ಉತ್ತರ ಕರ್ನಾಟಕದ ಭಾಗದ ನೊಂದು ಬೆಂದ ಭಕ್ತರ ಉದ್ಧರಿಸಿದ ಉತ್ನಾಳದ ಶ್ರೀ ಮಹಾಲಕ್ಷ್ಮೀ..!!

0
688

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉತ್ನಾಳ ಶ್ರೀ ಮಹಾಲಕ್ಷ್ಮೀ ಮಂದಿರವು ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರ ಭಕ್ತಿಯ ತಾಣ. ತಾಯಿ ಲಕ್ಷ್ಮೀದೇವಿ ಆರಾಧಕರಾದ ಶ್ರೀ ಶಿವಪುತ್ರಯ್ಯ ಸ್ವಾಮಿಗಳ ಮತ್ತು ಮಾತೆ ಶಶಿಕಲಮ್ಮನವರ ವಾತ್ಸಲ್ಯದಿಂದಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಲಕ್ಷ್ಮೀದೇವಿ ಉಪಾಸಕರಾದ ಶಿವಪುತ್ರಯ್ಯ ಸ್ವಾಮಿಗಳು ನಿಷ್ಕಲ್ಮಷ ಮನದಿಂದ ಭಗವತಿಯ ಆರಾಧನೆ ಮಾಡಿಕೊಂಡು ಬರುತ್ತಿರುವರು. ಅಂದು 1984ರ ಮೇ 15ರ ಬೆಳಗಿನ 4ಗಂಟೆಯ ಸುಮಾರಿಗೆ ಒಂದು ದಿವ್ಯ ಘಟನೆ ಉತ್ನಾಳ ಹಿರೇಮಠದಲ್ಲಿ ಶಿವಪುತ್ರಯ್ಯ ಅಪ್ಪನವರ ಜೀವನದಲ್ಲಿ ಜರುಗಿತು. ಅದು ಅವರ ಬಾಳು ಬೆಳಗಿದ ಸುದಿನ. ಸ್ವಪ್ನವೊಂದರಲ್ಲಿ ಉತ್ನಾಳದ ಮಹಾಲಕ್ಷ್ಮೀ ದೇವಿಯು ತನ್ನ ನಿಜರೂಪ ತೋರಿ ಶಿವಪುತ್ರಯ್ಯ ನಿನ್ನಲ್ಲಿ ನಾನು ನೆಲೆಸಿದ್ದೇನೆ. ನನಗೆ ಶರಣು ಬಂದವರಿಗೆ ನಿನ್ನ ನುಡಿಯೇ ಆಶೀರ್ವಾದ. ಅದೇ ನನ್ನ ಭಕ್ತರಿಗೆ ದಿವ್ಯ ಪ್ರಸಾದ. ಇಂದಿನಿಂದ ನೀನು ನನ್ನ ನುಡಿಯ ವಾಹಕ ಎಂದು ಆಶೀರ್ವದಿಸಿದಳಂತೆ.

ಅಂದಿನಿಂದ ಶಿವಪುತ್ರಯ್ಯ ಅಪ್ಪನವರಲ್ಲಿ ನೆಲೆಸಿ ಭಕ್ತರನ್ನು ಉದರಿಸುತ್ತಿರುವುದು ಎಲ್ಲರ ಭಾಗ್ಯ.ದೇವಿಯ ಲೀಲೆಗಳು ಅನಂತ, ಅಪಾರ, ಜೀವನದಲ್ಲಿ ನೊಂದು ಬೆಂದು ಬೆಂಡಾಗಿ ಹೋದ, ರೋಗರುಜಿನಗಳಿಂದ ಜರ್ಝರಿತ ರಾಗಿ ಹೋದ ಸಹಸ್ರಾರು ಜನರಿಗೆ ಶಿವಪುತ್ರಯ್ಯ ಅಪ್ಪನವರಿಂದ ದೇವಿಯು ಸದ್ಗತಿ ತೋರಿದ ಸಾಕಷ್ಟು ಲೀಲೆಗಳು ಜನಜನಿತವಾಗಿವೆ. ಶಿವಪುತ್ರಯ್ಯ ಅಪ್ಪನವ-ರಿಂದ ಸಾವಿರಾರು ಅಘಟಿತ ಘಟನೆಗಳು ಜರುಗತ್ತಲಿವೆ. ಬಂಜೆ ತೊಟ್ಟಿಲು ತುಂಬಿ ತೂಗಿತು. ಆರೋಗ್ಯವಂತ ಗಂಡು ಮಗು ಪಡೆದ ಭಾಗ್ಯವಂತರು, ಬರಡುಭೂಮಿಯಲ್ಲಿ ಗಂಗಾವತರಣ, ಹಾವು ಕಚ್ಚಿದರೂ ಬದುಕಿ ಉಳಿದಳು ಹೀಗೆ ಅನೇಕ ಪವಾಡಗಳು ಸುಕ್ಷೇತ್ರ ಉತ್ನಾಳದಲ್ಲಿ ನಿತ್ಯ ಇಂದಿಗೂ ನಡೆಯುತ್ತಿವೆ.

ಈ ದೇವಿ ಉತ್ತರ ಕರ್ನಾಟಕದ ಭಾಗದ ನೊಂದು ಬೆಂದವರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಒಂದು ದಿವ್ಯ ತಾಣವಾಗಿದೆ. ಶುಕ್ರವಾರ, ಮಂಗಳವಾರ, ಅಮಾವಾಸ್ಯೆ ಹುಣ್ಣಿಮೆ ಬಂತೆಂದರೆ ಸಾವಿರಾರು ಜನ ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ತಾಯಿ ಲಕ್ಷ್ಮೀದೇವಿ ಇಲ್ಲಿ ಮಾತನಾಡುತ್ತಿದ್ದಾಳೆ. ದೇವರು ಮಾತನಾಡುವುದೇ ಎಂಬ ಪ್ರಶ್ನೆ ಸಹಜ. ಯಾವಶಕ್ತಿ ಪ್ರೇರಣೆಯಿಂದ ಜಗತ್ತು ಜಾಗೃತವಾಗುತ್ತಿರುವುದೋ ಆ ಶಕ್ತಿಯ ಅಂಶವು ಉತ್ನಾಳದ ಅಪ್ಪನವರಲ್ಲಿ ಪ್ರಕಾಶಗೊಳ್ಳುತ್ತಿದೆ. ಆ ದಿವ್ಯ ಸ್ಪರ್ಶ ಪಡೆಯಲು ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಿದ್ದಾರೆ. ಅಪ್ಪನವರು ತಮ್ಮಲ್ಲಿಗೆ ಬಂದ ಭಕ್ತರ ಹೃದಯ ಮಂದಿರದಲ್ಲಿ ಬೆಳಕು ಚೆಲ್ಲುವ ನಂದಾದೀಪವಾಗಿ ಬೆಳಗುತ್ತಿದ್ದಾರೆ. ಅದೆಷ್ಟೋ ದೊಡ್ಡ ಅಧಿಕಾರಿಗಳು, ಸಂಶೋಧಕರು, ಶಿಕ್ಷಕರು ಇಲ್ಲಿನ ಪವಾಡಕ್ಕೆ ಮನಸೋತಿದ್ದಾರೆ. ಅವರು ಇಲ್ಲಿನ ಒಳಿತು ಕಂಡು ಇಲ್ಲಿ ಸಾಮಾನ್ಯರಂತೆ ಸೇವೆ ಮಾಡುತ್ತಾರೆ. ಕೈಕಾಲು ಸ್ವಾಧೀನವಿಲ್ಲದೇ ಬೇರೆಯವರು ಹೊತ್ತುಕೊಂಡು ಬರಬೇಕಾದ ಸ್ಥಿತಿಯಲ್ಲಿರುವವರು ಇಲ್ಲಿಗೆ ಬಂದ ನಂತರ ಎದ್ದು ಓಡಾಡುತ್ತಾರೆ.

ಈ ಕ್ಷೇತ್ರ ಬೆಂಗಳೂರಿನಿಂದ 500 ಕಿಮೀ, ವಿಜಯಪುರ ಜಿಲ್ಲಾ ಕೇಂದ್ರದಿಂದ ರಾ.ಹೆ.13ರ ಮೂಲಕ ಬಸವನಬಾಗೇವಾಡಿ ಮೂಲಕ 16 ಕಿಮೀ ಅಂತರದಲ್ಲಿದೆ.

Also read: ಶಿಲ್ಪಕಲೆ ನೋಡ್ಬೇಕಂದ್ರೆ ಬೇಲೂರು ಹಳೇಬೀಡಿಗೆ ಹೋಗ್ಬೇಕಿಲ್ಲ ಕುಂಬಳಗೋಡಿನಲ್ಲಿರೋ ಪಂಚಾಯತನ ಗಣಪತಿ ದೇವಸ್ಥಾನ ನೋಡಿದ್ರು ಸಾಕು…