ತಿರುಮಲದಲ್ಲಿ ಕಲ್ಲಂಗಡಿ ಹಣ್ಣು ನಿಷೇಧ ಏಕೆ ಅಂತೀರಾ ಇಲ್ಲಿ ನೋಡಿ…!

0
1376

ಬೇಸಿಗೆಯಲ್ಲಿ ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿ ಹಣ್ಣಿನ ಮಾರಾಟವನ್ನು ತಿರುಮಲದಲ್ಲಿ ನಿಷೇಧಿಸಲಾಗಿದೆ.

ತಿರುಮಲ ಬೆಟ್ಟದ ತಪ್ಪಲಿನಲ್ಲಿರುವ ಅಲಿಪಿರಿ ಚೆಕ್ಪೋಸ್ಟ್ ನಲ್ಲಿ ಭದ್ರತಾ ಸಿಬ್ಬಂದಿ ಭಕ್ತಾದಿಗಳ ಬ್ಯಾಗ್ಗಳನ್ನ ಪರಿಶೀಲಿಸುತ್ತಿದ್ದು ಕಲ್ಲಂಗಡಿ ಹಣ್ಣುಗಳನ್ನ ಹೊತ್ತೊಯ್ಯದಂತೆ ನಿಗಾ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅಂಗಡಿಗಳಲ್ಲೂ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುತ್ತಿಲ್ಲ ಎಂದು ತಿಳುದುಬಂದಿದೆ.
ರಾಯಲ್ಸೀಮಾದಲ್ಲಿ ಪ್ರಸ್ತುತ 45 ಡಿಗ್ರಿ ಉಷ್ಣಾಂಶವಿದ್ದು ಭಕ್ತರು ಎಳನೀರು ಹಾಗೂ ಕಲ್ಲಂಗಡಿ ಹಣ್ಣು ತಿನ್ನಲು ಬಯಸುತ್ತಾರೆ. ಆದ್ರೆ ಅಧಿಕಾರಿಗಳು ಇದ್ದಕ್ಕಿದ್ದಂತೆ ಕಲ್ಲಂಗಡಿ ಹಣ್ಣನ್ನು ನಿಷೇಧಿಸಿರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ.

ಕಲ್ಲಂಗಡಿ ನಿಷೇಧಕ್ಕೆ ಕಾರಣವೇನು?: ಬಾಲಾಜಿಯ ಸನ್ನಿಧಾನದಲ್ಲಿ ಚಿರತೆಗಳ ಭಯದಿಂದ ಕಲ್ಲಂಗಡಿ ಹಣ್ಣನ್ನು ನಿಷೇಧಿಸಲಾಗಿದೆ. ಕಲ್ಲಂಗಡಿ ಹಣ್ಣಿಗೂ ಚಿರತೆಗಳು ಬರೋದಕ್ಕೂ ಏನು ಸಂಬಂಧ ಅಂತ ಕನ್ಫ್ಯೂಸ್ ಆಗ್ಬೇಡಿ. ಭಕ್ತಾದಿಗಳು ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಅದರ ಹೊರಭಾಗ ಅಥವಾ ಸಿಪ್ಪೆಯನ್ನು ತಿರುಮಲದ ಕಸದ ತೊಟ್ಟಿಗಳಲ್ಲಿ ಹಾಕ್ತಾರೆ. ಇದನ್ನ ತಿನ್ನಲು ಜಿಂಕೆಗಳು ಬರುತ್ತವೆ. ಜಿಂಕೆಗಳು ಬಂದ ಮೇಲೆ ಚಿರತೆಗಳು ಕೂಡ ತಿರುಮಲಕ್ಕೆ ಲಗ್ಗೆ ಇಡುತ್ತವೆ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ನಿಷೇಧಿಸಿದ್ರೆ ಚಿರತೆಗಳು ಬರೋದನ್ನ ತಡೆಯಬಹುದು ಎಂದು ದೇವಸ್ಥಾನದ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಇಲ್ಲಿನ ವೈದ್ಯಕೀಯ ಅಧಿಕಾರಿ ಡಾ. ಸರ್ಮಿಷ್ಟ ಹೇಳಿದ್ದಾರೆ.

ತಿರುಮಲ ಬೆಟ್ಟದಲ್ಲಿ ಸಂಗ್ರಹವಾಗೋ ಕಸವನ್ನ ಬಾಲಾಜಿ ಕಾಲೋನಿಯಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಅಲ್ಲಿ ಈ ಹಿಂದೆ ಚಿರತೆಗಳು ಕಾಣಿಸಿಕೊಂಡಿದ್ದವು. ಕಸದಲ್ಲಿ ಆಹಾರ ಹುಡುಕಿ ಬರೋ ಕಾಡು ಹಂದಿ ಹಾಗೂ ಜಿಂಕೆಗಳ ಬೇಟೆಗೆಂದೇ ಚಿರತೆಗಳು ಕಾಯುತ್ತಿವೆ ಎಂದು ಅಧಿಕಾರಿಗಳು ವಾದಿಸಿದ್ದಾರೆ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬದಲಾಗಿ ಬೇರೆ ಯಾವ ಹಣ್ಣು ತಿಂದರೂ ಬಿಸಿಲಿನ ಧಗೆ ನಿವಾರಣೆಗೆ ಸರಿಹೋಗುವುದಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ವ್ಯಾಪಾರ ಕುಸಿದಿರುವುದಕ್ಕೆ ಹಣ್ಣಿನ ವ್ಯಾಪಾರಿಗಳು ಕೂಡ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.