ಉಡುಪಿ ಹೆಸರಿನ ನಿಷ್ಪತ್ತಿಯ ಅರ್ಥ

0
1136

ಉಡುಪಿ (ತುಳು:ಒಡಿಪು) ಭಾರತ ದೇಶದ ಕರ್ನಾಟಕದ ರಾಜ್ಯದ ಒಂದು ಜಿಲ್ಲೆ. ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ಥಿತ್ವಕ್ಕೆ ಬಂದಿತು. ಉತ್ತರದ ಮೂರು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರೂ ಇದ್ದಾರೆ.

ಒಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ತುಳುವಿನ ಹೆಸರು ಒಡಿಪು”ವಿನಿಂದ ಬಂದಿರುವುದಾಗಿ ನಂಬಲಾಗಿದೆ. ಈ ತುಳುವಿನ ಹೆಸರು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿವುದಾಗಿ ಕೆಲವು ವಿದ್ವಾಂಸರು ಸೂಚಿಸಿದ್ದಾರೆ. ಇನ್ನೊಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ಸಂಸ್ಕೃತ ಶಬ್ದ ಉಡು” ಹಾಗೂ ಪ”ಗಳಿಂದ ಬಂದಿರುವುದಾಗಿ ನಂಬಲಾಗಿದೆ.

 ಸಂಸ್ಕೃತ ಶಬ್ದ ಉಡು”ವಿನ ಅರ್ಥ “ನಕ್ಷತ್ರಗಳು” ಹಾಗೂ ಪ”ವಿನ ಅರ್ಥ “ಒಡೆಯ”. ದಂತಕತೆಯ ಪ್ರಕಾರ, ಚಂದ್ರನ ಪ್ರಕಾಶವು ಒಂದು ಸಾರಿ ದಕ್ಷರಾಜನ ಶಾಪದಿಂದಾಗಿ ಕಡಿಮೆಯಾಯಿತು. ಚಂದ್ರನು ದಕ್ಷರಾಜನ ೨೭ ಮಗಳಂದಿರನ್ನು (ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೨೭ ನಕ್ಷತ್ರಗಳು) ಮದುವೆ ಆಗಿದ್ದನು. ಚಂದ್ರ ಹಾಗು ಚಂದ್ರನ ಹೆಂಡತಿಯರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಶಿವನು ಒಲಿದು ಚಂದ್ರನ ಪ್ರಕಾಶವು ಮರಳಿ ಬರುವಂತೆ ಮಾಡಿದನು. ಹಾಗಾಗಿ ನಕ್ಷತ್ರಗಳ ಒಡೆಯ (ಸಂಸ್ಕೃತ: ಉಡುಪ) ತಪಸ್ಸು ಮಾಡಿದ್ದರಿಂದ ಈ ಕ್ಷೇತ್ರಕ್ಕೆ ಉಡುಪಿ ಎಂಬ ಹೆಸರು ಬಂದಿತೆಂದು ಎಂದು ಪ್ರತೀತಿ. ಆದರೆ, ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಒಡಿಪು ಶಬ್ದದಿಂದ ಉಡುಪಿ ನಿಷ್ಪನ್ನವಾಗಿರುವುದು ಹೆಚ್ಚು ಸಮರ್ಪಕವಾಗಿದೆ. ಈಗಲೂ ತುಳುವಿನಲ್ಲಿ ಈ ಊರನ್ನು ಒಡಿಪು ಎಂದು ಕರೆಯಲಾಗುತ್ತಿರುವುದು ನಿಜಕ್ಕೂ ವಿಶೇಷ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇತಿಹಾಸ ಪರಂಪರೆ:

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇತಿಹಾಸ ಪರಂಪರೆಯು ಹೆಚ್ಚು ಸಮಾನ ಸ್ವರೂಪದ್ದು. ಇಡೀ ಕರ್ನಾಟಕದ ಕರಾವಳಿ ಪ್ರದೇಶ ಪರಶುರಾಮ ಸೃಷ್ಟಿಯೆಂದು ಪ್ರತೀತಿಯುಂಟು. ಮಾರ್ಕಂಡೇಯ, ವಾಯು ಮತ್ತು ಭವಿಷ್ಯೋತ್ತರ ಪುರಾಣಗಳು ಇಲ್ಲಿನ ಕೆಲವು ನದಿಗಳ ಮತ್ತು ಪರ್ವತಗಳ ಹೆಸರುಗಳನ್ನು ಉಲ್ಲೇಖಿಸುತ್ತವೆ. ತಮಿಳಿನ ‘ಸಂಗಂ’ ಕಾಲದ ಸಾಹಿತ್ಯದಲ್ಲಿ ತುಳುನಾಡಿನ ಪ್ರಸ್ತಾಪ ಬರುತ್ತದೆ.

ಅಶೋಕನ ಶಾಸನಗಳಲ್ಲಿ ಬರುವ ಸಾತಿಯಪುತ್ರ ಅಥವಾ ಸತ್ಯಪುತ್ರರೆಂಬ ಸಮುದಾಯದ ಉಲ್ಲೇಖ ಈ ಪ್ರದೇಶದ ಜನರನ್ನು ಕುರಿತದ್ದೆಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಜಿಲ್ಲೆ ತೀರಪ್ರದೇಶದಲ್ಲಿ ರುವುದರಿಂದ ಇದು ಹೊರಗಿನ ಪ್ರಪಂಚದ ಸಂಪರ್ಕವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಪ್ರಸಕ್ತ ಶಕೆಯ ಆಚೀಚೆಗಿನ ಶತಮಾನಗಳಿಗೆ ಸೇರಿದ ಗ್ರೀಕ್ ಮತ್ತು ರೋಮನ್ನರ ಪ್ರವಾಸಿ ಕಥನಗಳಲ್ಲಿ ಈ ತೀರದ ಅನೇಕ ಸ್ಥಳಗಳ ಉಲ್ಲೇಖಗಳಿವೆ.

ಉಡುಪಿ ಶೈಲಿಯ ಅಡುಗೆ

ಉಡುಪಿ ಶೈಲಿಯ ಅಡುಗೆ ವಿಶ್ವವಿಖ್ಯಾತ. ಉಡುಪಿ ಹೋಟೆಲ್‌ಗಳೂ ವಿಶ್ವದಾದ್ಯಂತ ಪ್ರಸಿದ್ಧ. ಉಡುಪಿ ಶೈಲಿಯ ಪಾಕಶಾಸ್ತ್ರ, ವಿದೇಶಗಳಲ್ಲೂ ಪ್ರಸಿದ್ಧ. ಕೃಷ್ಣ ದೇವರಿಗೆ ಪ್ರತಿದಿನವೂ ಬೇರೆ ಬೇರೆ ರೀತಿಯ ಅಡುಗೆ ಮಾಡುತ್ತಾರೆ. ಚಾತುರ್ಮಾಸದ (ಮಳೆಗಾಲದ ನಾಲ್ಕು ತಿಂಗಳ ಅವಧಿ) ಸಮಯದಲ್ಲಿ ತಯಾರಿಸಲಾಗುವ ಅಡುಗೆಗಳಿಗೆ ಕೆಲವು ನಿರ್ಬಂಧಗಳಿವೆ. ಈ ನಿರ್ಬಂಧಗಳು ಹಾಗೂ ಅವಶ್ಯಕತೆಗಳು, ಆ ಸಮಯದಲ್ಲಿ ಸಿಗುವ ಹಾಗು ಹತ್ತಿರದಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿ.

ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ದಾರಿ ಮಾಡಿದುವು. ಕೃಷ್ಣ ದೇವರಿಗೆ ಅಡುಗೆ ಮಾಡುವ ಶಿವಳ್ಳಿ ಬ್ರಾಹ್ಮಣರು ಈ ಅಡುಗೆ ಶೈಲಿಯನ್ನು ಸೃಷ್ಟಿಸಿದರು. ಇಂದು ದಕ್ಷಿಣಭಾರತದಾದ್ಯಂತ ಉಡುಪಿ ಜಿಲ್ಲೆಯವರು ನಡೆಸುವ ಹೋಟೆಲ್ ಗಳು “ಉಡುಪಿ ಹೋಟೆಲ್’ಎಂಬ ಹೊಸ ಬ್ರಾಂಡ್ ನ್ನು ಸೃಷ್ಟಿಸಿವೆ. ಬೆಂಗಳೂರಿನ ಎಂ.ಟಿ.ಆರ್. ಸಹಾ ಮೂಲತ: ಉಡುಪಿ ಅಡುಗೆಯ ಶೈಲಿಯಿಂದ ರೂಪುಗೊಂಡಿದ್ದು, ಈಗ ಸಿದ್ದ ಆಹಾರಗಳ ತಯಾರಿಯಲ್ಲೂ ಹೆಸರಾಗಿದೆ.