ಚೆನ್ನೈ ಗೆ ನೆಗಡಿ ಆದರೆ ಬೆಂಗಳೂರಿಗೆ ಸೀನು

0
699

ವಾರ್ದಾ ಚಂಡಮಾರುತ ಹೊಡೆತಕ್ಕೆ ಸಿಲುಕಿರುವ ತಮಿಳುನಾಡು, ಆಂಧ್ರಪ್ರದೇಶ ನಲುಗಿ ಹೋಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ವಾರ್ದಾ ಚಂಡಮಾರುತದ ಪರಿಣಾಮ ನೆರೆಯ ಬೆಂಗಳೂರಿಗೂ ತಟ್ಟಿದೆ. ಚೆನ್ನೈನ ರಸ್ತೆಯಲ್ಲಿ ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್, ಕುಡಿಯಲು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ಸುರಿದ ಜಡಿ ಮಳೆಗೆ ತತ್ತರಿಸಿ ಹೋಗಿದೆ. ರಸ್ತೆ ತುಂಬಾ ನೀರು, ಟ್ರಾಫಿಕ್ ಜಾಮ್ ಬಿಸಿ ಜನರಿಗೆ ತಟ್ಟಿದೆ.

ಬೆಂಗಳೂರು ನಗರದ ಹಲವೆಡೆ ಮರಗಳು ಧರೆಗುರುಳಿವೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಉದ್ಯಾನನಗರಿ ಥಂಡಾವಾಗಿದೆ. ಬಿಬಿಎಂಪಿ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 24 ಗಂಟೆಯೂ ಕಾರ್ಯಾಚರಿಸಲು ಬಿಬಿಎಂಪಿ ಸಿಬ್ಬಂದಿಗಳು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

ಸೋಮವಾರ ಮಧ್ಯಾಹ್ನ 2.30ರಿಂದ 4.30ರೊಳಗೆ ಚೆನ್ನೈ ಸಮೀಪ ‘ವಾರ್ದಾ’ ಭೂಪ್ರದೇಶವನ್ನು ಪ್ರವೇಶಿಸಿತು. ಆರಂಭದಲ್ಲಿ ಗಾಳಿಯ ವೇಗ ತಾಸಿಗೆ 110ರಿಂದ 120 ಕಿ.ಮೀಗಳಷ್ಟಿತ್ತು. ನಂತರ ವಾರ್ದಾ ವೇಗ 60-70 ಕಿ.ಮೀ.ಗೆ ಇಳಿದಿದೆ.

ನಿರೀಕ್ಷೆಯಂತೆಯೇ ಸಂಜೆ 7-8 ಗಂಟೆಯ ಹೊತ್ತಿಗೆ ‘ವಾರ್ದಾ’ ಭೂ ಪ್ರದೇಶವನ್ನು ಹಾದು ಹೋಗಿದೆ. ವಾರ್ದಾ ಪರಿಣಾಮ ತೀವ್ರವಾಗಿದ್ದ ಚೆನ್ನೈ, ತಿರುವಳ್ಳೂರು ಮತ್ತು ಕಾಂಚೀಪುರ ಜಿಲ್ಲೆಗಳ ಜನರಿಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿತ್ತು.

ಚೆನ್ನೈನಗರದಲ್ಲಿ 4, ಕಾಂಚಿಪುರಂ, ತಿರುವಳ್ಳೂರ್ ನಲ್ಲಿ ತಲಾ ಇಬ್ಬರು ಹಾಗೂ ವಿಳ್ಳುಪುರಂ ಮತ್ತು ನಾಗಪಟ್ಟಣಂನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಳಿಸರು ತಿಳಿಸಿದ್ದಾರೆ.

ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳು ವಾರ್ದಾದ ಭಾರೀ ಬಿರುಗಾಳಿ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ. ಮರಗಳನ್ನು, ವಿದ್ಯುತ್ ಕಂಬಗಳನ್ನು ಬದಿಗೆ ಸರಿಸಲು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ವಾರ್ದಾ ಆರ್ಭಟಕ್ಕೆ ನಲುಗಿರುವ ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಈ ‘ವಾರ್ದಾ’ ಚೆನ್ನೈಗೆ ನೆಗಡಿ ತರಿಸುದ್ದಿದರು ಸೀನುತಿರುವುದು ಮಾತ್ರ ಬೆಂಗಳೂರು .. ಎಲ್ಲ ಬೆಂಗಳೂರಿಗರೇ ಮನೆ ಯಲ್ಲಿ ಬೆಚ್ಚಗೆ ಇರಿ , ಹೊರಗೆ ಹೋಗಬೇಕು ಅಂದರೆ ಬೆಚ್ಚಗಿರುವ ಬಟ್ಟೆ ಧರಿಸಿ ಹೊರಗೆ ಹೋಗಿ