ಕೊನೆಗೂ ಎಚ್ಚತ್ತ ಸರ್ಕಾರ, ನಾಗರೀಕರ ಟೀಕೆ ಅನುಭವಿಸಿದ ಮೇಲೆ ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮದ ಖರ್ಚಿನಲ್ಲಿ ೧೭ ಕೋಟಿ ಉಳಿಸಲಿದೆ!!

0
608

ವಿಧಾನ ಸೌಧದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ೨೭ ಕೋಟಿ ಖರ್ಚು ಮಾಡುವ ಇರಾದೆ ಇಟ್ಟು ಕೊಂಡಿದ್ದ ಸರ್ಕಾರದ ಆಸೆಗೆ ನೀರೆರೆಚಿದಂತಾಗಿದೆ. ಹಲವಾರು ನಾಗರಿಕರು ಹಾಗು ಸುದ್ದಿ ಮಾಧ್ಯಮಗಳಲ್ಲೂ ವ್ಯಾಪಕ ಟೀಕೆ ಅನುಭವಿಸಿದ ಸರ್ಕಾರ ಈಗ ಎಚ್ಛೆತ್ತುಕೊಂಡು ಖರ್ಚನ್ನು ೧೦ ಕೋಟಿಗೆ ಸೀಮಿತಗೊಳಿಸಿದೆ.

ವ್ಯಾಪಕ ಟೀಕೆಗೊಳಗಾದ ಸರ್ಕಾರದ ದುಬಾರಿ ವೆಚ್ಚ, ಅದರಲ್ಲೂ ಮುಖ್ಯವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅನೇಕ ಟೀಕೆಗಳು ಗುರಿ ಮಾಡಿದ್ದವು. ಇದಕ್ಕಾಗಿ, “ಉದ್ದೇಶಿತ ₹27 ಕೋಟಿ ವೆಚ್ಚವನ್ನು ₹10 ಕೋಟಿಗೆ ಸೀಮಿತಗೊಳಿಸಲು ಮುಖ್ಯಮಂತ್ರಿ ಸೂಚಿಸಿದ್ದರು. ಇದರಿಂದಾಗಿ, ಕಾರ್ಯಕ್ರಮ ಒಂದು ದಿನಕ್ಕೆ ಮೊಟಕುಗೊಳಿಸಲಾಗಿದೆ” ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.

ಈ ವೆಚ್ಚ ಕಡಿತದಿಂದ, ದುಬಾರಿ ಸಂಗೀತ ಕಾರ್ಯಕ್ರಮ ಹಾಗು ಸಾಕ್ಷ್ಯ ಚಿತ್ರಗಳಿಗೆ ವಿಧಿಸುವ ಖರ್ಚು ಮೊಟಕುಗೊಂಡಿದೆ. ಗಿರೀಶ್ ಕಾಸರವಳ್ಳಿಯವರ ವಿಧಾನಸೌಧ ಕಟ್ಟಡ ನಿರ್ಮಾಣ ಕುರಿತ ಸಾಕ್ಷ್ಯಚಿತ್ರ, ಮೂರು ಗಂಟೆ ಅವಧಿಯ ಬದಲು ಕೇವಲ ಒಂದು ಗಂಟೆ ಅವಧಿಯ ಸಾಕ್ಷ್ಯ ಚಿತ್ರ ಪ್ರದರ್ಶಿಸುವುದಾಗಿ ತಿಳಿಸಿದ್ದಾರೆ.

ಟಿ.ಏನ್.ಸೀತಾರಾಮ್ ಅವರ ಏಳು ಭಾಗದ ಸಾಕ್ಷ್ಯಚಿತ್ರ, ಕೇವಲ ಎರಡು ಭಾಗಗಳಿಕೆ ಸೀಮಿತಗೊಳಿಸಲಾಗಿದೆ. ನಿರ್ಮಾಣಕ್ಕೆ ನಿಗದಿಪಡಿಸಿದ್ದ ವೆಚ್ಚ ಕಡಿತಗೊಳಿಸಿದ ಪರಿಣಾಮ ಉಳಿದ ಐದು ಭಾಗಗಳನ್ನು ನಿರ್ಮಿಸಲು ಹಿಂದೇಟು ಹಾಕಿದ್ದಾರೆ ಎಂದು ಸರ್ಕಾರಿ ವಲಯಗಳಲ್ಲಿ ಕೇಳಿಬರುತ್ತಿದೆ. ಈಗ ಸಿದ್ಧಗೊಂಡಿರುವ ಎರಡು ಭಾಗಗಳನ್ನು, ವಿಧಾನಸಭಾ ಸಚಿವಾಲಯದ ಸುಪರ್ದಿಗೆ ಸೋಮವಾರ ಒಪ್ಪಿಸಲಿದ್ದಾರೆ.

ಇದರ ಜೊತೆ ಖ್ಯಾತ ಸಂಗೀತ ನಿರ್ದೇಶಕ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್‌ ಅವರೂ ಸಹ ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ‘ವಜ್ರಮಹೋತ್ಸವ ಸಂದರ್ಭದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಂಗೀತ ಕಾರ್ಯಕ್ರಮ ನಡೆಸಿಕೊಡುವಂತೆ‌ ನನ್ನನ್ನು ಆಯೋಜಕರು ಕೇಳಿದಾಗ ಉಚಿತವಾಗಿ ನಡೆಸಿ ಕೊಡುವುದಾಗಿ ತಿಳಿಸಿದ್ದೆ. ಆರು ದೇಶಗಳಿಂದ ಮತ್ತು ರಾಜ್ಯದ ಹೆಸರಾಂತ ಕಲಾವಿದರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದೆ. ಆದರೆ, ಎರಡು ದಿನಗಳ ಕಾರ್ಯಕ್ರಮವನ್ನು ಒಂದು ‌ದಿನಕ್ಕೆ ಸೀಮಿತಗೊಳಿಸಿ, ಕೇವಲ ಎರಡು ಗಂಟೆ ಅವಧಿಗೆ ಮಿತಿಗೊಳಿಸಿದ್ದರಿಂದ ಕಾರ್ಯಕ್ರಮಕ್ಕೆ ಸಮಯ ಹೊಂದಿಸುವುದು ಕಷ್ಟವಾಗುತ್ತಿದೆ. ಹೀಗಾಗಿ, ಕಾರ್ಯಕ್ರಮ ನಡೆಸದಿರಲು ನಿರ್ಧರಿಸಿದ್ದೇನೆ’ ಎಂದು ರಿಕ್ಕಿ ಕೇಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಜ್ರಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವುದು ಒಳ್ಳೆಯ ವಿಚಾರವೇ ಆದರೂ, ಎರಡು ದಿನದ ಕಾರ್ಯಕ್ರಮಕ್ಕೆ ೨೭ ಕೋಟಿ ಖರ್ಚು ಮಾಡುವುದು ಸರಿಯಿಲ್ಲ. ಅದ್ದೂರಿ ಕಾರ್ಯಕ್ರಮಗಳನ್ನು ಇದಕ್ಕಿಂತ ತುಂಬಾ ಕಡಿಮೆ ಬೆಲೆಯಲ್ಲಿ ನಡೆಸಿದ ಎಷ್ಟೋ ಉದಾಹರಣೆಗಳು ನಮಗೆ ಸಿಗುತ್ತವೆ. ಸರ್ಕಾರ ನಾಗರಿಕ ಸಂಸ್ಥೆಗಳ ಜೊತೆ ಸಂವಾದ ನಡೆಸಿ, ಒಳ್ಳೆ ಕಾರ್ಯಕ್ರಮಗಳ ರೂಪು ರೇಷೆ ಹಾಕಿದ್ದಾರೆ, ಇಂತಹ ಪೇಚು ಅನುಭವಿಸಬೇಕಿರಲಿಲ್ಲ. ಇನ್ನಾದರೂ ಸರ್ಕಾರ ಎಚ್ಛೆತ್ತು, ನಾಗರೀಕರೊಡನೆ ಸಮಾಲೋಚಿಸಿ ಮುನ್ನೆಡೆದರೆ ಒಳಿತು.