ಸತತ 35 ವರ್ಷಗಳಿಂದ ತಮ್ಮ ಇಡಿ ಜೀವನವನ್ನೇ ಮುಡಿಪಾಗಿಟ್ಟು, ಸಾವಿರಾರು ಮರಗಳನ್ನು ನೆಟ್ಟು ಬೆಳಸಿದ ಈ ವ್ಯಕ್ತಿಗೆ ಯಾವ ಪ್ರಶಸ್ತಿ ಕೊಡಬೇಕು??

0
98

ಪರಿಸರದ ನಾಶದಿಂದ ಏನೆಲ್ಲಾ ವಿಪತ್ತುಗಳು ಬರುತ್ತೆ ಎನ್ನುವುದನ್ನು ಅರಿತರು ಜನರು ಮಾತ್ರ ಬುದ್ದಿ ಕಲಿಯದೇ, ಅಭಿವೃದ್ಧಿ, ಮತ್ತು ಸ್ವಾರ್ಥಕ್ಕಾಗಿ ಮರಗಳನ್ನು ಕಡಿಯುತ್ತಿದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ಮರಗಳನ್ನು ಮತ್ತೆ ಬೆಳಸಬೇಕು ಎನ್ನುವ ಅರಿವು ಮಾತ್ರ ಯಾರಲ್ಲಿ ಇಲ್ಲ, ಏಕೆಂದರೆ ಬರಿ ಶೋಕಿಗಾಗಿ ಕಂಡು ಬರುವ ಕೆಲವು ಕಾರ್ಯಕ್ರಮಗಳಲ್ಲಿ ಮಾತ್ರ ಪರಿಸರ ಪ್ರೇಮವನ್ನು ತೋರಿಸುವ ಅಧಿಕಾರಿಗಳಿದ್ದಾರೆ. ಆದರೆ ಇವೆಲ್ಲವನ್ನೂ ಲೆಕ್ಕಿಸದೆ ಇಲ್ಲೊಬ್ಬರು ಸುಮಾರು 35 ವರ್ಷದಿಂದ 3500 ಕ್ಕೂ ಹೆಚ್ಚು ಮರಗಳನ್ನು ಬೆಳಸಿ ಇಡಿ ದೇಶಕ್ಕೆ ಮಾದರಿಯಾಗಿದ್ದಾರೆ.

ಹೆಂಡತಿಯ ಒಡವೇ ಮಾರಿ ಗಿಡ ಬೆಳಸಿದ

ಹೌದು ದಾವಣಗೆರೆಯ ಪರಿಸರ ಪ್ರೇಮಿ ಒಬ್ಬರು ತಮ್ಮ ಜೀವನವನ್ನೇ ಮರಗಿಡ ಬೆಳಸಲು ಮುಡಿಪಾಗಿಟ್ಟು ಮರಗಳನ್ನೇ ಮಕ್ಕಳೆಂದು ಬೆಳೆಸುತ್ತಿದ್ದಾರೆ. ಅದರಂತೆ ಪ್ರತಿನಿತ್ಯ ಮರಗಿಡಗಳನ್ನು ಬೆಳೆಸುವುದೇ ಇವರ ಕೆಲಸವಾಗಿದ್ದು, ಸಾವಿರಾರು ಮರಗಳನ್ನು ಸಾಕಿದ್ದಾರೆ. ಇಂತಹ ಮಹಾನ್ ಮನೋಭಾವನೆ ಇಟ್ಟುಕೊಂಡಿರುವ ವೀರಾಚಾರಿ ಎನ್ನುವ 65 ವರ್ಷದ ವ್ಯಕ್ತಿ ದಾವಣಗೆರೆಯ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದವರಾದ ವೀರಾಚಾರಿ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಚಿತ್ರದುರ್ಗದ ನಂದಿಹಳ್ಳಿ ಗ್ರಾಮದಿಂದ ಕುಲುಮೆ ಕೆಲಸ ಮಾಡಲು 35 ವರ್ಷದ ಮಿಟ್ಲಕಟ್ಟೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.

 

ಜನರು ಇವರನ್ನು ಪ್ರೀತಿಯಿಂದ ಸಾಲುಮರದ ವೀರಾಚಾರಿ ಎಂದು ಸಹ ಕರೆಯುತ್ತಾರೆ. ಇವರಿಗೆ ಪರಿಸದ ಮೇಲೆ ಇಷ್ಟೊಂದು ಕಾಳಜಿ ಬರಲು ಒಂದು ಇತಿಹಾಸವೇ ಇದೆ. ಸುಮಾರು 35 ವರ್ಷಗಳ ಹಿಂದೆ. ವೀರಾಚಾರಿ ದೇವರಬೆಳಕೆರೆ ಗ್ರಾಮ ಪಂಚಾಯಿತಿಗೆ ತೆರಳಿ ಬಸ್ ನಿಲ್ದಾಣದ ಆವರಣದಲ್ಲಿ ನೆಡಲು ಎರಡು ಗಿಡಗಳನ್ನ ಕೇಳಿದ್ದಾರೆ. ಆದರೆ ಗಿಡಗಳನ್ನ ಕೊಡಲು ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡ ವೀರಾಚಾರಿ ಗ್ರಾಮ ಪಂಚಾಯಿತಿಯವರಿಗೇ ಸವಾಲ್ ಹಾಕಿದ್ದಾರೆ. ಇನ್ನು ಮುಂದೆ ನಾನೇ ಇಡೀ ದಾವಣಗೆರೆ ಜಿಲ್ಲೆಯ ತುಂಬಾ ಗಿಡ ನೆಡುವುದಾಗಿ ಶಪಥ ಮಾಡಿದ್ದರು.

ಅದರಂತೆ ಮನೆಗೆ ಬಂದು ಹೆಂಡತಿಯ ಬೆಂಡೋಲೆ ಮಾರಿ ಗಿಡಗಳನ್ನು ತಂದರು ಅಂದಿನಿಂದ ಪ್ರಾರಂಭವಾದ ಗಿಡ ನೆಡುವ ಕಾರ್ಯಕ್ರಮ ಸತತ 35 ವರ್ಷಗಳಲ್ಲಿ 3500 ಸಾವಿರಕ್ಕಿಂತ ಹೆಚ್ಚು ಗಿಡ ನೆಟ್ಟಿದ್ದಾರೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕಿ ಬೆಳೆಸುವುದು ಇವರ ನಿತ್ಯ ಕಾಯಕವಾಗಿದೆ. ಈ ವೇಳೆ ಬಡತನದಲ್ಲಿದ್ದ ವೀರಚಾರಿ ತಮ್ಮ ಚಿನ್ನಾಭರಣಗಳನ್ನು ಮಾರಿ ಗಿಡಗಳನ್ನ ಕೊಂಡು ತಂದು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪ್ರತಿ ಗ್ರಾಮದ ಬಸ್ ನಿಲ್ದಾಣಗಳಲ್ಲಿ ಗಿಡ ಹಚ್ಚಿದ್ದಾರೆ. ಹೀಗೆ ಮರಗಳಿಗೆ ನೀರು ಹಾಕಲು ಸಾಲ ಮಾಡಿ ವಾಹನವನ್ನು ತೆಗೆದುಕೊಂಡಿದ್ದಾರೆ.

ಆ ವಾಹನದಲ್ಲಿ ಒಂದು ನೀರಿನ ಬ್ಯಾರಲ್ ಇಟ್ಟು, ದಂಪತಿಗಳು ಗಿಡಗಳಿಗೆ ನೀರು ಹಾಕುತ್ತಾರೆ. ಹೀಗೆ ವೀರಾಚಾರಿ ಅವರು ಬೆಳೆಸಿದ ಗಿಡಗಳು ಅದೆಷ್ಟೋ ಜನರಿಗೆ ನೆರಳು ನೀಡುತ್ತಿವೆ. ಹಾಗೆಯೇ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ಈ ಸಾಧನೆಗಾಗಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಮನೆಯವರು ಸಹ ಹೆಗಲಿಗೆ ಹೆಗಲು ನೀಡಿ ಮರ ಗಿಡಗಳನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಬಡತನದಲ್ಲಿ ಕೂಡ ಮನೆ ಒಡವೆ ಒತ್ತೆ ಇಟ್ಟು ಗಿಡಗಳನ್ನು ತರುತ್ತಿದ್ದರು. ನಾವು ಯಾವುದಕ್ಕೂ ವಿರೋಧ ಮಾಡುತ್ತಿರಲಿಲ್ಲ ಎಂದು ವೀರಾಚಾರಿ ಅವರ ಪತ್ನಿ ಅನಸೂಯಮ್ಮ ಹೇಳುತ್ತಾರೆ. ಏನೇ ಆಗಲಿ ಇವರ ಈ ಪರಿಸರ ಕಾಳಜಿಗೆ ಎಲ್ಲರ ಮೆಚ್ಚುಗೆ ಇರಲಿ.