ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದ ಸುಷ್ಮಾ ಸ್ವರಾಜ್ ನಿಧನಕ್ಕೆ ಕಾರಣವಾದ ಆರೋಗ್ಯ ಸಮಸ್ಯೆ ಯಾವುದು??

0
276

ಹೆಮ್ಮೆಯ ಮಹಿಳಾ ರಾಜಕಾರಣಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದು, ಕಳೆದ 2 ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೋದಿ ಸಂಪುಟದಿಂದಲೂ ಹೊರಗೆ ಉಳಿದಿದ್ದರು. ಇವರು ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. 2016ರ ಡಿ.10ರಂದು ಅವರು ಕಿಡ್ನಿ ಕಸಿ ಚಿಕಿತ್ಸೆ ಮಾಡಿಕೊಂಡಿದ್ದರು. ಆನಂತರ ಅವರ ಆರೋಗ್ಯ ಮೊದಲಿನಂತೆ ಆಗಲಿಲ್ಲ. ಆದರೂ ಅವರು ಉತ್ಸಾಹದಿಂದಲೇ ಕೇಂದ್ರ ಸರ್ಕಾರದ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದರು.

ಹರಿಯಾಣ ಮೂಲದ ಸುಷ್ಮಾ ಸ್ವರಾಜ್ ಅವರು 1953 ಫೆಬ್ರವರಿ 14ರಂದು ಅಂಬಾಲಾ ಕಂಟೋನ್ಮೆಂಟ್‍ನಲ್ಲಿ ಜನಿಸಿದ್ದರು. ಹಾರ್ದೇವ್ ಶರ್ಮಾ ಹಾಗೂ ಲಕ್ಷ್ಮಿ ದೇವಿ ದಂಪತಿಗೆ ಜನಿಸಿದ ಸುಷ್ಮಾ ಅವರು ಸಂಸ್ಕೃತ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಆ ನಂತರ ಪಂಜಾಬ್ ವಿವಿಯಲ್ಲಿ ಕಾನೂನು ಪದವಿ ಪಡೆದು 1973ರಲ್ಲಿ ಸುಪ್ರೀಂಕೋರ್ಟ್ ವಕೀಲರಾಗಿ ಅಭ್ಯಾಸ ಆರಂಭಿಸಿದ ಇವರು, ಎಬಿವಿಪಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು.
1975ರಲ್ಲಿ ಜಾರ್ಜ್ ಫರ್ನಾಂಡೀಸ್ ಕಾನೂನು ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದು, ಜಯಪ್ರಕಾಶ್ ನಾರಾಯಣರ ಕ್ರಾಂತಿಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ತುರ್ತು ಪರಿಸ್ಥಿತಿ ನಂತರ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಮಲದ ಕೈ ಹಿಡಿದಿದ್ದರು. 1977ರಂದು ಮೊದಲ ಬಾರಿಗೆ ಸುಷ್ಮಾ ಅವರು ಹರಿಯಾಣ ಶಾಸಕಿಯಾಗಿ ಆಯ್ಕೆಯಾದರು. ಅಂದಿನಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಮಾದರಿಯಾಗಿದ್ದರು.

ಮಾಜಿ ಸಚಿವೆ ನಿಧನಕ್ಕೆ ಪಿಎಂ ಮೋದಿ ಸಂತಾಪ

“ಭಾರತೀಯ ರಾಜಕಾರಣದಲ್ಲಿ ಒಂದು ಅದ್ಭುತ ಅಧ್ಯಾಯವು ಕೊನೆಗೊಂಡಿದೆ.ಸಾರ್ವಜನಿಕ ಸೇವೆಗಾಗಿ ಮತ್ತು ಬಡವರ ಜೀವನವನ್ನು ಉತ್ತಮಗೊಳಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ಗಮನಾರ್ಹ ನಾಯಕಿಯ ನಿಧನಕ್ಕೆ ಭಾರತ ದುಃಖಿಸುತ್ತಿದೆ.” ಎಂದು ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಸ್ವರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. “ಸುಷ್ಮಾ ಸ್ವರಾಜ್ ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದರು ಸುಷ್ಮಾ ಅವರು ಅತ್ಯುತ್ತಮ ಸಂಸದೆಯಾಗಿದ್ದರು. ಅವರ ಪಕ್ಷ, ಹಾಗೂ ಅದರ ಆಚೆಗೂ ಸಹ ಮೆಚ್ಚುಗೆ ಪಡೆದರು ಮತ್ತು ಗೌರವಿಸಲ್ಪಟ್ಟರು. ಬಿಜೆಪಿಯ ಸಿದ್ಧಾಂತ ಮತ್ತು ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ ಅವರು ರಾಜಿಯಾಗುತ್ತಿರಲಿಲ್ಲ. ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾದದ್ದು.

ವಿರೋಧಿಗಳಿಗೆ ದಿಟ್ಟ ಉತ್ತರ ನೀಡಿದ ಸುಷ್ಮಾ

ಅನಾರೋಗ್ಯ ಪೀಡಿತರಾದ ಬಳಿಕ ವಿದಿಶಾದಲ್ಲಿ ‘ಸಂಸದರು ನಾಪತ್ತೆಯಾಗಿದ್ದಾರೆ’ ಎಂಬ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. ಇದಕ್ಕೆ ಸೂಕ್ತ ಉತ್ತರವನ್ನೂ ಸುಷ್ಮಾ ನೀಡಿದ್ದರು. ‘ಎರಡು ಬಾರಿ ವಿದಿಶಾದಿಂದ ಗೆದ್ದಿದ್ದೇನೆ. 8 ವರ್ಷಗಳ ಕಾಲ ಅಲ್ಲಿ ಸಕ್ರಿಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಪ್ರತಿ ತಿಂಗಳೂ ಎಲ್ಲ 8 ವಿಧಾನಸಭಾ ಕ್ಷೇತ್ರಗಳಿಗೆ ತೆರಳಿದ್ದೇನೆ. ಹೀಗಾಗಿಯೇ ನನ್ನನ್ನು ಸಕ್ರಿಯ ಸಂಸದರು ಎನ್ನುತ್ತಾರೆ. ಆದರೆ ಮೂತ್ರಪಿಂಡ ಕಸಿ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಲು ಆಗಲಿಲ್ಲ. ಆದಾಗ್ಯೂ ಕೊಟ್ಟಿದ್ದ ಎಲ್ಲ ಭರವಸೆ ಈಡೇರಿಸಿದ್ದೇನೆ’ ಎಂದು ಹೇಳಿದ್ದರು. ಹಾಗಂತ ಸುಷ್ಮಾ ವಿರುದ್ಧ ಆಡಳಿತ ವಿರೋಧಿ ಅಲೆ ಏನೂ ಇರಲಿಲ್ಲ. ಸುಷ್ಮಾ ಬದಲಿಗೆ ಅಲ್ಲಿ 2019ರಲ್ಲಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ರಮಾಕಾಂತ ಭಾರ್ಗವ 5 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದೇ ಇದಕ್ಕೆ ದಿಟ್ಟ ಉತ್ತರ ಉತ್ತರವಾಗಿತ್ತು.