ನಾಳೆಯ ವೈಕುಂಠ ಏಕಾದಶಿಯಂದು ಈ ಕೆಲಸಗಳನ್ನು ಮಾಡಿದರೆ ದೇವರ ಕೃಪೆಗೆ ಪಾತ್ರರಾಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ ನಮ್ಮ ಪುರಾಣಗಳು…

0
2696

ನಾಳೆ ವೈಕುಂಠ ಏಕಾದಶಿ, ಏಕಾದಶಿಗಳಲ್ಲಿ ವಿಶೇಷವಾದ ದಿನ. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಹಿಂದೂ ಪಂಚಾಂಗದ ೧೨ ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿಯಾಗಿ ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ಮಹಾವಿಷ್ಣು ಉತ್ತರ ದ್ವಾರದ ಮೂಲಕ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ನಂಬಿಕೆ.

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತದೆ. ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ ಎಂದು ಭಕ್ತರು ನಂಬುತ್ತಾರೆ. ಅಷ್ಟೇ ಅಲ್ಲದೆ ಇಂದು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಮಾಡಿದವರನ್ನು ಮಹಾವಿಷ್ಣು ಹರಸುತ್ತಾನೆ ಎಂಬುದು ನಂಬಿಕೆ. ಹಾಗಾಗಿ ಎಲ್ಲ ವಿಷ್ಣು ದೇವಾಲಯಗಳಲ್ಲಿ ‘ವೈಕುಂಠ ದ್ವಾರ’ಗಳನ್ನು ನಿರ್ಮಿಸಲಾಗುತ್ತದೆ.

ವೈಕುಂಠ ಏಕಾದಶಿಯ ಮಹತ್ವ

ಹಿಂದೆ ಗೋಕುಲವೆಂಬ ನಗರದಲ್ಲಿ ವೈಖಾನಸನೆಂಬ ಮಹಾ ರಾಜರ್ಷಿಯ ದಿವ್ಯದೃಷ್ಟಿಗೆ ತನ್ನ ತಂದೆ ಸತ್ತ ಬಳಿಕ ನರಕವಾಸ ಅನುಭವಿಸುತ್ತಿರುವುದು ಗೋಚರಿಸುತ್ತದೆ. ಖಿನ್ನನಾದ ರಾಜನು ರಾಜರ್ಷಿ ತನ್ನ ಪಂಡಿತರನ್ನು ಕರುಹಿಸಿ ತಂದೆಯ ಆತ್ಮಕ್ಕೆ ಮುಕ್ತಿ ಕೊಡಿಸುವ ಉಪಾಯವೇನಾದರೂ ಇದೆಯೇ ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಅವರು, ಯಜ್ಞ ದಾನಗಳಿಂದ ಮಾತ್ರ ಪರಿಹಾರ ಸಿಗುವುದಿಲ್ಲ. ಮಾರ್ಗಶಿರ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವರೆಂದು ತಿಳಿಸುತ್ತಾರೆ. ಪಂಡಿತರ ಮಾತಿನಂತೆ ಏಕಾದಶಿ ವ್ರತ ಆಚರಿಸಿದ ನಂತರ ಅವನ ತಂದೆಯ ದೇಹವು ನರಕದಿಂದ ಮುಕ್ತಿ ಪಡೆದು ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ವೈಕುಂಠ ಏಕಾದಶಿಯ ಪೂಜಾ ವಿಧಾನ

ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಭಗವಮತನ ಪೂಜೆಯಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯ. ಈ ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ, ನಾವು ಇಡೀ ವರ್ಷ ಏನೇ ಪಾಪಗಳನ್ನು ಮಾಡಿದ್ದರೂ ಆ ಎಲ್ಲಾ ಪಾಪಗಳನ್ನು ಪರಿಹಾರವಾಗಿ ಮೋಕ್ಷ ನಿಶ್ಚಿತ ಎಂದುಕೊಂಡಿರುತ್ತೇವೆ. ಶಾಸ್ತ್ರಗಳಲ್ಲಿ ಹೇಳಿದ ವಿಧಿ ನಿಯಮಗಳಿಗೆ ಅನುಸರಿಸಿ ಸತ್ಕರ್ಮಗಳನ್ನಾಚರಿಸಿ ಎಚ್ಚರಿಕೆಯಿಂದ ಪ್ರಯತ್ನಪೂರ್ವಕವಾಗಿ ಕೆಟ್ಟ ಕೆಲಸಗಳನ್ನು ಮಾಡದೆ ಈ ವೈಕುಂಠ ಏಕಾದಶಿ ಮಾಡಿದರೆ ಮಾತ್ರ ಭಗವಂತನ ಅನುಗ್ರಹವಾಗುವುದು ಎಂದರ್ಥ. ಈ ದಿನ ತುಳಿಸಿಯ ಅರ್ಚನೆಯಿಂದ ಪರಮಾತ್ಮನನ್ನು ವಿಶೇಷವಾಗಿ ಸಂತೋಷಗೊಳಿಸಬಹುದು.

ಇಂದ್ರಿಯಗಳಿಂದ ಮಾಡಿದ ಪಾಪ ಪರಿಹಾರವೇ ಉಪವಾಸದ ಮುಖ್ಯ ಉದ್ದೇಶ. ಅದರಲ್ಲೂ ಈ ವೈಕುಂಠ ಏಕಾದಶಿಯ ಉಪವಾಸ ಅತಿ ಮುಖ್ಯ. ಉಪವಾಸ ಕಾಲದಲ್ಲಿ ದೇಹದ ಅಂತರವಯವಗಳು ಶುಚೀಕರಣ ಕಾರ್ಯ ನಡೆದರೆ, ವ್ರತಗಳು ಮನಸ್ಸನ್ನು ಶುಚಿಗೊಳಿಸುತ್ತವೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಮಾಡುತ್ತಾರೆ. ರಾತ್ರಿಯಿಡೀ ಎಚ್ಚರವಿದ್ದು ದೇವರ ಧ್ಯಾನ ಮಾಡಬೇಕು.

ಉಪವಾಸ ಮಾಡೋದು ಎಷ್ಟು ಮುಖ್ಯನೋ ಅದನ್ನ ಶುರು ಮತ್ತು ಅಂತ್ಯ ಮಾಡೋದು ಅಷ್ಟೇ ಮುಖ್ಯ. ಏಕಾದಶಿಯ ದಿನ ಉಪವಾಸವಿದ್ದು, ಏಕಾದಶಿ ಮಾರನೆಯ ದಿನವಾದ ದ್ವಾದಶಿಯಂದು ಪ್ರಾತಃಕಾಲ ಸೂರ್ಯೋದ ನಂತರ ಊಟವನ್ನು ಮಾಡಿ ಪಾರಾಯಣ ಮಾಡಬೇಕು.