ಆರೋಗ್ಯದ ಕಣಜ ವಸಾಬಿ ಸಸ್ಯ!!!

0
1009

ಆರೋಗ್ಯವರ್ಧಕ ವಸಾಬಿ

ವಸಾಬಿ ಸಸ್ಯ (ವಸಾಬಿಯ ಜಪೋನಿಕಾ, ವಸಬಿಯಾ, ಜಪಾನಿಕ)ವನ್ನು ಜಪಾನೀಸ್ ಹಾರ್ಸ್ ರ್ಯಾಡಿಷ್, ನಮಿದಾ ಮತ್ತು ಬರ್ಗ್ ಸ್ಟಾಕ್ ರೋಸ್ ಎಂದೂ ಕರೆಯುತ್ತಾರೆ. ಈ ಸಸ್ಯವು ಬ್ರಾಸ್ಸಿಕೇಷಿಯಾ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಈ ಕುಟುಂಬದ ಚಿರಪರಿಚಿತ ಇತರೆ ಸಸ್ಯಗಳೆಂದರೆ ಕೋಸು, ಮೆಣಸು ಇತ್ಯಾದಿ. ಇವುಗಳನ್ನು ಕ್ರೂಸಿಫತರ್ಸ್ ಎಂದೂ ಕರೆಯಲಾಗುತ್ತದೆ.

Image result for vasabi
ಬಹುಪಯೋಗಿ:
ವಸಾಬಿಯ ಪ್ರತಿಯೊಂದು ಭಾಗವೂ ಆರೋಗ್ಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ವಸಾಬಿಯ ಎಲೆ ಹಾಗೂ ಕಾಂಡದ ಭಾಗವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣ ಹೊಂದಿರುವುದರಿಂದ ಉಸಿರಾಟದ ತೊಂದರೆಗಳು, ಕೆಮ್ಮು, ನೆಗಡಿ, ಸೈನಸ್‍ನ ಮೇಲಾಗುವ ಒತ್ತಡ ನಿವಾರಿಸುವ ಶಕ್ತಿ ಹೊಂದಿದೆ.
ವಸಾಬಿಯನ್ನು ಅತಿಸಾರ ಬೇಧಿಗೆ ಔಷಧಿಯಾಗಿ ಬಳಸುವುದರಿಂದ ಅದು ಹಸಿವನ್ನು ಪ್ರಚೋದಿಸಿ ದೇಹದಲ್ಲಿರುವ ವಿಷಕಾರಿ ಆಂಶಗಳನ್ನು ಹೊರಹಾಕುತ್ತದೆ. ವಸಾಬಿಯು ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್ ಆಗಿ ವರ್ತಿಸುವುದಲ್ಲದೇ ಜೀರ್ಣಾಂಗವ್ಯೂಹದ ತೊಂದರೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.

Image result for vasabi
ವಸಾಬಿಯ ಶಕ್ತಿಶಾಲಿ ಪರಿಮಳದಿಂದ ಸೈನಸ್ ತೊಂದರೆಗಳನ್ನು ಸರಿಪಡಿಸಿ ಕೆಲವೇ ಸೆಕೆಂಡ್‍ಗಳಲ್ಲಿ ಮೂಗಿನ ಹೊರಳೆಗಳನ್ನು ಸ್ವಚ್ಛಗೊಳಿಸಿ ವ್ಯಕ್ತಿಯನ್ನು ಸಹಜವಾಗಿ ಉಸಿರಾಡುವಂತೆ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ವಸಾಬಿಯನ್ನು ಉಚ್ಛ್ವಾಸ ಮಾಡಿದ್ದೇ ಆದರೆ ಮೂಗಿನಲ್ಲಿ ನವೆ, ಉರಿ ಉಂಟಾಗುತ್ತದೆ.

ಇತ್ತೀಚೆಗಷ್ಟೇ ಕಂಡುಕೊಂಡ ಅಂಶವೆಂದರೆ ವಸಾಬಿಯಲ್ಲಿರುವ ಕೆಲವು ರಾಸಾಯನಿಕ ವಸ್ತುಗಳಿಂದಾಗಿ ಕೆಲವು ರೋಗಗಳಲ್ಲಿ ಕಂಡುಬರುವ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಬಹುದಾಗಿದೆ. ಅಲ್ಲದೆ ಜಠರದಲ್ಲಿ ಬೆಳೆಯಬಹುದಾದ ಕ್ಯಾನ್ಸರ್ ಕೋಶಗಳನ್ನು ತಡೆಗಟ್ಟುವ ಸಾಮರ್ಥ್ಯವಿದೆ ಎಂದೂ ಕಂಡುಕೊಳ್ಳಲಾಗಿದೆ.

ವಸಾಬಿಯನ್ನು ನೂಡಲ್ಸ್, ಸೂಪ್, ಮೀನು ಮತ್ತು ಮಾಂಸದ ಅಡುಗೆಗಳಲ್ಲಿ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ. ಇದು ಆಹಾರಕ್ಕೆ ಹೆಚ್ಚಿನ ರುಚಿ ಹಾಗೂ ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ. ಪ್ರಯಾಣದ ಸಮಯದಲ್ಲಿ ಬಳಸುವ ಚಿಕ್ಕಗಾತ್ರದ ಟೂಥ್ ಪೇಸ್ಟ್‍ಗಳಲ್ಲಿ ವಸಾಬಿಯನ್ನು ಬಳಸುತ್ತಿರುವುದು ಕಂಡುಬಂದಿದೆ.
ವಸಾಬಿಯಲ್ಲಿ ಏನಿದೆ?
ವಸಾಬಿಯಲ್ಲಿರುವ ಅಲೈಲ್ ಐಸೋಥಿಯೋ ಸೈಯನೇಟ್ ಕಾರಣಗಳಿಂದಾಗಿ ಈ ಸಸ್ಯಕ್ಕೆ ಅಷ್ಟೊಂದು ಪರಿಮಳ. ವಿಭಿನ್ನವಾದ ರುಚಿಯು ಇದಕ್ಕೆ ಒದಗಿದ್ದು ತನ್ನಲ್ಲಿನ ಇತರೆ ಐಸೋಥಿಯೋ ಸೈಯನೇಟ್ ಸಂಯುಕ್ತಗಳಿಂದಾಗಿ ಈ ಸಂಯುಕ್ತಗಳು ಜೀವಕೋಶಗಳ ಮಧ್ಯೆ ನಡೆಯುವ ರಾಸಾಯನಿಕ ಕ್ರಿಯೆಗಳಿಂದಾಗಿ ಉತ್ಪತ್ತಿಯಾಗುತ್ತವೆ. ಸಸ್ಯದ ಕಾಂಡದಲ್ಲಿ ಈ ಕ್ರಿಯೆಗಳು ನಡೆಯುತ್ತವೆ.
ವಸಾಬಿಯು ಜಪಾನಿನ ಪರಿಸರದಲ್ಲಿ ನಿಸರ್ಗದತ್ತವಾಗಿ ನೀರಿನ ತಾಣಗಳಲ್ಲಿ ಬೆಳೆಯುತ್ತದೆ. ಈ ಸಸ್ಯವು 30 ಸೆಂ.ಮೀ. ಎತ್ತರದವರೆಗೂ ಬೆಳೆಯುತ್ತದೆ. ಕಡು ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ನೋಡಲು ಕಿಡ್ನಿ ಆಕಾರದಲ್ಲಿ ಕಾಣಿಸುತ್ತದೆ. ಇದರ ಎಲೆಗಳು 15 ಸೆಂ.ಮೀ. ಉದ್ದ ಹಾಗೂ 15 ಸೆಂ.ಮೀ. ಅಗಲ ಬೆಳೆಯುತ್ತವೆ. ಚಿಕ್ಕ ಚಿಕ್ಕ ಬೀಜಗಳು ವಸಾಬಿ ಸಸ್ಯದ ಮೇಲೆ ಬಿಳಿ ಹೂಗಳನ್ನು ಬಿಡುವುದರ ಮೂಲಕ ಬೆಳೆಯುತ್ತವೆ. ಹೂಗಳು ಸಸ್ಯದ ಕಾಂಡಕ್ಕೆ ಅಂಟಿಕೊಂಡಿರುತ್ತವೆ.
ತುಂಬಾ ಅಪರೂಪದ ಸಸ್ಯವಾಗಿರುವ ವಸಾಬಿಯನ್ನು ಜಪಾನಿನ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ. ನಿಸರ್ಗದತ್ತವಾಗಿ ಬೆಳೆದ ವಸಾಬಿ ಸಸ್ಯಕ್ಕೆ ವಿಶ್ವ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯಿದೆ. ಇದನ್ನೇ ವ್ಯಾಪಾರೀಕರಣದ ದೃಷ್ಟಿಯಿಂದ ಕೃತಕವಾಗಿ ಬೆಳೆಯಲು ಬುದ್ಧಿವಂತರಾದ ಜಪಾನಿಯರು ತೊಡಗಿದ್ದಾರೆ. ವಸಾಬಿಯು ಅಮೆರಿಕ ಸಂಯುಕ್ತ ಸಂಸ್ಥಾನ ಅಥವಾ ಕೆನಡಾದ ಭಾಗಗಳಲ್ಲಿ ಅಪರೂಪಕ್ಕೆ ಲಭ್ಯ. ಉತ್ತರ ಕರೋಲಿನಾ ಹಾಗೂ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದವರು ಮಾತ್ರ ಕೃತಕವಾಗಿ ವಸಾಬಿ ಬೆಳೆಯಲು ಸಹಜ ವಾತಾವರಣವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆಯಾಗಿ ಬಹುಪಯೋಗಿಯಾಗಿರುವ ವಸಾಬಿಯ ಬಳಕೆಯನ್ನು ಮಾಡುತ್ತಾ ಆರೋಗ್ಯ ಹೆಚ್ಚಿಸಿಕೊಳ್ಳಬಹುದಾಗಿದೆ. ಟಿಶ್ಶೂಕಲ್ಚರ್ ಮೂಲಕ ಕೃತಕವಾಗಿಯೂ ಇದರ ಕೃಷಿ ಮಾಡಿ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕಿದೆ.