಸುವ ಸ್ಥಳ ಅಂತ, ಕೆಲವರು ಚಿಂತಾಮಣಿ ಅಂತ ಕೂಡ ಕರೆಯುತ್ತಾರೆ.

Also Read: ನಿಮ್ಮ ರಕ್ತದ ಗುಂಪು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತೆ ಅಂತ ತಿಳ್ಕೊಳಿ…!