ಐದು ನಿಮಿಷದಲ್ಲಿ ವಿವಿಧ ಉಂಡೆಗಳನ್ನು ಮಾಡಲು ಕಲಿಯಿರಿ !!

0
2092

ತಂಬಿಟ್ಟಿನ ಉಂಡೆ
ಸಾಮಗ್ರಿ: ಹುರಿಗಡಲೆ-2 ಕಪ್, ಒಣಕೊಬ್ಬರಿ ತುರಿ-1 ಕಪ್, ಎಳ್ಳಿನ ಪುಡಿ-3 ಟೀ ಚಮಚ, ತುರಿದ ಬೆಲ್ಲ-3/4 ಕಪ್, ತುಪ್ಪ-3/4 ಕಪ್, ಏಲಕ್ಕಿ ಪುಡಿ-1/2 ಟೀ ಚಮಚ, ಗಸಗಸೆ ಪುಡಿ-2 ಟೀ ಚಮಚ.
ವಿಧಾನ: ಹುರಿಗಡಲೆಯನ್ನು ಸ್ವಲ್ಪ ಬಿಸಿ ಮಾಡಿ ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ತುರಿದ
ಬೆಲ್ಲ ಕರಗಿಸಿ. ಕರಗಿದ ನಂತರ, ಒಣಕೊಬ್ಬರಿ ತುರಿ, ಹುರಿಗಡಲೆ ಪುಡಿ, ಎಳ್ಳಿನ ಪುಡಿ, ಗಸಗಸೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿಳಿಸಿ. ತಣಿದ ನಂತರ, ಬೇಕಾz ಗಾತ್ರದಲ್ಲಿ ಉಂಡೆ ಕಟ್ಟಿ. ಸ್ವಾದಿಷ್ಟವಾದ ತಂಬಿಟ್ಟಿನ ಉಂಡೆ ಸವಿಯಲು ಸಿದ್ಧ.
ಭತ್ತದ ಅರಳಿನ ಉಂಡೆ

ಸಾಮಗ್ರಿ: ಅರಳಿನ ಪುಡಿ-2 ಕಪ್, ಬೆಲ್ಲದ ಪುಡಿ-2 ಕಪ್, ಜೇನುತುಪ್ಪ-2 ಟೀ ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು-1/4 ಕಪ್, ಲವಂಗದ ಪುಡಿ-1/4 ಟೀ ಚಮಚ, ಜಾಕಾಯಿ ಪುಡಿ-1/4 ಟೀ ಚಮಚ, ಏಲಕ್ಕಿ ಪುಡಿ-1/4 ಟೀ ಚಮಚ, ತುಪ್ಪ-5 ಟೀ ಚಮಚ.
ವಿಧಾನ: ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಬೆಲ್ಲದ ಪುಡಿ ಸೇರಿಸಿ ಕರಗಿಸಿ. ಬೆಲ್ಲ ಕರಗಿದ ನಂತರ, ಅರಳಿನ ಪುಡಿ, ಜೇನುತುಪ್ಪ, ಏಲಕ್ಕಿ ಪುಡಿ, ಜಾಕಾಯಿ ಪುಡಿ, ಗೋಡಂಬಿ ಚೂರುಗಳು, ಲವಂಗದ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಒಲೆಯಿಂದ ಕೆಳಗಿಳಿಸಿ ಕ್ಯೆಗೆ ತುಪ್ಪ ಸವರಿಕೊಂಡು, ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ.
ಖರ್ಜೂರದ ಉಂಡೆ

ಸಾಮಗ್ರಿ: ಕತ್ತರಿಸಿದ ಖರ್ಜೂರ-1 ಕಪ್, ಹಾಲು-1/4 ಕಪ್, ಹುರಿದ ತೆಂಗಿನಕಾಯಿತುರಿ-1/2 ಕಪ್, ತುಪ್ಪದಲ್ಲಿ ಹುರಿದ ದ್ರಾಕ್ಷಿ: 7-8, ತುಪ್ಪದಲ್ಲಿ ಹುರಿದ ಗೋಡಂಬಿ ತುಂಡುಗಳು: 8-10, ಹುರಿದ ಎಳ್ಳು-1 ಟೀ ಚಮಚ, ಹುರಿದ ಗಸಗಸೆ-1 ಟೀ ಚಮಚ, ತುರಿದ ಬೆಲ್ಲ-1 ಕಪ್, ಏಲಕ್ಕಿ ಪುಡಿ-1/2 ಟೀ ಚಮಚ, ಜಾಕಾಯಿ-1/4 ಟೀ ಚಮಚ, ತುಪ್ಪ-4 ಟೀ ಚಮಚ.
ವಿಧಾನ: ಖರ್ಜೂರದ ತುಂಡುಗಳಿಗೆ ಹಾಲು ತೆಂಗಿನಕಾಯಿ ಸೇರಿಸಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ತುರಿದ ಬೆಲ್ಲ ಕರಗಿಸಿ. ಬೆಲ್ಲ ಕರಗುತ್ತಿದ್ದಂತೆಯೇ, ಒಲೆಯಿಂದ ಕೆಳಗಿಳಿಸಿ, ರುಬ್ಬಿದ ಖರ್ಜೂರದ ಮಿಶ್ರಣ, ಎಳ್ಳು, ಗಸಗಸೆ, ಒಣದ್ರಾಕ್ಷಿ, ಗೋಡಂಬಿ ತುಂಡುಗಳು, ಏಲಕ್ಕಿ, ಜಾಕಾಯಿಪುಡಿ ಸೇರಿಸಿ ಚೆನ್ನಾಗಿ ಕಲಕಿ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ರುಚಿಯಾದ, ಸ್ವಾದಿಷ್ಟಭರಿತ ಖರ್ಜೂರದ ಉಂಡೆ ಸವಿಯಲು ಸಿದ್ಧ.

ಚುರುಮುರಿ(ಪುರಿ) ಉಂಡೆ
ಸಾಮಗ್ರಿ: ಚುರುಮುರಿ-4 ಕಪ್, ಬೆಲ್ಲದ ತುರಿ-2 ಕಪ್, ಹುರಿಗಡಲೆ-1 ಕಪ್, ಏಲಕ್ಕಿ ಪುಡಿ-1 ಟೀ ಚಮಚ, ಒಣ ಕೊಬ್ಬರಿ ತುರಿ-1 ಕಪ್, ತುಪ್ಪ-1 ಕಪ್.
ವಿಧಾನ: ಬೆಲ್ಲದ ತುರಿಗೆ 1 ಕಪ್ ನೀರು ಸೇರಿಸಿ, ಕುದಿಸಿ ಪಾಕ ತಯಾರಿಸಿ. (ನೀರಿನ ಪಾತ್ರೆಗೆ ಒಂದು ಹನಿ ಪಾಕ ಹಾಕಿದರೆ, ಅದು ಕರಗದೆ, ಮಣಿಯಂತೆ ಗುಂಡಾಗಿರಬೇಕು.) ತಯಾರಿಸಿದ ಪಾಕಕ್ಕೆ, ಚುರುಮುರಿ, ಹುರಿಗಡಲೆ, ಒಣಕೊಬ್ಬರಿ
ತುರಿ, ಏಲಕ್ಕಿ ಪುಡಿ, ತುಪ್ಪ ಸೇರಿಸಿ ಕಲಕಿ ಒಲೆಯಿಂದ ಕೆಳಗಿಳಿಸಿ. ಬಿಸಿ ಇರುವಾಗಲೇ ಕೈಗೆ ತುಪ್ಪ ಸವರಿಕೊಂಡು ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ರುಚಿಯಾದ ಚುರುಮುರಿ ಉಂಡೆ ಮಕ್ಕಳಿಗೂ ಪ್ರಿಯ.