ಶ್ರಾವಣ ಮಾಸದಲ್ಲಿ ಶ್ರೀ ವೈದ್ಯನಾಥೇಶ್ವರ ಜ್ಯೋತಿರ್ಲಿಂಗದ ದರ್ಶನ ಮಾಡಿದರೆ ಶಿವ-ಪಾರ್ವತಿಯರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ..

0
890

ಜಾರ್ಖಂಡ್ ರಾಜ್ಯದ ಸಂಥಾಲ್ ಜಿಲ್ಲೆಯ ವಿಭಾಗಕ್ಕೆ ಬರುವ ದಿಯೋಗರಾದಲ್ಲಿದೆ ವೈದ್ಯನಾಥ ದೇವಾಲಯ. ಈ ವೈದ್ಯನಾಥ ಕ್ಷೇತ್ರ ಜ್ಯೋತಿರ್ಲಿಂಗವನ್ನು ಹೊಂದಿದ ಕ್ಷೇತ್ರವೂ ಹೌದು ಹಾಗೂ ಶಕ್ತಿ ಪೀಠವೂ ಹೌದು. ಇದನ್ನು 51 ಶಕ್ತಿ ಪೀಠಗಳಲ್ಲಿ ಬರುವ ಯೋನಿ ಪೀಠ ಎಂದು ಕರೆಯಲಾಗುತ್ತದೆ. ಶ್ರೀ ಗೌರೀ ಮಾತಾ ಮಂದಿರ ಇಲ್ಲಿ ಮುಖ್ಯವಾದುದು. ಒಂದೇ ಪೀಠದ ಮೇಲೆ ಶ್ರೀದುರ್ಗಾ ಮತ್ತು ತ್ರಿಪುರಸುಂದರಿ ಎಂದು ಕರೆಯಲ್ಪಡುವ ಎರಡು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಈ ದುರ್ಗಾ ತ್ರಿಪುರಸುಂದರಿ ಮೂರ್ತಿಗಳು ಬಹಳ ಸುಂದರವಾಗಿವೆ.

ಇಲ್ಲಿ ದೇವಿ ಪಾರ್ವತಿಯ ಹೃದಯ ಬಿದ್ದಿತ್ತು ಎಂದು ನಂಬಲಾಗುತ್ತದೆ. ಆದುದರಿಂದ ಶಿವ ಮತ್ತು ಪಾರ್ವತಿ ಜೊತೆಯಾಗಿ ಈ ತಾಣದಲ್ಲಿ ವಿರಾಜಮಾನವಾಗಿ, ಈ ಪುಣ್ಯ ಭೂಮಿಯ ಸ್ಥಾಪನೆ ಮಾಡಿದರು ಎನ್ನಲಾಗುತ್ತದೆ. ಇಲ್ಲಿ ರಚನಾ ಶಕ್ತಿಯ ಒಂದು ರೂಪವಾದ ಪಂಚಶೂಲವನ್ನು ಪ್ರತಿಷಿಸಲಾಗಿದೆ ಎಂದು ಹೇಳಲಾಗುತ್ತದೆ. ದೇವಾಲಯದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಮಂದಿರಗಳಿವೆ. ಇದಲ್ಲದೇ ಮಹಾರಾಷ್ಟ್ರದ ಪಾರ್ಲಿಯ ವೈಜನಾಥ ದೇವಾಲಯ, ಹಿಮಾಚಲ ಪ್ರದೇಶದ ಬೈಜನಾಥದಲ್ಲಿರುವ ಬೈಜನಾಥ್ ದೇವಾಲಯವನ್ನು ಕೂಡ ವೈದ್ಯನಾಥೇಶ್ವರನ ಸನ್ನಿಧಿ ಎನ್ನಲಾಗುತ್ತದೆ.

ಇಲ್ಲಿನ ಇನ್ನೊಂದು ವಿಶೇಷವೇನೆಂದರೆ ಪಂಚಶೂಲ ದರ್ಶನ. ಈ ಪಂಚಶೂಲವನ್ನು ಶಿವನ ಸಂಹಾರ ಶಕ್ತಿಯ ಪ್ರತೀಕ ಎಂದು ಹೇಳಲಾಗುತ್ತದೆ. ಅದೇ ರೀತಿ ಬಾಬಾ ವೈದ್ಯನಾಥನ ಧಾಮದಲ್ಲಿ ಸ್ಥಾಪಿತವಾಗಿರುವ ಪಂಚಶೂಲ ಸೃಷ್ಟಿಯ ರಚನಾತ್ಮಕ ಶಕ್ತಿಯ ಪ್ರತೀಕ ಎಂದು ಹೇಳಲಾಗುತ್ತದೆ. ಅಲ್ಲದೆ ಪಂಚಶೂಲ, ಪಂಚ ಮಹಾಭೂತಗಳ ಪ್ರತೀಕವಾಗಿದ್ದು, ಇದರಲ್ಲಿ ಪಂಚತತ್ವಗಳಿವೆ. ಪಂಚಶೂಲದ ಸ್ಥಾಪನೆ ಇರುವುದರಿಂದ ಈ ದೇವಾಲಯ ಎಲ್ಲಕಿಂತ ವಿಭಿನ್ನವಾಗಿದೆ. ಮಾನ್ಯತೆಯ ಪ್ರಕಾರ ಇಲ್ಲಿ ಬರುವ ಭಕ್ತರು ವೈದ್ಯನಾಥ ಸ್ವಾಮಿಯ ದರ್ಶನ ಪಡೆಯುವಲ್ಲಿ ವಿಫಲರಾದರೆ ಈ ಪಂಚಶೂಲವನ್ನು ನೋಡಿದರೆ ಸಮಸ್ತ ಪುಣ್ಯ ಫಲ ಅವರಿಗೆ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಪವಿತ್ರವಾದ ಗಂಗಾ ನದಿ ಇಲ್ಲಿಗೆ ಉತ್ತರದಲ್ಲಿ 105 ಕಿ.ಮೀ. ದೂರದಲ್ಲಿರುವ ಅಜಗೈಬಿನಾಥ ಧಾಮ್ ಎಂಬಲ್ಲಿ ಪ್ರವಹಿಸುತ್ತಾಳೆ. ಪ್ರತಿ ವರ್ಷ ಶ್ರಾವಣಮಾಸದಲ್ಲಿ ಭಕ್ತರು ಕಾವಿ ಬಟ್ಟೆ ಉಟ್ಟು ಗಂಗಾ ನದಿಯ ಪವಿತ್ರವಾದ ನೀರನ್ನು 105 ಕಿ.ಮೀ. ಕಾಲು ನಡಿಗೆಯಲ್ಲಿ ಕ್ರಮಿಸಿ ತೆಗೆದುಕೊಂಡು ಹೋಗಿ ವೈದ್ಯನಾಥನಿಗೆ ಅಭಿಷೇಕ ಮಾಡುತ್ತಾರೆ. ದಾರಿಯಲ್ಲಿ `ಬಮ್ ಬಮ್ ಭೋಲೆ’, `ಹರ ಹರ ಮಹಾದೇವ್’ ಎಂಬ ಘೋಷಣೆಯನ್ನು ಉತ್ಸಾಹದಿಂದ ಮಾಡುತ್ತಾ ನೀರು ಹೊತ್ತು ಸಾಗುತ್ತಿರುತ್ತಾರೆ. ಇದು ಇಡೀ ಶ್ರಾವಣಮಾಸ ನಡೆಯುತ್ತದೆ. ಇಲ್ಲಿ ಮೇಲು ಜಾತಿ, ಕೀಳು ಜಾತಿ ಎಂಬ ಯಾವುದೇ ಅನಿಷ್ಟಗಳಿರದೆ ಈ ಕಾರ್ಯ ನಡೆಯುತ್ತದೆ. ಇವರಿಗೆ ಕಂವಾರಿಗಳು (ನೀರನ್ನು ಹೊರುವವರು) ಎನ್ನುತ್ತಾರೆ.

ಶ್ರೀ ವೈದ್ಯನಾಥ ದೇವಾಲಯದ ಪೌರಾಣಿಕ ಕಥೆ.

ಹಿಂದೊಮ್ಮೆ ರಾವಣನು ಶಿವನನ್ನು ಕೈಲಾಸದಲ್ಲಿ ಪೂಜಿಸಿದನು. ಆಗ ಶಿವನನ್ನು ಪ್ರಸನ್ನ ಗೊಳಿಸಲು ಘೋರ ತಪ್ಪಸನ್ನು ಮಾಡಿದನು. ರಾವಣನಲ್ಲಿ ಅಹಂಕಾರ ಹಾಗೂ ದುಷ್ಟತನ ತುಂಬಿತ್ತು ಇದರಿಂದಾಗಿ ಶಿವನು ಅವನ ಪೂಜೆಯನ್ನು ಮೆಚ್ಚಲಿಲ್ಲ. ನಂತರ ರಾವಣನು ತನ್ನ ಅಹಂಕಾರ ಹಾಗೂ ದುಷ್ಟತನಕ್ಕೆ ಪ್ರತೀಕವಾದ ತನ್ನ ತಲೆಯನ್ನು ಕಡಿಯುತ್ತಾ ಶಿವನಿಗೆ ಅರ್ಪಿಸಲು ಶುರು ಮಾಡಿದನು. ಹೀಗೆ ಒಂದರ ನಂತರ ಮತ್ತೊಂದಂತೆ ತನ್ನ 9 ತೆಲೆಗಳನ್ನು ಕಡಿದು ಅರ್ಪಿಸಿದ ನಂತರ ಕೊನೆಯ ತಲೆಯನ್ನು ಇನ್ನೇನು ಕಡಿಯಬೇಕು ಎನ್ನುವಷ್ಟರಲ್ಲಿ ಶಿವ ಪ್ರತ್ಯಕ್ಷನಾಗಿ. ರಾವಣನಿಗೆ ದರುಶನ ನೀಡಿದನು.

 

ರಾವಣನು ವರದ ರೂಪದಲ್ಲಿ ಶಿವನು ತನ್ನ ಜೊತೆಗೆ ಲಂಕೆಗೆ ಬಂದು ಅಲ್ಲಿಯೇ ನೆಲೆಸುವಂತೆ ಕೇಳಿದನು. ಶಿವನು ಆತ್ಮಲಿಂಗವನ್ನು ಕೊಟ್ಟು ಒಂದು ಷರತ್ತನ್ನು ವಿಧಿಸಿದನು. ಅದೇನೆಂದರೆ ರಾವಣನು ಆತ್ಮಲಿಂಗವನ್ನು ಕೈಯಲ್ಲೇ ಹಿಡಿದು ಲಂಕೆಗೆ ಹೋಗಬೇಕು ಮತ್ತು ದಾರಿಯ ಮದ್ಯೆ ಏನಾದರೂ ಲಿಂಗವನ್ನು ನೆಲದ ಮೇಲೆ ಇಡಬಾರದು. ಒಂದು ವೇಳೆ ಅದನ್ನು ನೆಲಕ್ಕೆ ಇಟ್ಟರೆ ಅದು ಅಲ್ಲಿಯೇ ಶಾಶ್ವತವಾಗಿ ನೆಲೆಗುತ್ತದೆ ಎಂದು ಹೇಳಿದನು.

ದೇವತೆಗಳು ರಾವಣನ ಈ ಯೋಜನೆಯಿಂದ ಭಯಗೊಂಡರು. ಒಮ್ಮೆ ರಾವಣನು ಆತ್ಮಲಿಂಗವನ್ನು ಲಂಕೆಯಲ್ಲಿ ಸ್ಥಾಪಿಸಿದರೆ ಅವನನ್ನು ಯುದ್ಧದಲ್ಲಿ ಸೋಲಿಸುವುದು ಅಸಾಧ್ಯ. ಆದ್ದರಿಂದ ದೇವತೆಗಳು ಒಂದು ಉಪಾಯ ಮಾಡಿದರು. ವರುಣ ದೇವನನ್ನು ಹೇಗಾದರೂ ಮಾಡಿ ರಾವಣನ ಹೊಟ್ಟೆಯನ್ನು ಪ್ರವೇಶಿಸುವಂತೆ ಕೇಳಿಕೊಂಡರು.ಅಂತೆಯೇ ವರುಣ ದೇವನು ತನ್ನ ಶಕ್ತಿಯಿಂದ ರಾವಣನಿಗೆ ತಿಳಿಯದಂತೆ ಪ್ರವೇಶಿಸಿದನು. ಆಗ ರಾವಣನಿಗೆ ಮೂತ್ರವನ್ನು ಮಾಡುವ ಒತ್ತಡ ಶುರುವಾಯಿತು. ಅವನು ಆತ್ಮಲಿಂಗವನ್ನು ಅಲ್ಲಿಯೇ ಇದ್ದ ಒಬ್ಬ ಬ್ರಾಹ್ಮಣನ ಕೈಗೆ ಕೊಟ್ಟು ನೆಲದ ಮೇಲೆ ಇಡಬೇಡ ನಾನು ಬರುವವರೆಗೂ ಕೈಯಲ್ಲೇ ಹಿಡಿದುಕೊಂಡಿರು ಎಂದು ಹೇಳಿ ಮೂತ್ರ ಮಾಡಲು ಹೋದನು.

ಸಾಕ್ಷಾತ್ ವಿಷ್ಣುವೇ ಬ್ರಾಹ್ಮಣ ವೇಷದಲ್ಲಿ ಅಲ್ಲಿಗೆ ಬಂದಿದ್ದ. ರಾವಣ ಸುಮಾರು ಸಮಯ ಕಳೆದರು ಬರಲೇ ಇಲ್ಲ. ಅವನಿಗೆ ಮೂತ್ರ ನಿಲ್ಲಲೂ ಇಲ್ಲ. ಕೊನೆಗೆ ಬ್ರಾಹ್ಮಣ ವೇಷದಲ್ಲಿದ್ದ ವಿಷ್ಣು ಆತ್ಮಲಿಂಗವನ್ನು ಅಲ್ಲಿಯೇ ನೆಲದ ಮೇಲೆ ಇಟ್ಟನು.

ಭಗವಂತನಾದ ಶಿವನು ಅಲ್ಲಿಯೇ ನೆಲೆ ನಿಂತನು. ನಂತರ ಹಿಂತಿರುಗಿ ಬಂದ ರಾವಣನು ನೆಲದ ಮೇಲೆ ಇದ್ದ ಆತ್ಮಲಿಂಗವನ್ನು ಕಂಡು ತನ್ನ ಬಲವನ್ನೆಲ್ಲಾ ಉಪಯೋಗಿಸಿ ಆತ್ಮಲಿಂಗವನ್ನು ಮೇಲೆತ್ತಲು ಪ್ರಯತ್ನಿಸಿದರೂ ಆಗಲಿಲ್ಲ. ಕೊನೆಗೆ ಕೋಪದಿಂದ ಆತ್ಮಲಿಂಗಕ್ಕೆ ತನ್ನ ಕೈ ಇಂದ ಲಿಂಗವನ್ನು ವತ್ತುತ್ತಾನೆ. ಅವನು ಕೈ ನಿಂದ ಆದ ಗುರುತು ಈಗಲೂ ಸಹ ಹಾಗೆಯೇ ಉಳಿದಿದೆ.

ಆತ್ಮಲಿಂಗವು ವೈದ್ಯನಾಥ ಜ್ಯೋತಿರ್ಲಿಂಗ ಎಂದು ಪ್ರಸ್ಸಿದ್ದವಾಯಿತು ಯಾಕೆಂದರೆ ಶಿವನು ರಾವಣನ ಕಡಿದ 9 ತಲೆಗಳನ್ನು ಮರು ಸ್ಥಾಪಿಸಿ ಜೋಡಿಸಿದನು ಆದ ಕಾರಣ ಮತ್ತು ರಾವಣನ ವೇದನೆಯನ್ನು ದೂರ ಮಾಡಿದ್ದರಿಂದ ವೈದ್ಯನಾಥ ಎನ್ನುವ ಹೆಸರು ಬಂತು. ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ದರ್ಶನದಿಂದ ಸಂಸಾರಿಕ ಕಷ್ಟ-ಕೋಟೆಲೆಗಳೆಲ್ಲಾ ತಪ್ಪಿ, ಮಾನಸಿಕ ಶಾಂತಿ ದೊರೆಯುವುದೆಂದು ಭಕ್ತರ ನಂಬಿಕೆ.