‘ವಾರ್ದಾ’ ಚಂಡಮಾರುತ; ತಮಿಳುನಾಡು, ಆಂಧ್ರದಲ್ಲಿ ಭಾರಿ ಮಳೆ ಸಂಭವ

0
694

 

ಚೆನ್ನೈ: ತಮಿಳುನಾಡಿನ ಉತ್ತರ ಭಾಗ ಹಾಗೂ ದಕ್ಷಿಣ ಆಂಧ್ರದಲ್ಲಿ ‘ವಾರ್ದಾ’ ಚಂಡಮಾರುತ ಸೋಮವಾರ ಅಪ್ಪಳಿಸಿದ್ದು  ತಮಿಳುನಾಡು, ಪುದುಚೇರಿ ಹಾಗೂ ಆಂಧ್ರದಲ್ಲಿ ಭಾರಿ ಮಳೆಯಾಗುತ್ತಿದೆ.

 

ಚೆನ್ನೈನ ಪೂರ್ವಭಾಗದಲ್ಲಿ ಕೇಂದ್ರೀಕೃತವಾಗಿರುವ ಈ ಚಂಡಮಾರುತ ಸೋಮವಾರ ಬೆಳಗ್ಗೆಯೇ ಅಪ್ಪಳಿಸಿರುವುದರಿಂದ ರಾಯಲಸೀಮಾ, ನೆಲ್ಲೂರು , ಮಚಲಿಪಟ್ಟಣಂ,  ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ತಿರುವಣ್ಣಾಮಲೈ ನಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ಉಪನಿರ್ದೇಶಕ ಡಾ. ಎಸ್‌. ಬಾಲಚಂದ್ರನ್‌ ತಿಳಿಸಿದ್ದಾರೆ.

 

ಆಂಧ್ರ ಪ್ರದೇಶ, ಉತ್ತರ ತಮಿಳುನಾಡಿನಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಸಮುದ್ರದಲ್ಲಿ ಇರುವ ಮೀನುಗಾರರಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ.

 

ಡಿ. 2ರಂದು ತಮಿಳುನಾಡಿನ ನಾಗಪಟ್ಟಣಂನಲ್ಲಿ ‘ನಾದಾ’ ಚಂಡಮಾರುತ ಹಾದುಹೋದ ಬಳಿಕ ಅಪ್ಪಳಿಸುತ್ತಿರುವ ಎರಡನೇ ಚಂಡಮಾರುತ ಇದು.

 

ವಾರ್ಧಾ ಚಂಡಮಾರುತ ಈಗ 105 ಕಿ.ಮೀ ದೂರ ಈಶಾನ್ಯ ಚೆನ್ನೈನಲ್ಲಿ ಕೇಂದ್ರೀಕೃತವಾಗಿದೆ. ಅದು ಚೆನ್ನೈ ಸಮೀಪ ನೆಲಕ್ಕೆ ಅಪ್ಪಳಿಸುವ ಹೊತ್ತಿಗೆ ಅದರ ವೇಗವು ಗಂಟೆಗೆ 100ರಿಂದ 110 ಕಿ.ಮೀ.

 

ವೇಗದಲ್ಲಿ ಇರುತ್ತದೆ ಮಾತ್ರವಲ್ಲದೇ ತೀವ್ರತೆಯ ಪರಾಕಾಷ್ಠೆಯಲ್ಲಿ ಅದು 120 ಕಿ.ಮೀ ವೇಗವನ್ನು ಕೂಡ ಪಡೆದುಕೊಳ್ಳಬಹುದು ಎನ್ನಲಾಗಿದೆ.

 

ಮುಂದಿನ 36 ತಾಸುಗಳ ಕಾಲ ದಕ್ಷಿಣ ಕರಾವಳಿ ಆಂಧ್ರ ಪ್ರದೇಶ, ಉತ್ತರ ಕರಾವಳಿ ತಮಿಳು ನಾಡು ಮತ್ತು ಪುದುಚೇರಿಯಲ್ಲಿ ಜಡಿ ಮಳೆ ಆಗಲಿದೆ. ಆದರೆ ಬಿರುಗಾಳಿಯ ಹೊಡೆತಕ್ಕೆ ವ್ಯಾಪಕ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಸಮುದ್ರದಲ್ಲಿ ಏಳುವ ಒಂದು ಮೀಟರ್ ಎತ್ತರದ ಹೆದ್ದೆರೆಗಳಿಂದ ಚೆನ್ನೈನ ತಗ್ಗು ಪ್ರದೇಶಗಳಲ್ಲಿ ಮಾತ್ರವ್ಲಲದೆ ತಿರುವಲ್ಲೂರು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಹಾಗೂ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನೀರು ತುಂಬಿಕೊಂಡು ನೆರೆಯ ಸ್ಥಿತಿ ಉಂಟಾಗಲಿದೆ ಎನ್ನಲಾಗಿದೆ.