ವೈಕುಂಠ ಏಕಾದಶಿ ಆಚರಣೆ ಮಹತ್ವ ಹಾಗೂ ಉಪವಾಸದಿಂದಾಗುವ ಲಾಭಗಳು ಇಲ್ಲಿವೆ ನೋಡಿ…!

0
1013

ವೈಕುಂಠ ಏಕಾದಶಿ ಏಕಾದಶಿಗಳಲ್ಲಿ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ. ಹಾಗಾಗಿ ಎಲ್ಲ ವಿಷ್ಣು ದೇವಾಲಯಗಳಲ್ಲಿ ‘ವೈಕುಂಠ ದ್ವಾರ’ಗಳನ್ನು ನಿರ್ಮಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ವೈಕುಂಠ ಏಕಾದಶಿ ಅಚರಣೆ ಕುರಿತು ಕೆಲವು ಸಂಗತಿಗಳು ಇಲ್ಲಿವೆ.

ವೈಕುಂಠ ಏಕಾದಶಿ ಆಚರಣೆ ಮಹತ್ವ:

ಎಲ್ಲ ತಿಥಿಗಳಿಗೂ ಒಬ್ಬೊಬ್ಬ ದೇವತೆಗಳಿದ್ದಾರೆ. ಹಾಗೆ ವೈಕುಂಠ ಏಕಾದಶಿಗೆ ಹರಿ ಆದ್ದರಿಂದಲೇ ಅದಕ್ಕೆ ಹರಿದಿನವೆಂದು ಹೆಸರು. ಆದ್ದರಿಂದ ಏಕಾದಶಿಗೆ ಎಲ್ಲಿಲ್ಲದ ಮಹತ್ವ. ವೈಕುಂಠ ಏಕಾದಶಿಯಂದು ಶ್ರೀನಿವಾಸ ದೇವರ ಸ್ಮರಣೆಮಾಡಬೇಕು. ಸ್ವರ್ಗದ ಬಾಗಿಲು ಇಂದು ತೆರೆದಿರುತ್ತದೆ ಎಂದು ನಂಬುವ ಎಲ್ಲ ಭಕ್ತಾದಿಗಳು ಒಂದು ಬಾರಿಯಾದರೂ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ಪ್ರಸಾದ ತಿಂದು ಬರಬೇಕು.

ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಬೇಕು:

ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ ಮಾಡಬೇಕು. ಶ್ರೀರಂಗಂ, ತಿರುಮಲ, ಶ್ರೀಮೂಷ್ಣಂ, ತೋತಾದ್ರಿ, ಇವು ಸ್ವಯಂ ವ್ಯಕ್ತ ಕ್ಷೇತ್ರಗಳು. ಇಲ್ಲಿ ವಿಷ್ಣು ದರ್ಶನ ಮಾಡಿದರೆ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ.

ವೈಕುಂಠ ಏಕಾದಶಿ ಆಚರಣೆ:

ಅಂದು ದೈಹಿಕವಾಗಿ ಸದೃಢವಾಗಿರುವವರು ನಿಟ್ಟುಪವಾಸ ಮಾಡಬೇಕು. ಅಶಕ್ತರು ಉಪ್ಪು, ಹುಳಿ, ಖಾರ ಇರುವ ತಿಂಡಿ ಸೇವಿಸದೆ ಬಾಳೆಹಣ್ಣು, ಹಾಲು, ಸಜ್ಜಿಗೆ ಸ್ವೀಕರಿಸಬಹುದು. ಇನ್ನುಳಿದ ತಿಂಡಿಗಳ ಬಗ್ಗೆ ಶಾಸ್ತ್ರ ಸಮ್ಮತವಾದ ಅಭಿಪ್ರಾಯಗಳಿಲ್ಲ.

ವೈಕುಂಠ ಏಕದಶಿಯಂದು ಉತ್ತರ ದ್ವಾರದ ಮೂಲಕವೇ ಭಗವಂತನನ್ನು ದರ್ಶಿಸಬೇಕು:

ದಕ್ಷಿಣ ದಿಕ್ಕಿಗೆ ಕರ್ಮ ಸ್ಥಾನ ಎನ್ನುವ ಮಾತಿದೆ. ‘ತಮಸೋಮಾ ಜ್ಯೋತಿರ್ಗಮಯ’ ಎನ್ನುವ ಉಪನಿಷತ್ ವಾಕ್ಯದಂತೆ ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಮಯವೇ ಉತ್ತರಾಯಣ.

ಮುಕ್ಕೋಟಿ ದ್ವಾದಶಿ ಆಚರಣೆ:

ಏಕಾದಶಿಯಂದು ಸೂರ್ಯೋದಕ್ಕೆ ಪಾರಣೆ (ಊಟ) ಮುಗಿಸಿರಬೇಕು. ಅಂದರೆ ಬೆಳಗ್ಗೆ ಎಂಟು ಗಂಟೆಯೊಳಗೆ ಊಟ ಮಾಡಿ ಮುಗಿಸಿರಬೇಕು. ಆಗ ಪುಣ್ಯ ಪ್ರಾಪ್ತಿ ಆಗುತ್ತದೆ. ವೈಕುಂಠ ಏಕಾದಶಿ ಉಪವಾಸ ಮಾಡುವವರು ಊಟವನ್ನು ತ್ಯಜಿಸಿ ಹಾಲು ಹಣ್ಣುಗಳನ್ನೇ ಪ್ರಸಾದವೆಂದು ಸ್ವೀಕರಿಸುತ್ತಾರೆ. ಈ ರೀತಿ ಆಚರಣೆಯಿಂದ ಮೋಕ್ಷ ಸಿಗುತ್ತದೆ. ಜತೆಗೆ ಅಂದು ದೇವರ ಸ್ಮರಣೆ ಎಷ್ಟು ಹೆಚ್ಚು ಮಾಡಿದರೆ ಅಷ್ಟು ಶುಭ ಫಲ. ಇಂದು ಒಬ್ಬ ಬ್ರಾಹ್ಮಣ ದಂಪತಿಗೆ ಊಟ ಹಾಕಿದರೂ ಒಂದು ಲಕ್ಷ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿದ ಫಲ ದೊರಕುತ್ತದೆ. ಧನುರ್ಮಾಸದಲ್ಲಿ ಹುಗ್ಗಿಯನ್ನು ದೇವರಿಗೆ ನೈವೇದ್ಯ ಮಾಡುವುದು ಬಹಳ ಶ್ರೇಷ್ಠ. ಅದೇ ರೀತಿ ಗೋದಾನ ಮಾಡಬೇಕು ಅಂದುಕೊಂಡವರಿಗೆ ಇದು ಒಳ್ಳೆ ಕಾಲ.

ವೈಕುಂಠ ಏಕದಶಿಯಂದು ಯಾರು ಯಾರು ಉಪವಾಸ ಮಾಡಬೇಕು:

ಐದು ವರ್ಷಕ್ಕೊಳಪಟ್ಟವರೂ, 80 ವರ್ಷ ಮೇಲ್ಪಟ್ಟವರೂ, ರೋಗಿಗಳಾದವರೂ, ಗರ್ಭಿಣಿ ಹಾಗೂ ಬಾಣಂತಿಯರನ್ನು ಬಿಟ್ಟು ಪ್ರತಿಯೊಬ್ಬರೂ ಈ ದಿನದ ಮಟ್ಟಿಗೆ ನಿಟ್ಟುಪವಾಸವನ್ನು ತಪ್ಪದೇ ಆಚರಿಸಬೇಕು. ಏಕಾದಶಿ ಮೂರನೇ ದಿನವಾದ ದ್ವಾದಶಿಯಂದು ಪ್ರಾತಃಕಾಲ ಸೂರ್ಯೋದ ನಂತರ ಊಟವನ್ನು ಮಾಡಿ ಪಾರಾಯಣ ಮಾಡಬೇಕು.

ವೈಕುಂಠ ಏಕದಶಿ ಆಚರಣೆಯಿಂದಾಗುವ ಉಪಯೋಗಗಳು:

ಇದರಿಂದ ಮನೆಯಲ್ಲಿನ ಅಶಾಂತಿ ನಿವಾರಣೆ ಆಗುತ್ತದೆ. ಸಂಪತ್ತು ಹಾಗೂ ಸಂತಾನ ಅಪೇಕ್ಷಿತರು ತಮ್ಮ ಮನಸಿನ ಬಯಕೆ ನೆರವೇರುತ್ತೆ. ಇದರ ಜೊತೆಗೆ ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ ಆಗುವುದು. ಮತ್ತು ಆಯುಸ್ಸು, ಆರೋಗ್ಯ ಮತ್ತು ಮನಸ್ಸಿನ ದೃಢತೆ ವೃದ್ಧಿಯಾಗುತ್ತದೆ.