ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಮುಸ್ಲಿಂ ಮಹಿಳೆಯರ ತ್ರಿವಳಿ ತಲಾಖ್ ನಿಷೇದ ಎಂದ ಸುಪ್ರೀಂ..!

0
523

ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ತ್ರಿವಳಿ ತಲಾಖ್ ಸಂಬಂಧಿಸಿದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದಿದ್ದು ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ತ್ರಿವಳಿ ತಲಾಖ್’ನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ.

ಐವರು ನ್ಯಾಯಾಧೀಶರ ಪಂಚ ಸದಸ್ಯ ಪೀಠ ಈ ತೀರ್ಪು ನೀಡಿದೆ. ತ್ರಿವಳಿ ತಲಾಖ್ ರದ್ದು ಮಾಡಬೇಕು ಎಂದು ಮೂವರು ನ್ಯಾಯಾಧೀಶರು ತೀರ್ಪು ನೀಡಿದ್ದರೆ, ಮುಖ್ಯ ನ್ಯಾಯಾಧೀಶರಾದ ಜೆಎಸ್ ಖೆಹರ್ ಹಾಗೂ ಕರ್ನಾಟಕ ಮೂಲದ ನ್ಯಾ. ಅಬ್ದುಲ್ ನಜೀರ್ ತ್ರಿವಳಿ ತಲಾಖ್ ಪರವಾಗಿ ತೀರ್ಪು ಬರೆದಿದ್ದಾರೆ. ಬಹುಮತದ ಲೆಕ್ಕಾಚಾರದಲ್ಲಿ ಐವರಲ್ಲಿ ಮೂವರು ತ್ರಿವಳಿ ತಲಾಖ್ ನಿಷೇಧವಾಗ್ಬೇಕು ಎಂದಿರುವ ಕಾರಣ ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದೆ.

ತ್ರಿವಳಿ ತಲಾಖ್ ಪರವಾಗಿ ತೀರ್ಪು ನೀಡಿದ್ದ ಮುಖ್ಯ ನ್ಯಾಯಾಧೀಶರಾದ ಜೆಎಸ್ ಖೇಹರ್, ಇದಕ್ಕೆ ಸಂವಿಧಾನಿಕ ಕಾನೂನು ರೂಪಿಸಲು ಅವಕಾಶ ಕೊಟ್ಟು, 6 ತಿಂಗಳವರೆಗೆ ತಡೆ ನೀಡಿದ್ದರು. ತ್ರಿವಳಿ ತಲಾಖ್ ಸಂವಿಧಾನದ ಆರ್ಟಿಕಲ್ 14,15,21 ಹಾಗೂ 25ರ ಉಲ್ಲಂಘನೆಯಲ್ಲ ಎಂದು ಅವರು ಹೇಳಿದ್ದು, ಮುಂದಿನ 6 ತಿಂಗಳ ಒಳಗೆ ಸಂವಿಧಾನ ಈ ಬಗ್ಗೆ ಕಾನೂನು ರೂಪಿಸಬೇಕು ಎಂದಿದ್ದರು. ಆದ್ರೆ ಉಳಿದ ಮೂವರು ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಯುಯು ಲಲಿತ್ ಹಾಗೂ ಆರ್.ಎಫ್ ನಾರಿಮನ್ ತ್ರಿವಳಿ ತಲಾಖ್ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಮುಸ್ಲಿಂ ಮಹಿಳೆಯರ ಹಿತಾಸಕ್ತಿ ಹಾಗೂ ಸ್ವಾತಂತ್ರ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತ್ರಿವಳಿ ತಲಾಖ್ ನಿಷೇಧಿಸಿದ್ದಾರೆ.

ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಮುಸ್ಲಿಂ ಮಹಿಳೆಯರ ಹಕ್ಕು ಉಲ್ಲಂಘನೆ ಎಂದು ಕೋರ್ಟ್ ಹೇಳಿತ್ತು. ಆದ್ರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತ್ರಿವಳಿ ತಲಾಖ್ ಬೇಕು ಎಂದಿತ್ತು. ಉತ್ತರಾಖಂಡ್ ಮೂಲದ ಶಾಹಿರಾ ಭಾನು ಅನ್ನೋ ಮಹಿಳೆ 2015ರಲ್ಲಿ ತಲಾಖ್ ವಿರುದ್ಧ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿದ್ರು. ಶಾಹಿರಾ ಬೆನ್ನಲ್ಲೇ ಸುಪ್ರೀಂಕೋರ್ಟ್ ಗೆ ಹಲವು ಮಹಿಳೆಯರು ತಲಾಖ್ ವಿರೋಧಿಸಿ ಅರ್ಜಿ ಹಾಕಿದ್ರು. ಆಗ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಆಗ ಮೋದಿ ಸರ್ಕಾರ ತ್ರಿವಳಿ ತಲಾಖ್ ಕೊನೆಯಾಗ್ಬೇಕು ಎಂದು ಅರ್ಜಿ ಹಾಕಿತ್ತು. ಕೊನೆಗೆ ಬರೋಬ್ಬರಿ 6 ದಿನಗಳ ಕಾಲ ನಿರಂತರವಾಗಿ ಸುಪ್ರೀಂ ಕೋರ್ಟ್ ವಾದ ಪ್ರತಿವಾದವನ್ನ ಆಲಿಸಿ ತೀರ್ಪನ್ನ ಕಾಯ್ದಿರಿಸಿತ್ತು. ಇವತ್ತು ಆ ತೀರ್ಪು ಪ್ರಕಟವಾಗಿದೆ.

ಖುರಾನ್’ನಲ್ಲಿ ಅನುಮತಿ ಇಲ್ಲದ ಆಚರಣೆಗೆ ಸಂವಿಧಾನದ ರಕ್ಷಣೆ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಇಸ್ಲಾಮಿಕ್ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್’ಗೆ ನಿಷೇಧ ಇರುವಾಗ ಸ್ವತಂತ್ರ ಭಾರತದಲ್ಲಿ ಇದು ಯಾಕೆ ಸಾಧ್ಯವಿಲ್ಲ? ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಈ ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಿದೆ.