ತಮಿಳುನಾಡು ರಾಜಕೀಯ ಯಾಕೆ ವಿಭಿನ್ನವಾಗಿದೆ??ಇಲ್ಲಿದೆ ಉತ್ತರ!!!

0
745

ಭಾರತದ ಎಲ್ಲ ರಾಜ್ಯಗಳ ದಾರಿಯೇ ಒಂದಾದರೆ ತಮಿಳುನಾಡಿನ ದಾರಿಯೇ ಬೇರೆ. ಒಟ್ಟಾರೆ ಒಂದು ರೀತಿಯ ದ್ರಾವಿಡ ಪ್ರಾಣಾಯಾಮದ ದಾರಿ. ಇತಿಹಾಸದ ಘಟನಾವಳಿಗಳನ್ನು ತಿರುವಿಹಾಕಿದರೆ ಇಂತಹ ದ್ರಾವಿಡ ಪ್ರಾಣಾಯಾಮದ ಪ್ರಸಂಗಗಳು-ಅಧಿಕ ಪ್ರಸಂಗಗಳು ಅದೆಷ್ಟೋ. ಮಿತಿ ಮೀರಿದ ಭಾವುಕತೆಗೆ ಒಳಗಾಗುವ ಜನ ಸಮೂಹಕ್ಕೆ ವಾಸ್ತವದ ಅರಿವೇ ಆಗದಂತೆ ನೋಡಿಕೊಳ್ಳುವ ಜನನಾಯಕರು ಪರಂಪರಾಗತವಾಗಿ ಅವತಾರ ಎತ್ತುತ್ತಿರುವ ಪರಿಣಾಮವೇ ಇಂತಹ ಎಲ್ಲ ಅಧಿಕ ಪ್ರಸಂಗಗಳಿಗೆ ಮೂಲ.

ತಮಿಳರ ಭಾವುಕತೆ ಎಷ್ಟರ ಮಟ್ಟಿಗೆ ಎಂದರೆ ಚೆನ್ನೈನಲ್ಲಿ ಪಿಸುಗುಟ್ಟಿದರೆ ಅದು ದೂರದ ದೆಹಲಿಯಲ್ಲಿ ಮಾರ್ದನಿಗೊಳ್ಳುತ್ತದೆ ಎಂಬ ಮಾತು ನಿಜವೆಷ್ಟೋ ಸುಳ್ಳೆಷ್ಟೋ. ಹಿಂದೆ ರಂಗಭೂಮಿಯ ಕಲಾವಿದ ಎಸ್.ಜಿ.ಕಿಟ್ಟು ಎಂಬುವರು ಉಗಿಬಂಡಿ ಕಾಲದ ರೈಲಿನ ಸಿಳ್ಳೆಯ ಶೃತಿಗೆ ಮಟ್ಟುಗಳನ್ನು ರಂಗಮಂಚದ ಮೇಲೆ ಹಾಡುತ್ತಿದ್ದರು ಎಂಬುದಂತೂ ಸತ್ಯ. ಅಂತಹ ನಾಡಿನಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯೂ ಅತಿರೇಕದಿಂದ ಕೂಡಿದ್ದರೆ ಅದಕ್ಕೆ ಸಮೂಹದ ನಡವಳಿಕೆಯೇ ಕಾರಣ. ಅದಿರಲಿ. ಎಲ್ಲಿಂದಲೋ ಬಂದ ಶಶಿಕಲಾ ನಟರಾಜನ್ ಕ್ಷಿಪ್ರಕ್ರಾಂತಿಯ ರಾಜಕೀಯ ಬೆಳವಣಿಗೆಗಳಲ್ಲಿ ಸಿಎಂ ಸ್ಥಾನದವರೆಗೆ ಓಡೋಡಿ ಬಂದದ್ದು – ನಂತರ ವಿಘ್ನಗಳೆದುರಾಗಿ ಏದುಸಿರುವ ಬಿಡುತ್ತಾ ನಿಂತಿರುವುದನ್ನು ಕಂಡಾಗ ಇದರ ಹಿಂದೆ ಯಾವ ಮರ್ಮಯೋಗಿ ಇರಬಹುದು ಎಂಬ ಅನುಮಾನಗಳು ಕಾಡುವುದು ಖಂಡಿತ.

Image result for jayalalitha panneerselvam photos
Source: The Indian Express

ಶಶಿಕಲಾ ನಟರಾಜನ್ ಒಂದು ಕಾಲದಲ್ಲಿ ರಾಜಕೀಯದ ಗಂಧ ಗಾಳಿ ಏನೇನೂ ಅರಿಯದ ಹೆಣ್ಣು. ಮನೆ ವಾರ್ತೆ ನೋಡಿಕೊಂಡು ಜತೆಯಲ್ಲಿ ಕ್ಯಾಸೆಟ್ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಈಕೆ ಒಮ್ಮಿಂದೊಮ್ಮೆಲೆ ಅಣ್ಣಾ ಡಿಎಂಕೆ ಬ್ರಹ್ಮಾಂಡ ಲೋಕದ ಕೇಂದ್ರ ಬಿಂದುವಾಗಲು ಜಯಲಲಿತಾ ಗೆಳೆತನವೇ ಕಾರಣ. ಹೇಳಿ ಕೇಳಿ ಜಯಲಲಿತಾ ಗಟ್ಟಿಗಿತ್ತಿ ಮಹಿಳೆ. ಇಂತಹ ಗಟ್ಟಿಗಿತ್ತಿಯನ್ನು ಬುಟ್ಟಿಗೆ ಹಾಕಿಕೊಂಡ ಗುಟ್ಟು ಇದುವರೆಗೂ ರಟ್ಟಾಗಿಲ್ಲ. ಅಣ್ಣಾ ಡಿಎಂಕೆ ಪ್ರಚಾರ ಸಭೆಗಳಿಗೆ ಹಾಗೂ ಜಯಾ ಟಿವಿ ಕಾರ್ಯಕ್ರಮಗಳಿಗೆ ಕ್ಯಾಮೆರಾಗಳನ್ನು ಒದಗಿಸುತ್ತಿದ್ದ ಗುತ್ತಿಗೆ ಪಡೆದುಕೊಂಡಿದ್ದ ಶಶಿಕಲಾ ಅದೇಗೋ ಏನೋ ಜಯಲಲಿತಾ ಆಪ್ತ ವಲಯದಲ್ಲಿ ಪ್ರವೇಶ ಪಡೆದುಕೊಂಡದ್ದು ಮಾತ್ರ ವಿಚಿತ್ರ ಆದರೂ ಸತ್ಯ. ಆಗಿನಿಂದ ಜಯಲಲಿತಾ ಇರುವವರೆಗೆ ಶಶಿಕಲಾ ಆಡಿದ್ದೇ ಆಟ ಹೂಡಿದ್ದೇ ಲಗ್ಗೆ.

Image result for jayalalitha sasikala
Source: NDTV

ಅವಕಾಶ ಒದಗದೇ ಇದ್ದರೂ ಅದನ್ನು ಸೃಷ್ಟಿಸಿಕೊಂಡು ಜಯಲಲಿತಾ ಮೇಲೆ ಬಹಿರಂಗವಾಗಿ ಆಣೆ ಪ್ರಮಾಣ ಮಾಡುವ ಮೂಲಕ ಜನರ ವಿಶ್ವಾಸ ಪಡೆಯಲು ಮುಂದಾಗಿರುವ ಶಶಿಕಲಾ ಈಗಿನ ವರ್ತನೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಓ ಪನ್ನೀರ ಸೆಲ್ವಂ ನೇರಕಾರಣ. ಜಯಲಲಿತಾ ಉತ್ತರಾಧಿಕಾರಿ ಪಟ್ಟವಾದ ಸಿಎಂ ಸ್ಥಾನವನ್ನು ಶಶಿಕಲಾ ಅವರಿಗೆ ರಜತಪಾತ್ರೆಯಲ್ಲಿಟ್ಟು ದಾನ ಮಾಡಿರುವ ಪನ್ನೀರ ಸೆಲ್ವಂ ಯಾವ ದೃಷ್ಟಿಕೋನದಿಂದ ನೋಡಿದರೂ ನಾಯಕತ್ವ ನಿರ್ವಹಣೆಯ ಲಕ್ಷಣಗಳನ್ನು ಪಡೆದಿಲ್ಲ. ಸ್ವಾಮಿ ನಿಷ್ಠೆ – ದೇವಿನಿಷ್ಠೆಯೊಂದೆ ಬಲ ಎಂಬ ಮಾತಿನಲ್ಲಿ ನಂಬಿಕೆ ಇಟ್ಟಂತೆ ಕಾಣಿಸುವ ಪನ್ನೀರ ಸೆಲ್ವಂ ಒಬ್ಬ ಚುನಾಯಿತ ಜವಾಬ್ದಾರಿಯುತ ಶಾಸಕನಾಗಿ ಹಾಗೂ ಸಿಎಂ ಸ್ಥಾನವನ್ನು ನಿರ್ವಹಿಸಿ ಈಗ ಅದನ್ನು ಪರಿತ್ಯಜಿಸಿ ಬಂದಿರುವ ಒಳ ಬೆಳವಣಿಗೆಯ ಬಗ್ಗೆ ಸಾರ್ವಜನಿಕರಿಗೆ ವಿವರಣೆ ಕೊಡಬೇಕಾದದ್ದು ಅಗತ್ಯ. ಯಾಕೆಂದರೆ, ರಾಜಕಾರಣ ಎಂಬುದು ದಳ್ಳಾಳಿಗಳ ದರ್ಬಾರ್ ಅಲ್ಲ. ಹಾಗೆಯೇ ಯಾರೊಬ್ಬರ ಮನೆವಾರ್ತೆಯೂ ಅಲ್ಲ. ನಾಡಿನ ಹಣೆ ಬರಹವನ್ನು ನಿಷ್ಕರ್ಷೆ ಮಾಡುವ ಇಂತಹ ಪರಿತ್ಯಾಗದ ಬೆಳವಣಿಗೆ ಪ್ರಜಾತಂತ್ರಕ್ಕೆ ದೊಡ್ಡ ಕಳಂಕ.