ಭಾರತ ಮರೆತ ಕ್ರಾಂತಿಕಾರ ವಿದ್ಯಾಸಾಗರ್

0
1035

ದೇಶಕ್ಕೆ ಮಹಾತ್ಮರನ್ನು, ವೀರ ಧೀರರನ್ನು, ಸಾಹಿತಿಗಳನ್ನು ನೀಡಿದ ಕೊಡುಗೆ ಕುಗ್ರಾಮಗಳದ್ದು. ಅಂತಹ ಒಂದು ಹಳ್ಳಿಯ ಪಾಠಶಾಲೆಯಲ್ಲಿ ಓದುತ್ತಿದ್ದ ಬಾಲಕನೇ ವಿದ್ಯಾಸಾಗರ. ಈತ ಬಡತನದಿಂದಾಗಿ ತಡರಾತ್ರಿಯವರೆಗೂ ಬೀದಿದೀಪದಲ್ಲಿ ಓದಿ ಉನ್ನತ ವ್ಯಾಸಂಗದ ಅತ್ಯಚ್ಛ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಎಲ್ಲರನ್ನು ಬೆರಗುಗೊಳಿಸಿದರು. ಮುಂದೆ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಘನತೆ ಮೆರೆದರು. ಬೆಂಗಾಲಿ, ಸಂಸ್ಕøತ ಹಾಗೂ ಇಂಗ್ಲೀಷನಲ್ಲಿ ಅಗಾಧಪಾಂಡಿತ್ಯ ಇದ್ದುದರಿಂದ ಜನತೆ ಅಕ್ಕರೆಯಿಂದ ಅವರನ್ನು “ಕರುಣಾಸಾಗರ” ಅಥವಾ “ದಯೆಯಸಾಗರ” ಎಂದು ಕರೆದರು. ಅವರು ಅಭ್ಯಾಸ ಮಾಡಿದ ಕಾಲೇಜಿನ ಅಧ್ಯಾಪಕರು ಅವರಿಗೆ “ವಿದ್ಯಾಸಾಗರ” ಎಂಬ ಬಿರುದನ್ನಿತ್ತರು. ವಿದ್ಯಾಸಾಗರ ಎಂಬ ಬಿರುದು ಅವರ ಹೆಸರಿನೊಂದಿಗೆ ಹೊಂದಿಕೊಂಡಿತು. “ಕರುಣೆಯೂ ಅಲ್ಲ, ಪಾಂಡಿತ್ಯವು ಅಲ್ಲ; ಅವರ ಗುಣದ ನಿಜವಾದ ನಿಧಿ ಇರುವುದು ಅವರಲ್ಲಿರುವ ಅಕ್ಷಯ ಮನುಷ್ಯತ್ವದಲ್ಲಿ, ಅಜೇಯ ಪೌರುಷದಲ್ಲಿ” ಎಂದು ರವೀಂದ್ರನಾಥ ಟ್ಯಾಗೋರರು ಹೇಳಿದರು.

ವಿದ್ಯಾಸಾಗರರು ಬಂಗಾಳದ ಮಿಡ್ನಾಪುರ ಜಿಲ್ಲೆಯ ಬರ್ನಿಂಘಾದಲ್ಲಿ 1820 ಸೆಪ್ಟೆಂಬರ 29 ರಂದು ಜನಿಸಿದರು . ತಂದೆ ಠಾಕೂರದಾಸ ಬಂಡೋಪಾಧ್ಯಾಯ. ತಾಯಿ ಭಗವತಿದೇವಿ. ಇವರದು ಬಡ ಕುಟುಂಬವಾದರೂ, ತಮ್ಮ ತಾತ, ಮುತ್ತಾತರಿಂದ ಈಶ್ವರ ಚಂದ್ರರು ಒಂದು ಉನ್ನತ, ಚಾರಿತ್ರ್ಯ ಹಾಗೂ ದೃಢಸಂಕಲ್ಪಗಳ ಪರಂಪರೆಯನ್ನು ಪಡೆದುಕೊಂಡು ತನ್ಮೂಲಕ ಜೀವನದಾದ್ಯಂತ ಒಬ್ಬ ನಿರ್ಭಯ ಯೋಧರಾಗಿ ಅಪೂರ್ವ ವ್ಯಕ್ತಿತ್ವದಿಂದ ಶೋಭಿಸಿದರು.

ಸಂಸ್ಕೃತ-ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 12 ವರ್ಷಗಳ ಕಾಲವು ಅವರು ಶಿಕ್ಷಣದಲ್ಲಿ ಉಜ್ವಲ ಫಲಿತಾಂಶವನ್ನು ಪಡೆದುಕೊಂಡರು. ವ್ಯಾಸಂಗ ಮಾಡಿದ ಎಲ್ಲಾ ವಿಷಯಗಳಲ್ಲಿಯೂ ಅವರಿಗೆ ಉತ್ಕøಷ್ಟ ಅಂಕಗಳು ಬಂದವು. 1841ರ ಡಿಸೆಂಬರನಲ್ಲಿ ಸಂಸ್ಕೃತ ಕಾಲೇಜಿನ ಅತ್ಯುಚ್ಚ ಪರೀಕ್ಷೆಯನ್ನು ಮುಗುಸಿದ ಅವರು ಸಂಸ್ಕೃತದ ವಿಭಾಗಗಳಲ್ಲಿ ಅಧ್ಯಯನ ಮಾಡಿ ಉತ್ಕøಷ್ಟ ಮಟ್ಟದ ವಿದ್ವಾಂಸರೆಂದು ಕೀರ್ತಿಗಳಿಸಿದರು.

ಈಶ್ವರ ಚಂದ್ರರು 1846ರಲ್ಲಿ ಎಪ್ರಿಲ್‍ನಲ್ಲಿ ತಾವು ಓದಿದ ಸಂಸ್ಕøತ ಕಾಲೇಜಿನ ಸಹ ಕಾರ್ಯಧರ್ಶಿಗಳಾಗಿ ನೇಮಿಸಲ್ಪಟ್ಟರು. ಮತ್ತೆ ಅದೇ ಕಾಲೇಜಿನಲ್ಲಿ 1851 ಜನೇವರಿಯಲ್ಲಿ ಪ್ರಾಚಾರ್ಯರಾಗಿ ನೇಮಕಗೊಂಡರು. ಶೈಕ್ಷಣಿಕ ಪರಿಷತ್ತಿನ ಸಹಾಯದಿಂದ ವಿದ್ಯಾಸಾಗರರು, ತಮ್ಮ ಹಳೆಯ ಯೋಜನೆಯಂತೆ ಸಂಸ್ಕೃತ ಕಾಲೇಜಿನ ಶಿಕ್ಷಣ ವ್ಯವಸ್ಥೆ ಹಾಗೂ ಹಾಗೂ ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗಳನ್ನು ತಂದರು. ವಿದ್ಯಾಸಾಗರರು ಅಂದಿನ ಸಾಮಾಜಿಕ ಪದ್ಧತಿಗಳಲ್ಲಿ ಅತ್ಯಂತ ಕ್ರೂರವಾಗಿದ್ದ “ಬಲಾತ್ಕಾರ ವೈಧವ್ಯ” ವಿರೋಧಿಸಿ ನಿಂತರು.

ವಿಧವಾ ವಿವಾಹಕ್ಕೆ ಬೆಂಬಲ ಪಡೆಯಲು ಅವರು ಶ್ರಮಪಟ್ಟು ಎಲ್ಲಾ ಹಿಂದೂ ಶಾಸ್ತ್ರಗಳ ಕುಲಂಕಷ ಹಾಗೂ ಧೀರ್ಘ ಗಾಢ ಅಧ್ಯಯನ ಮಾಡಿದರು. ದಿನಗಟ್ಟಲೆ ನಿದ್ರೆ ಬಿಟ್ಟು ಪರಿಶ್ರಮ ಮಾಡಿದ ನಂತರ, “ಪರಾಶರ ಸಂಹಿತೆ”ಯಲ್ಲಿ ವಿಧವಾ ಪುನರ್‍ವಿವಾಹವನ್ನು ಶಿಫಾರಸ್ಸು ಮಾಡುವ ಶ್ಲೋಕವೊಂದನ್ನು ಹುಡುಕಿ ತೆಗೆದರು. ವಿದ್ಯಾಸಾಗರರು ಹಿಂದೂ ಧರ್ಮದ ಪಾವಿತ್ರ್ಯತೆಯನ್ನು ಧೂಳೀಪಟ ಮಾಡ ಹೊರಟಿದ್ದಾರೆ ಎಂದು ಕೂಗನ್ನೆಬ್ಬಿಸಿದರು. ವಿದ್ಯಾಸಾಗರರ ಚಾರಿತ್ರ್ಯಕ್ಕೆ ಧಕ್ಕೆ ತರಲೆತ್ನಿಸಿದರು. ಅಷ್ಟೇ ಅಲ್ಲದೆ ಗೂಂಡಾಗಳನ್ನು ಬಿಟ್ಟು ಹತ್ಯೆಗೈಯಲು ಯತ್ನಿಸಿದರು. ಇದ್ಯಾವುದರಿಂದಲೂ ಧೃತಿ ಗೆಡದೆ ವಿದ್ಯಾಸಾಗರರು ತಮ್ಮ ಕಾರ್ಯಬಿಟ್ಟು ಹಿಂದೆ ಸರಿಯಲಿಲ್ಲ. 1855ರ ಅಕ್ಟೋಬರ್‍ನಲ್ಲಿ ಅವರು ಪ್ರಕಟಿಸಿದ ಪುಸ್ತಕಗಳ ಮೂಲಕ ವಿರೋಧಿಗಳು ಉತ್ತರಿಸಲಾಗದಂತಹ ವಾದಗಳನ್ನೊಡ್ಡಿ ಅವರ ಸಡಿಲಬಿಟ್ಟ ನಾಲಿಗೆಗಳಿಗೆ ಲಗಾಮು ಹಾಕಿದರು.
ಭಾರತದ ಸಾಮಾಜಿಕ ಚಳುವಳಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾಗಿರುವ ದಿನ-1856 ಜುಲೈ 26. ಅಂದು ಸಂಪ್ರದಾಯವಾದಿಗಳಿಂದ ಬಂದ ವಿರೋಧವನ್ನು ಲೆಕ್ಕಿಸದೇ ವಿಧವಾ ವಿವಾಹವನ್ನು ಬೆಂಬಲಿಸಿ ಶಾಸಕಾಂಗ ಸಭೆಯಲ್ಲಿ ಒಂದು ಮಸೂದೆಯನ್ನು ಅಂಗೀಕರಿಸಲಾಯಿತು. ಆ ಕೂಡಲೇ ವಿದ್ಯಾಸಾಗರರು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದರು. 1856ರ ಡಿಸೆಂಬರ್‍ನಲ್ಲಿ ಮೊದಲ ವಿಧವಾವಿವಾಹ ಜರುಗಿತು. ಶರೀಷ್‍ಚಂದ್ರ ವಿದ್ಯಾರತ್ನರು 12 ವರ್ಷದ ವಿಧವೆ ಕಾಲಿಮತಿಯನ್ನು ಮದುವೆಯಾದರು. ಅನಂತರ ಈಶ್ವರಚಂದ್ರ ವಿದ್ಯಾಸಾಗರರ ಒಬ್ಬನೇ ಮಗ ನಾರಾಯಣ ಚಂದ್ರರೂ ಒಬ್ಬ ವಿಧವೆಯನ್ನು ಮದುವೆಯಾದರು. ಪಾಶ್ಚಿಮಾತ್ಯ ಶಿಕ್ಷಣ ಜ್ಞಾನಗಳೊಂದಿಗೆ ದೇಶಾಭಿಮಾನವನ್ನು, ರಾಜಕೀಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು.
ಅವರು ತಮ್ಮ ಜೀವನ ಪರ್ಯಂತ ಧರ್ಮನಿರಪೇಕ್ಷತೆಯ ಪತಾಕೆಯನ್ನು ಎತ್ತಿ ಹಿಡಿದರು. ಮುಖ್ಯವಾಗಿ ಅವರು ಒಬ್ಬ ಮಾನವತಾವಾದಿಗಳಾಗಿದ್ದರು.ಇಂತಹ ಮಹಾನ್ ಚೇತನ ಭಾರತದ ನವೋದಯ ಚಳುವಳಿಯಲ್ಲಿ ಪ್ರಜ್ವಲಿಸಿದ ದೀಪ 1891 ಜುಲೈ 29 ರಂದು ಅಸ್ತಂಗತವಾಯಿತು. ಅವರ ಮರಣದೊಂದಿಗೆ ಒಂದುಯುಗ ಮುಕ್ತಾಯವಾಯಿತು. ಅವರು ತಮ್ಮ ಜೀವನದಲ್ಲಿ ಕೈಗೆತ್ತಿಕೊಂಡ ಕಾರ್ಯಗಳು ಪೂರ್ಣವಾಗಲಿಲ್ಲ. ಯಾವ ಹೋರಾಟಕ್ಕೆ ಹೊಸ ಆಯಾಮವನ್ನು ನೀಡಿದರೋ ಆ ಹೋರಾಟವು ದಿನಗಳೆದಂತೆ ಧಾರ್ಮಿಕ ಪುನರುತ್ಥಾನವಾದದತ್ತ ವಾಲುತ್ತಾ ಹೋಯಿತು. ಶರತ್‍ಚಂದ್ರ್ , ಪ್ರೇಮ್‍ಚಂದ್ , ಭಗತ್‍ಸಿಂಗ್‍ರಂತಹ ಕೆಲವರನ್ನು ಬಿಟ್ಟರೆ ಅನಂತರದ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವದಲ್ಲಿದ್ದ ರಾಜಿಪರ ಪಂಥವು ಹಿಂದೂ ಪುನರುತ್ಥಾನವಾದದ ಪ್ರಭಾವಕ್ಕೆ ಒಳಗಾಯಿತು. ಇದೆಲ್ಲದರ ಪರಿಣಾಮವಾಗಿ ಭಾರತೀಯ ಸಮಾಜದ ಎಲ್ಲ ಸಾಮಾಜಿಕ-ಧಾರ್ಮಿಕ ಸುಧಾರಣೆಗಳು ಅಪೂರ್ಣವಾದವು.