ಸತ್ಯವಿರಲಿ ಸುಳ್ಳಿರಲಿ ನಿಮ್ಮ ಸಂದೇಶಗಳನ್ನು ವೈರಲ್ ಮಾಡಿ: ಅಮಿತ್ ಶಾ…

0
464

ಯಾವುದೇ ಸಂದೇಶವನ್ನು ವೈರಲ್ ಮಾಡುವ ಸಾಮರ್ಥ್ಯ ಬಿಜೆಪಿಗಿದೆ ಎಂದು ಅಮಿತ್ ಶಾ ಘಂಟಾ ಘೋಶವಾಗಿ ಹೇಳಿದ್ದಾರೆ. . ನೀವು ಕಳುಹಿಸುವ ಯಾವುದೇ ಸಂದೇಶ ಸತ್ಯವೊ, ಸುಳ್ಳೊ ಒಟ್ಟಿನಲ್ಲಿ ಅದು ವೈರಲ್‌ ಆಗಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಜಸ್ಥಾನದ ಕೋಟದಲ್ಲಿ ನಡೆದ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ತಮ್ಮ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಹಿಂಬಾಲಕರು ವಿದೇಶಿಯರು, ನೀವು ಬಾಡಿಗೆ ಗೂಂಡಾಗಳಿಗೆ ಭಯಪಡಬೇಡಿ. ರಾಜ್ಯ ಮತ್ತು ಕೇಂದ್ರದಲ್ಲಿ ನಾವು ಸರ್ಕಾರ ರಚಿಸಲು ಸಾಮಾಜಿಕ ಮಾಧ್ಯಮಗಳೇ ಆಯುಧ. ನೀವು ಕಳುಹಿಸುವ ಸಂದೇಶ ವೈರಲ್ ಆಗಬೇಕು. ಈಗಾಗಲೇ ಉತ್ತರಪ್ರದೇಶದಲ್ಲಿ 32 ಲಕ್ಷ ಜನರಿರುವ ವಾಟ್ಸಪ್ ಗ್ರೂಪ್‌ ಮಾಡಿದ್ದೇವೆ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಸಂದೇಶ ಕಳುಹಿಸುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರು ಎರಡು ದೊಡ್ಡ ವಾಟ್ಸಪ್ ಗ್ರೂಪ್‌ಗಳನ್ನು ರಚಿಸಲಾಗಿತ್ತು. ಒಂದು ಗುಂಪಿನಲ್ಲಿ 15 ಲಕ್ಷ, ಮತ್ತೊಂದು ಗುಂಪಿನಲ್ಲಿ 17 ಲಕ್ಷ ಜನರಿದ್ದರು, ಒಟ್ಟು 31 ಲಕ್ಷ ಜನರು ಆ ಎರಡು ಗ್ರೂಪಿನಲ್ಲಿದ್ದಾರೆ. ದಿನ ಬೆಳಗ್ಗೆ ‘ಸತ್ಯ ಏನು ಗೊತ್ತೆ ’ ಎಂಬ ಸಂದೇಶವನ್ನು ಕಳುಹಿಸಲಾಗುತ್ತಿತ್ತು. ಬಿಜೆಪಿ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಸುಳ್ಳು ಸುದ್ದಿಗಳನ್ನು ಪಟ್ಟಿಮಾಡಿ, ವಾಸ್ತವಾಂಶ ವಿವರಿಸುವ ಸಂದೇಶಗಳನ್ನು ವಾಟ್ಸ್ಆ್ಯಪ್‌ನಲ್ಲಿ ಕಳುಹಿಸಲಾಗುತ್ತಿತ್ತು. ಇಂತಹ ಸಂದೇಶಗಳು ವೈರಲ್‌ ಆಗುತ್ತಿದ್ದವು.  ಪತ್ರಿಕೆ ಜನರಿಗೆ ಸಿಗುವ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ‘ಸತ್ಯ ಏನು ಗೊತ್ತೆ’ ಬಂದಿರುತ್ತಿತ್ತು. ಸುಳ್ಳು ಸುದ್ದಿಗಳನ್ನು ಯಾಕೆ ಪ್ರಕಟಿಸುತ್ತೀರಾ, ಸತ್ಯವಾದುದನ್ನು ಬರೆಯಿರಿ ಎಂದು ಜನರೇ ಪತ್ರಕರ್ತರಿಗೆ ಹೇಳತೊಡಗಿದರು. ಹೀಗೆ ಮಾಡಿದ್ದರಿಂದ ಪತ್ರಿಕೆಗಳು ನಿಧಾನಕ್ಕೆ ತಟಸ್ಥವಾದವು ಎಂದು ಅಮಿತ್ ಶಾ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಣೆ ಮಾಡುವ ಕಾರ್ಯಕರ್ತರು ಚುರುಕಾಗಿರಬೇಕು. ನಾವು ಕಳುಹಿಸುವ ಸಂದೇಶ ವೈರಲ್‌ ಆಗಬೇಕು, ಸಮಾಜದ ಎಲ್ಲರನ್ನೂ ತಲುಪಬೇಕು. ಮುಲಾಯಂ ಅವರಿಗೆ ಅಖಿಲೇಶ್ ಯಾದವ್ ಹೊಡೆದರು ಎಂದು ಒಬ್ಬ ಕಾರ್ಯಕರ್ತ ಒಂದು ಸಂದೇಶ ಕಳುಹಿಸಿದ್ದ. ಆದರೆ ಈ ಘಟನೆ ನಡೆದೇ ಇರಲಿಲ್ಲ.  ಅಖಿಲೇಶ್ ಮತ್ತು ಮುಲಾಯಂ ಬೇರೆ ಸ್ಥಳಗಳಲ್ಲಿ ಇದ್ದರು. ಅದೂ 600 ಕಿ.ಮೀ ದೂರದಲ್ಲಿ. ಈ ಸುದ್ದಿ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲಾ ಕಡೆ ಹರಡಿತು, ಬೆಳಗ್ಗೆ ಹತ್ತು ಗಂಟೆಗೆ ನನ್ನ ಪೋನ್ ರಿಂಗಣಿಸಿತು, ಸರ್, ನಿಮಗೆ ಗೊತ್ತೆ, ಮುಲಾಯಂ ಸಿಂಗ್ ಅವರನ್ನು ಅಖಿಲೇಶ್ ಹೊಡೆದರಂತೆ. ಹೀಗೆ ಈ ಸಂದೇಶ ವೈರಲ್ ಆಯ್ತು.

ಇಂಥ ಕೆಲಸಗಳಿಂದ ನಮಗೆ ಒಳ್ಳೆಯದೇ ಆಗಬಹುದು, ಆದರೂ ಇಂಥವಕ್ಕೆ ಕೈ ಹಾಕಬೇಡಿ. ನಾನು ಏನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗಿರಬೇಕು. ನಾವು ಒಳ್ಳೆಯದನ್ನು ಸಹ ಮಾಡಬಹುದು. ನಾವು ಸಾರ್ವಜನಿಕರಿಗೆ ಯಾವುದೇ ಸಂದೇಶವನ್ನು ಕಳುಹಿಸಲು ಸಮರ್ಥರಿದ್ದೇವೆ, ಅದು ಸಿಹಿ ಇರಲಿ, ಕಹಿ ಇರಲಿ ಅಥವಾ ಸತ್ಯವಿರಲಿ, ಸುಳ್ಳಿರಲಿ ಯಾಕೆಂದರೆ ನಮ್ಮ ಗ್ರೂಪಿನಲ್ಲಿ 32 ಲಕ್ಷ ಜನರಿದ್ದಾರೆ. ಹೀಗಾಗಿ ನಮಗೆ ಸಂದೇಶಗಳನ್ನು ವೈರಲ್ ಮಾಡಲು ಸಾಧ್ಯವಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.