ಮತ್ತೊಮ್ಮೆ ಉಳುವವನೇ ಭೂ ಒಡೆಯ

0
1098

70ರ ದಶಕದಲ್ಲಿ ದೇಶಾದ್ಯಂತ ಜಾರಿಯಲ್ಲಿದ್ದತುರ್ತು ಪರಿಸ್ಥಿತಿಯನ್ನು ಬಳಸಿಕೊಂಡೇ ದೇವರಾಜು ಅರಸು ಅವರು ಇಂತಹ ಕ್ರಾಂತಿಕಾರಕ ಕಾಯ್ದೆಯನ್ನು ಜಾರಿಗೆ ತಂದರು. ಕಾಯ್ದೆ ವಿರುದ್ಧ ಭೂ ಮಾಲೀಕರು ತೀವ್ರ ಆಕ್ರೋಶ ಹೊಂದಿದ್ದರಾದರೂ ಅಂದಿನ ಸಂದರ್ಭದಲ್ಲಿ ಯಾರೊಬ್ಬರೂ ವಿರೋಧದ ದನಿ ಎತ್ತಿರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ಅಂಥದ್ದೇ ಕಾನೂನು ಜಾರಿಗೆ ನಡೆದಿರುವ ಚಿಂತನೆ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಟ್ಟಿರುವ ರಾಜ್ಯ ಸರ್ಕಾರವೀಗ ಉಳುವವನೇ ಭೂ ಒಡೆಯ ಕಾನೂನನ್ನು ಮತ್ತೆ ಜಾರಿಗೆ ತರಲು ಮುಂದಾಗಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಗೇಣಿದಾರಿಕೆ ಹಕ್ಕನ್ನು ನೀಡುವ ಬಗ್ಗೆ ಗಂಭೀರ ಪರಿಶೀಲನೆ ನಡೆಸುವ ಮೂಲಕ ಜೇನುಗೂಡಿಗೆ ಕಲ್ಲೆಸೆಯಲು ಮುಂದಾಗಿದೆ.

ಗ್ರಾಮೀಣ ಭಾಗದ ಗೇಣಿದಾರರು ಸಾಮಾಜಿಕ ಹಾಗೂ ಅರ್ಥಿಕವಾಗಿ ಉನ್ನತಿಗೆ ಬರಲೆಂಬ ಕಾರಣ್ಣಕ್ಕಾಗಿ ದೇಶದಲ್ಲಿ ಮೊದಲ ಬಾರಿ ಜಾರಿಗೊಂಡಿದ್ದ ಈ ಯೋಜನೆಯನ್ನು ಮತ್ತೆ ಜಾರಿಗೊಳಿಸುವ ಮೂಲಕ ಹಾಲಿ ಗೇಣಿಪದ್ಧತಿಯಲ್ಲಿರುವ ಲಕ್ಷಾಂತರ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಉದ್ದೇಶವಾಗಿದೆ.

4 ದಶಕದ ಕಾಯ್ದೆ : ಡಿ ದೇವರಾಜ ಅರಸು ಅವರು 1974ರಲ್ಲಿ ಜಾರಿಗೆ ತಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಲಕ್ಷಾಂತರ ಕೃಷಿಕರಿಗೆ ಉಳುವವನೇ ಭೂಮಿಗೆ ನಿಯಮದಡಿ ಭೂಮಿಯ ಹಕ್ಕನ್ನು ದೊರೆಕಿಸಿಕೊಟ್ಟಿತ್ತು. ಆದರೆ ಆ ನಂತರ ರಾಜ್ಯದಲ್ಲಿ ಗೇಣಿ ಪದ್ಧತಿ ರದ್ದು ಮಾಡಲಾಗಿತ್ತು.

ದಾಕಲಾತಿ ಒತ್ತಾಯ: ಕೇವಲ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಬದಲಿಗೆ ಗೇಣಿದಾರರನ್ನು ದಾಖಲಾತಿ ಮಾಡುವ ಕಾರ್ಯ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಆ ರೀತಿಮಾಡುವುದಕ್ಕೆ ಮುಂದಾದರೆ ಭೂ ಮಾಲೀಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಜಿಪಿಎಸ್ ಮೂಲಕ ಪಟ್ಟಿ ಮಾಡುವ ಕಾರ್ಯ ಹಮ್ಮಿಕೊಳ್ಳುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ಹಕ್ಕಿನ ರಕ್ಷಣೆಗೂ ಆದ್ಯತೆ: ಗೇಣಿದಾರರಿಗೆ ಭೂಮಿಯ ಹಕ್ಕನ್ನು ಕೊಡಿಸಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ರಕ್ಷಣ ಮಾಡುವ ಬಗ್ಗೆಯಾದರೂ ಕಾನೂನು ರೂಪಿಸಲು ಸರ್ಕಾರ ಗಂಭೀರ ಚಿಂತನೆ ಮಾಡಿದೆ. ಆಂಧ್ರ, ಕೇರಳದಲ್ಲಿ ಇಂಥ ಕಾನೂನು ಜಾರಿಯಲ್ಲಿದೆ. ಅಧ್ಯಯನವೂ ನಡೆಯುತ್ತದೆ. ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಗೇಣಿದಾರರ ರಕ್ಷಣೆಗಾಗಿ ಕರಡನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿತ್ತು. ಆದರೆ ಸಂಸತ್ ಮುಂದೆ ತೆಗೆದುಕೊಂಡು ಹೋಗುವುದರೊಳಗೆ ಸರ್ಕಾರವೇ ಬಿದ್ದು ಹೋಗಿತ್ತು. ಈಗ ಕೇಂದ್ರ ಸರ್ಕಾರ ಗುತ್ತಿಗೆ ನೀಡುವ ಬಗ್ಗೆ ಕಾನೂನು ರೂಪಿಸುವುದರಿಂದ ಗೇಣಿದಾರರಿಗೆ ಕೆಲ ಹಕ್ಕುಗಳನ್ನು ನೀಡುವ ಮೂಲಕ ಅವರ ರಕ್ಷನೆಯಾಗಲಿದೆ.