ಇನ್ಮುಂದೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಪಡೆಯಲು ನಾಣ್ಯ ಬೇಕಿಲ್ಲ? ನಾಣ್ಯಗಳ ಬೂತ್‌ಗಳ ಬದಲಾಗಿ ಬರಲಿವೆ ಸ್ಮಾರ್ಟ್‌ಕಾರ್ಡ್‌ ಬೂತ್‌ಗಳು..

0
234

ಪ್ರತಿಯೊಂದು ಹಳ್ಳಿ, ಪಟ್ಟಣಗಳಲ್ಲಿ ಜನರಿಗೆ ಕುಡಿಯಲು ಶುದ್ದ ನೀರು ಸಿಗಲಿ ಎನ್ನುವ ಉದೇಶದಿಂದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿದ ರಾಜ್ಯಸರ್ಕಾರ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮಾಡಿತ್ತು. ಇದರಿಂದ ಬಹಳಷ್ಟು ಉಪಯೋಗ ಕೂಡ ಕಂಡು ಬಂದಿತು ಆದರೆ ನೀರು ಶುದ್ಧೀಕರಣ ಘಟಕಗಳ ಪೈಕಿ ನಾಣ್ಯ ಬೂತ್‌ ಇರುವ ಕಡೆ ನಾನಾ ರೀತಿಯ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ. ಹೀಗಾಗಿ ನಾಣ್ಯಗಳ ಬೂತ್‌ಗಳ ಬದಲಾಗಿ ಸ್ಮಾರ್ಟ್‌ಕಾರ್ಡ್‌ ಬೂತ್‌ಗಳನ್ನು ಅಳವಡಿಸಲು ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ.

ಹೌದು ರಾಜ್ಯ ಸರ್ಕಾರವು ನೀರು ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಮಾರ್ಗಸೂಚಿ ರೂಪಿಸಿ ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ ಅನ್ನು ಅರ್ಹ ಸಂಸ್ಥೆಗಳಿಗೆ ವಹಿಸಲು ನಿರ್ಧರಿಸಿದೆ. ನೀರು ಶುದ್ಧೀಕರಣ ಘಟಕಗಳನ್ನು ಒಮ್ಮೆ ರಿಪೇರಿ ಮಾಡುವುದು ಸೇರಿದಂತೆ ಐದು ವರ್ಷಗಳ ಕಾಲ ನಿರ್ವಹಣೆಗಾಗಿ 233 ಕೋಟಿ ರು. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಗ್ರಾಮ ಪಂಚಾಯತ್‌ಗಳೇ ಸಮರ್ಪಕವಾಗಿ ನಿರ್ವಹಣೆ ಮಾಡಲು ನಿರ್ಧರಿಸಿದರೆ ಅದಕ್ಕೂ ಅವಕಾಶವಿದ್ದು, ಯಾವುದೇ ಸಂಸ್ಥೆಗಳಿಗೆ ವಹಿಸುವುದಿಲ್ಲ ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪ್ರಸ್ತುತ ಪ್ರತಿ ಲೀಟರ್‌ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಆದರೆ, ನಿರ್ವಹಣಾ ವೆಚ್ಚ 35 ಪೈಸೆ ಆಗಿದೆ. ಇದನ್ನು ಸರಿದೂಗಿಸಲು ಕಾಲಕಾಲಕ್ಕೆ ಪ್ರತಿ ಲೀಟರ್‌ಗೆ 25 ಪೈಸೆ ಏರಿಕೆ ಮಾಡುವ ಬಗ್ಗೆಯೂ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳು ತಾವೇ ನಿರ್ವಹಣೆ ಹೊಣೆಗಾರಿಕೆ ನಿಭಾಯಿಸುತ್ತೇವೆ ಎಂದರೆ ಅದಕ್ಕೂ ಒಪ್ಪಿಗೆ ನೀಡಲಾಗುವುದು. ಹೊಸದಾಗಿ ಯಾವುದಾದರೂ ಗ್ರಾಪಂಗಳು ನಿರ್ವಹಣೆಗೆ ಮುಂದಾದರೂ ಅನುಮತಿ ನೀಡಲಾಗುವುದು.

ನಾಣ್ಯದ ಬದಲು ಸ್ಮಾರ್ಟ್‌ ಕಾರ್ಡ್‌?

ಐದು ವರ್ಷ ನಿರ್ವಹಣೆ ಸಮೇತ ಸುಸೂತ್ರವಾಗಿ ಘಟಕ ಕಾರ್ಯನಿರ್ವಹಿಸುವಂತೆ ಮಾಡಲು ಒಟ್ಟು 233 ಕೋಟಿ ರೂ. ವೆಚ್ಚ ಸರ್ಕಾರವೇ ಭರಿಸಲಿದೆ. ಪ್ರತಿ ಘಟಕಕ್ಕೆ ಸರಾಸರಿ ಮೂರು ಸಾವಿರ ರೂ.ನಂತೆ ನಿರ್ವಹಣೆ ವೆಚ್ಚ ನೀಡಲಾಗುವುದು ಎಂದು ಹೇಳಿದರು. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಪ್ರಸ್ತುತ ಇರುವ ನಾಣ್ಯ ಹಾಕಿ ನೀರು ಪಡೆಯುವ ಬೂತ್‌ ವ್ಯವಸ್ಥೆ ಬದಲು ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕಾಯಿನ್‌ ಹಾಕುವ ಬೂತ್‌ನಲ್ಲಿ ಕೆಲವರು ಕಬ್ಬಿಣದ ವಾಷರ್‌,ಬಿಲ್ಲೆ ಹಾಕಿ ನೀರು ಪಡೆಯುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಕಾಯಿನ್‌ ಬೂತ್‌ ಕೆಟ್ಟು ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಸ್ಮಾರ್ಟ್‌ ಕಾರ್ಡ್‌ ಜಾರಿಗೊಳಿಸಲಾಗುವುದು. ಆದರೆ, ಇದರಿಂದ ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.