ಬಹು ನಿರೀಕ್ಷೆಯಲ್ಲಿ ಕೇಂದ್ರದ ಬಜೆಟ್; ಎರಡನೇ ಬಜೆಟ್ ಮಂಡನೆಗೆ ಸಿದ್ದವಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.!

0
121

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಭಾರಿ ಬಜೆಟ್ ಮಂಡನೆಗೆ ಸಿದ್ದವಾಗಿದ್ದು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಅದರಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸಂಪ್ರದಾಯದಂತೆ ಒಪ್ಪಿಗೆ ಪಡೆದರು. ಕಳೆದ ಒಂದೂವರೆ ವರ್ಷಗಳಿಂದ ಸತತವಾಗಿ ಜಿಡಿಪಿ ಇಳಿಮುಖವಾಗಿರುವುದರಿಂದ ಆರ್ಥಿಕತೆಯ ಚೇತರಿಕೆ ದೃಷ್ಟಿಯಿಂದ ಈ ಬಾರಿಯ ಬಜೆಟ್‌ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಹೌದು ಇಡೀ ದೇಶ ಕೇಂದ್ರ ಬಜೆಟ್ ಮಂಡನೆಗೆ ಕಾಯುತ್ತಿದೆ. ಹಣಕಾಸು ಸಚಿವರು ಸಹ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡು ಸಂಸತ್ತು ತಲುಪಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಆಗಮಿಸಿ ಬಜೆಟ್ ಪ್ರತಿಗಳನ್ನು ಸುತ್ತಿದ ಕೆಂಪು ಬಣ್ಣದ ಬಹಿ-ಖಾಟಾವನ್ನು ಹಿಡಿದುಕೊಂಡು ತಮ್ಮ ತಂಡದೊಂದಿಗೆ ಸಚಿವಾಲಯದ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ನಿಂತುಕೊಂಡರು. ರೈತರ ಆದಾಯ ವೃದ್ಧಿಗೆ ಕೃಷಿಗೆ ಸಂಬಂಧಿಸಿದ ಮಹತ್ವದ ಘೋಷಣೆಗಳು, ಉದ್ಯೋಗ ಸೃಷ್ಟಿಗೆ ಒತ್ತು ಸೇರಿದಂತೆ ಹಲವು ನಿರೀಕ್ಷೆಗಳು ವಿವಿಧ ವಲಯಗಳಿಂದ ಕೇಳಿಬಂದಿವೆ.

ಮತ್ತೊಂದು ಕಡೆ ತೆರಿಗೆ ಸಂಗ್ರಹದಲ್ಲಿಇಳಿಕೆಯಾಗಿರುವುದರಿಂದ ಸಂಪನ್ಮೂಲ ಕ್ರೋಡೀಕರಣ ಮತ್ತು ಹಂಚಿಕೆ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಸಚಿವರು ಹೇಗೆ ಸಮತೋಲನ ಕಾಯ್ದುಕೊಳ್ಳಲಿದ್ದಾರೆ ಎಂಬುದು ಕುತುಹಲ ಮೂಡಿಸಿದ್ದು ನಿರೀಕ್ಷೆಯಲ್ಲಿರುವ ಕೆಲವು ಬಜೆಟ್ ಹೀಗಿವೆ.

ಸ್ವಿಸ್‍ಬ್ಯಾಂಕ್ ಅಕೌಂಟ್ ಬೇಟೆ

ಕಪ್ಪು ಹಣದಾರರಿಗೆ ಬಜೆಟ್‍ನಲ್ಲಿ ಬಿಗ್ ಶಾಕ್

ಮೋದಿ ಕೈಯಲ್ಲಿ ಸ್ವಿಸ್ ಖಾತೆದಾರರ ಪಟ್ಟಿ

ಹಣ ಘೋಷಿಸಿಕೊಂಡು ದಂಡ ಕಟ್ಟಲು ಸೂಚಿಸಬಹುದು

ಕೃಷಿ ಕ್ಷೇತ್ರಕ್ಕೆ ಸಿಗುತ್ತಾ ಖುಷಿ

ಹೆಚ್ಚು ನೀರನ್ನು ಆಶ್ರಯಿಸುವ ಬೆಳೆಗಳ ಬದಲಿಗೆ ವೈವಿಧ್ಯಮಯ ಆಹಾರ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ರೈತ ಉತ್ಪಾದಕ ಸಂಘಟನೆಗಳಿಗೆ (ಎಫ್‌ಪಿಒ) ಹಣಕಾಸು ನೆರವು ಒದಗಿಸಲು ಮೆಗಾ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಒತ್ತಾಯವೂ ಇದೆ. ಗ್ರಾಮಾಂತರದಲ್ಲಿಬೇಡಿಕೆ, ಖರೀದಿ ಸಾಮರ್ಥ್ಯ ಹೆಚ್ಚಿಸಲು ಪಿಎಂ ಕಿಸಾನ್‌ ಮತ್ತು ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ.

ಮೇಕ್‌ ಇನ್‌ ಇಂಡಿಯಾಗೆ ಉತ್ತೇಜನ?

ಭಾರತ ಕೂಡ ಚೀನಾ ಮಾದರಿಯ ಉತ್ಪಾದನೆ ಮತ್ತು ಬಿಸಿನೆಸ್‌ ಮಾದರಿ ಅನುಸರಿಸಿದರೆ 2025ರ ವೇಳೆಗೆ 4 ಕೋಟಿಗೂ ಹೆಚ್ಚು ಉದ್ಯೋಗ ಕಲ್ಪಿಸಬಹುದು ಎಂದು 2020ರ ಆರ್ಥಿಕ ಸಮೀಕ್ಷೆ ತಿಳಿಸಿದೆ. 2030ರ ವೇಳೆಗೆ 8 ಕೋಟಿ ಉದ್ಯೋಗ ಕಲ್ಪಿಸಬಹುದು ಎಂದೂ ವಿವರಿಸಿದೆ. ಹೀಗಾಗಿ ಬಜೆಟ್‌ನಲ್ಲಿರಫ್ತು ಆಧಾರಿತ ಉತ್ಪಾದನೆ ಹೆಚ್ಚಿಸಲು ಹೊಸ ನೀತಿ ಘೋಷಣೆಯಾಗುವ ನಿರೀಕ್ಷೆ ಇದೆ.