ಮಹಾನ್ ದೈವ ಭಕ್ತ ಬೇಲೂರು ವೈಕುಂಠದಾಸರು!!

0
1037

ಬೇಲೂರು ಜೊತೆಗೆ ಥಳುಕು ಹಾಕಿಕೊಂಡಿರುವ ಮತ್ತೊಂದು ಊರು ಹಳೇಬೀಡು. ಕರ್ನಾಟಕ ರಾಜ್ಯದ ಈ ಎರಡು ನಗರಗಳು ತಮ್ಮಲ್ಲಿ ಅಡಗಿರುವ ಅದ್ಭುತ ಶಿಲ್ಪಕಲಾ ಸೌಂದರ್ಯದಿಂದ ವಿಶ್ವವಿಖ್ಯಾತ ಪಡೆದಿವೆ. ಸುಮಾರು ಐನೂರು ವರ್ಷಗಳ ಹಿಂದೆ ಇದೇ ಬೇಲೂರಿನಲ್ಲಿ ಕೇಶವ ಅಯ್ಯಂಗಾರರ ಜನನವಾಯಿತು. ವಯೋಮಾನಕ್ಕನುಸಾರ ಚೌಲ, ಉಪನಯನಾದಿ ಸಂಸ್ಕಾರಗಳು ನೆರವೇರಿದವು. ವೇದಾಧ್ಯಯನ ಮೊದಲಾಯಿತು. ಸ್ವಯಂ ಅತ್ಯಂತ ತೀಕ್ಷ್ಣಮತಿಯಾದ ಈ ಬಾಲಕ ನೋಡುಗರ ದೃಷ್ಟಿಯಲ್ಲಿ ಜಡಭರತ. ಬೆಳಗಿನ ಜಾವ ವಿಷ್ಣು ಸಮುದ್ರದಲ್ಲಿ ಮಿಂದು ದೇವರ ದರ್ಶನ ಪಡೆದು ಧ್ಯಾನಾಸಕ್ತನಾಗುತ್ತಿದ್ದ ನಾನಾ ಬಗೆಯ ಪುಷ್ಪಗಳನ್ನರಸಿ ತಂದು ಕಂಕಣ, ಕಿರೀಟ, ಕೊರಳಹಾರಗಳನ್ನು ತನ್ನ ಕೈಯಾರೆ ಕಟ್ಟಿ ದೇವರಿಗೆ ಸಮರ್ಪಿಸಿ ಆನಂದಪಡುವುದು ಇವನ ದಿನಚರಿಯಾಗಿತ್ತು. ದ್ರಾವಿಡ ಪ್ರಬಂಧದ ಭಕ್ತಿ ರಚನೆಗಳಾದ ಪಾಶರಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ದೇವಾಲಯದ ಪಾಠಶಾಲೆಯಲ್ಲೇ ಈತನ ಅಧ್ಯಯನ. ಸ್ವಾಮಿಯ ನೈವೇದ್ಯದ ನಂತರ ಸಿಗುವ ಪ್ರಸಾದ ಭುಂಜಿಸಿ ಅಲ್ಲಿಯೇ ಇರುತ್ತಿದ್ದ ಇವನಿಗೆ ತಂದೆ-ತಾಯಿಗಳ ನೆನಪೇ ಆಗುತ್ತಿರಲಿಲ್ಲ.

ಮಗನಿಗೆ ಮದುವೆ ಮಾಡಿದರೆ ಸಂಸಾರದಲ್ಲಿ ಆಸೆ ಹುಟ್ಟಬಹುದೆಂದು ಆಲೋಚಿಸಿದ ತಂದೆ-ತಾಯಿಗಳು ಸೌಮ್ಯ ನಾಯಕಿ ಎಂಬ ಸುಂದರ ಕನ್ಯೆಯೊಂದಿಗೆ ವಿವಾಹ ನೆರವೇರಿ ಸಿದರು. ಸುಂದರ ಪತ್ನಿಯ ಆಗಮನದಿಂದ ಕೇಶವನ ಬದುಕಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ದೇವರನ್ನು ಕಣ್ಣಾರೆ ಕಾಣಬೇಕು ಆತನೊಂದಿಗೆ ಮಾತಾಡಬೇಕೆಂಬ ಹಂಬಲ ದಿನದಿನಕ್ಕೆ ಹೆಚ್ಚಾಗತೊಡಗಿತು. ದೇವರನ್ನು ಕಾಣುವ ತನಕ ಬ್ರಹ್ಮಚರ್ಯ ಪಾಲಿಸುವುದಾಗಿ ಪಣತೊಟ್ಟ. ಬದುಕಿನಲ್ಲಿ ಯಾವತ್ತೂ ಬಿಸಿ ನೀರಿನ ಸ್ನಾನ ಮಾಡಲಿಲ್ಲ. ತಾಂಬೂಲ ಮೆಲ್ಲಲಿಲ್ಲ. ದರ್ಪಣದಲ್ಲಿ ತನ್ನ ಪ್ರತಿಬಿಂಬ ನೋಡಿಕೊಳ್ಳಲಿಲ್ಲ.

ತಂದೆ-ತಾಯಿ, ಅತ್ತೆ-ಮಾವಂದಿರ ಚಿಂತೆ ನೆರೆಹೊರೆಯವರ ಹೀಯಾಳಿಕೆಗೆ ಸೌಮ್ಯ ನಾಯಕಿ ನೊಂದುಕೊಂಡಳು. ಪತಿಯ ಸಂಕಲ್ಪದ ಅರಿವು ಅವಳಿಗೂ ಇತ್ತು. ಅದರಂತೆ ತಾನೂ ಬ್ರಹ್ಮಚರ್ಯ ಪಾಲಿಸುವ ಭರವಸೆ ಇತ್ತು. ತನಗೂ ಚನ್ನಕೇಶವನ ದರ್ಶನ ಮಾಡಿಸಬೇಕೆಂದು ಗಂಡನಲ್ಲಿ ಪ್ರಾರ್ಥಿಸಿಕೊಂಡಳು. ಮಡದಿಯ ಮಾತಿನಿಂದ ಅಯ್ಯಂಗಾರನಿಗೆ ಏನೋ ಹೊಳೆದಂತಾಯಿತು. ಆಕೆಯನ್ನುದ್ದೇಶಿಸಿ “ಹೌದಲ್ಲವೇ ಸ್ತ್ರೀಯರ ಮೊರೆಗೆ ಕೇಶವನ ಮನ ಕರಗುವುದಂತೆ. ಹಿಂದೆ ದ್ರೌಪದಿಯ ಮೊರೆ ಕೇಳಿ ಆಕೆಗೆ ಅಕ್ಷಯಾಂಬರವಿತ್ತು ಮಾನಕಾಯ್ದವನಲ್ಲವೇ, ದೂರ್ವಾಸರ ಕೋಪಾಗ್ನಿಯಿಂದ ಪಾಂಡವರನ್ನು ರಕ್ಷಿಸಿದವನಲ್ಲವೇ ಹೌದು ನೀನಿಂದು ನನ್ನ ಕಣ್ಣು ತೆರೆಸಿದೆ. ನನ್ನಂತೆ ನೀನೂ ಕೇಶವನ ದರ್ಶನಕ್ಕಾಗಿ ಪ್ರಾರ್ಥಿಸು ಆ ಭಗವಂತ ಇಬ್ಬರಿಗೂ ಒಲಿಯಲಿ.’’ ಮದುವೆಯಾದ ಎಷ್ಟೋ ವರ್ಷಗಳ ನಂತರ ತನ್ನೊಂದಿಗೆ ಮಾತಾಡಿದ ಪತಿಯನ್ನು ನೆನೆದು ಸುಖಿಸಿದ ಸೌಮ್ಯ ನಾಯಕಿ ಮುಂದಿನ ದಿನಗಳಲ್ಲಿ ಯಾವ ಆತಂಕವಿಲ್ಲದೆ ಪತಿಯೊಂದಿಗೆ ಚನ್ನಕೇಶವನ ಸೇವೆಗೆ ಕಂಕಣಬದ್ಧಳಾದಳು.
ಕೆಲಕಾಲ ಉರುಳಿತು.

ದಂಪತಿಗಳ ಏಕ ನಿಷ್ಠೆಗೆ ಪ್ರಸನ್ನನಾದ ಕೇಶವ ಪ್ರತ್ಯಕ್ಷ ದರ್ಶನವಿತ್ತು ನಿಮಗೇನು ಬೇಕೆಂದು ದಂಪತಿಗಳ ಮೈದಡವಿದಾಗಿ “ದೇವಾ ನಮ್ಮ ಸೇವೆಗೆ ಒಲಿದು ಬಂದಿರುವ ನಿನ್ನ ಹೊರತು ನಮಗೇನೂ ಬೇಡ. ನಮ್ಮ ಸ್ವಾಮಿಯಾಗಿ ಸಖನಾಗಿ ನಮ್ಮ ಉಸಿರಾಗಿ ಸದಾ ಕಾಲ ನಮ್ಮೊಂದಿಗಿರು’’ ಚನ್ನಕೇಶವನ ದರ್ಶನದಿಂದ ದಂಪತಿಗಳು ಧನ್ಯರಾದರು. ಅಂದಿನಿಂದ `ವೈಕುಂಠ ಕೇಶವ’ ಎಂಬ ಅಂಕಿತದಿಂದ ದೇವರ ನಾಮಗಳನ್ನು ರಚಿಸತೊಡಗಿದ ಕೇಶವ ಅಯ್ಯಂಗಾರರು ವೈಕುಂಠ ದಾಸರೆಂದೇ ಪ್ರಸಿದ್ಧರಾದರು. ದಾಸರನ್ನು ಜಡಭರತ, ಹುಚ್ಚನೆಂದು ಹೀಯಾಳಿಸುತ್ತಿದ್ದ ಜನ ಅವರಿಗಾದ ದೈವಾನುಗ್ರಹ ಕಂಡು ಬೆರಗಾದರು. ದಾಸರು ನಡೆಸುತ್ತಿದ್ದ ಭಜನಾಗೋಷ್ಠಿಗಳಲ್ಲಿ ಎಲ್ಲಾ ಜನಾಂಗದವರು ಭಾಗವಹಿಸಿ ದಾಸರ ದಾಸಾನುದಾಸರಾದರು.
ವೈಕುಂಠದಾಸ ದಂಪತಿಗಳು ಚನ್ನಕೇಶವನಲ್ಲಿ ಎಷ್ಟೊಂದು ಭಕ್ತಿ ಇರಿಸಿದ್ದರೆಂದರೆ ದೇವರು ಅವರೆದುರಿನಲ್ಲಿ ಆಟ ಆಡಿ ತನ್ನ ಬಾಲಲೀಲೆಗಳನ್ನು ತೋರಿಸಿ ಅವರ ಬದುಕು ಸಾರ್ಥಕಗೊಳಿಸಿದ ಭಕ್ತ ಪರಾಧೀನನಲ್ಲವೇ ಭಗವಂತ! ವೈಕುಂಠ ದಾಸರು ಶ್ರೀರಂಗದಲ್ಲಿರುವ ಆದಿರಂಗನನ್ನು ದರ್ಶಿಸುವ ಅಪೇಕ್ಷೆಯಿಂದ ಕಾಲ್ನಡಿಗೆಯಿಂದ ಹೊರಟರು. 4-6 ಮೈಲಿ ಕ್ರಮಿಸಿರಲಿಕ್ಕಿಲ್ಲ. ಬಿರುಗಾಳಿಯೊಂದಿಗೆ ಜಡಿಮಳೆ ಕ್ರೂರ ಮೃಗಗಳ ದಾಳಿಯಿಂದ ಭಯಭೀತರಾದ ದಾಸರಿಗೆ ಬ್ರಾಹ್ಮಣ ರೂಪದಲ್ಲಿ ಎದುರಾದ ದೇವರು ನಾನಿರುವ ಬೇಲೂರು ಶ್ರೀರಂಗವಲ್ಲವೇ ಎಂದು ಕೇಳಿದಂತಾಯಿತು. ದಾಸರು ದೇವರಲ್ಲಿ ಕ್ಷಮೆಯಾಚಿಸಿ ಬೇಲೂರಿಗೆ ಹಿಂದಿರುಗಿ ಬಂದರು. ಜೀವಿತಾವಧಿಯಲ್ಲಿ ಅವರೆಂದೂ ಬೇಲೂರಿನ ಗಡಿ ದಾಟಲಿಲ್ಲ.
ವೈಕುಂಠ ದಾಸರಿಗೆ ವರದನೆಂಬ ಶಿಷ್ಯನಿದ್ದ. ಅನೇಕ ವೇಳೆ ಚನ್ನದೇಶವನು ವರದನಂತೆ ವೇಷತಾಳಿ ದಾಸರ ಸೇವೆ ಮಾಡುತ್ತಿದ್ದನಂತೆ. ಚನ್ನಕೇಶವನ ದೇಗುಲದಲ್ಲಿ ಪ್ರತಿನಿತ್ಯ ದಾಸರಿಲ್ಲದೆ ಮಹಾಮಂಗಳಾರತಿ ಎತ್ತುತ್ತಿರಲಿಲ್ಲ. ದಾಸರು ಸುಶ್ರಾವ್ಯವಾಗಿ ಹಾಡು ಹೇಳಿದ ನಂತರವೇ ನೆರೆದ ಜನ ಕದಲುತ್ತಿದ್ದರು. ದಾಸರು ಮನೆಗೆ ಹೊರಟರೆಂದರೆ ದೀವಟಿಗೆಯವನೊಬ್ಬ ಪಂಜಿನ ಬೆಳಕಲ್ಲಿ ಅವರನ್ನು ಮನೆ ತಲುಪಿಸಬೇಕಿತ್ತು. ದಾಸರಿಗೆ ಸಲ್ಲುತ್ತಿದ್ದ ಗೌರವ ಇದಾಗಿತ್ತು.
ಸುಮಾರು ಎಪ್ಪತ್ತು ವರ್ಷಗಳ ಕಾಲ ದಾಸರು ಜೀವಿಸಿದ್ದರು. ವೃದ್ಧಾಪ್ಯದಲ್ಲಿ ಪತ್ನಿ ವಿಯೋಗವಾಯಿತು. ಅನೇಕಬಾರಿ ವರದನ ರೂಪ ಧರಿಸಿದ ಕೇಶವನೆ ದಾಸರ ಆರೈಕೆ ಮಾಡುತ್ತಿದ್ದ. ಬೇಕಾದ-ಬೇಡವಾದ ಕೆಲಸಗಳನ್ನು ಮಾಡಿ ದಾಸರಿಗೆ ಮುಜುಗರಗೊಳಿಸುತ್ತಿದ್ದ. ವೃದ್ಧಾಪ್ಯದಿಂದ ದಾಸರಿಗೆ ತಮ್ಮ ಬದುಕಿನ ಕೊನೆ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗಲಾಗುತ್ತಿರಲಿಲ್ಲ. ದೇವರಿಗೆ ಮಹಾಮಂಗಳಾರತಿಯ ಸೂಚಕವಾಗಿ ಗಂಟೆ-ಜಾಗಟೆಗಳ ಧ್ವನಿ ಕೇಳಿದ ನಂತರವೇ ಪ್ರಸಾದ ಸ್ವೀಕರಿಸುತ್ತಿದ್ದರು. ಅದೊಂದು ದಿನ ಚನ್ನಕೇಶವನಿಗೆ ನೈವೇದ್ಯ ಆಯಿತು. ಮಹಾಮಂಗಳಾರತಿ ಮುಗಿಯುತ್ತಿದ್ದಂತೆ ಅವನ ಮೈ ಮೇಲಿದ್ದ ಆಭರಣಗಳೆಲ್ಲ ಕಳಚಿಬಿದ್ದವು. ಹೀಗೇಕಾಯಿತೆಂದು ಅರ್ಚಕರು ಆಲೋಚಿಸುವಷ್ಟರಲ್ಲಿ ವೈಕುಂಠದಾಸರು ಚನ್ನಕೇಶವನ ಪಾದ ಸೇರಿದರೆಂಬ ವರ್ತಮಾನ ಬೇಲೂರಿನ ತುಂಬಾ ಹಬ್ಬಿತ್ತು. ಇದೇ ದಾಸರು ಪಂಗನಾಮದ ತಿಮ್ಮಣ್ಣ ದಾಸರು, ಪರಮ ವೈರಾಗ್ಯಶಾಲಿ ತಿಮ್ಮಣ್ಣ ದಾಸರು ಎಂದು ಮರುಹುಟ್ಟು ಪಡೆದರೆಂದು ಭಾವಿಕರು ನಂಬುತ್ತಾರೆ.