ಜಿಂಬಾಬ್ವೆ ಜನರಿಗೆ ಕೊಡಬಾರದ ಕಷ್ಟಕೊಟ್ಟ ಸರ್ವಾಧಿಕಾರಿ ಮುಗಾಬೆ ಕೊನೆಗೂ ರಾಜೀನಾಮೆ ನೀಡಿದ್ದಾರೆ..

0
393

ವಿರೋಧಿಗಳ ಪ್ರತಿಭಟನೆಗೆ ಕಡೆಗೂ ಮಣಿದು ರಾಬರ್ಟ್‌ ಮುಗಾಬೆ ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್‌ ಜೇಕಬ್‌ ತಿಳಿಸಿದ್ದಾರೆ.

ಜಿಂಬಾಬ್ವೆಯ ಸಂವಿಧಾನದ 96ನೇ ಕಲಂಗೆ ಅನುಗುಣವಾಗಿ ತತ್‌ಕ್ಷಣವೇ ಜಾರಿಗೆ ಬರುವಂತೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಮುಗಾಬೆ ಪತ್ರದಲ್ಲಿ ತಿಳಿಸಿರುವುದಾಗಿ ಜೇಕಬ್‌ ಹೇಳಿದ್ದಾರೆ.

ಇತ್ತೀಚೆಗೆ ದಿಢೀರ್‌ ಬೆಳವಣಿಗೆಯಲ್ಲಿ ಜಿಂಬಾಬ್ವೆ ಆಡಳಿತವನ್ನು ಸೇನೆ ವಶಕ್ಕೆ ತೆಗೆದುಕೊಂಡು ಮುಗಾಬೆ ರಾಜೀನಾಮೆಗೆ ಒತ್ತಾಯಿಸಿತ್ತು. ಮುಗಾಬೆ ಅನಾರೋಗ್ಯದಿಂದ ಬಳಲುತ್ತಿದ್ದು ಅದನ್ನು ಅವರ ಪತ್ನಿ ಹಾಗೂ ಸಂಬಂಧಿಕರು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಪಕ್ಷದ ನಾಯಕರೂ ಸೇರಿದಂತೆ ವಿರೋಧ ಪಕ್ಷದವರು ಸಹ ಮುಗಾಬೆ ರಾಜೀನಾಮೆಗೆ ಆಗ್ರಹಿಸಿದ್ದರು.

ಅಷ್ಟಕ್ಕೂ ಯಾರು ಈ ರಾಬರ್ಟ್ ಮುಗಾಬೆ..?
ಬ್ರಿಟಿಷ್ ಆಡಳಿತದಿಂದ ಜಿಂಬಾಬ್ವೆಗೆ 1980ರಲ್ಲಿ ಸ್ವಾತಂತ್ರ್ಯ ದೊರಕಿತು. ಆಗ ಈ ರಾಬರ್ಟ್ ಮುಗಾಬೆ ಜಿಂಬಾಬ್ವೆ ದೇಶದ ಅಧ್ಯಕ್ಷರಾದರು. ಅಂದಿನಿಂದ ಇಂದಿನವರೆಗೆ ಮುಗಾಬೆ ಒಬ್ಬರೇ ಜಿಂಬಾಬ್ವೆಯನ್ನು ಆಳಿದ್ದಾರೆ. 93 ವರ್ಷವಾದರೂ ನಿವೃತ್ತಿಯಾಗಿಲ್ಲ. ಇವರ ಆಡಳಿತಾವಧಿಯಲ್ಲಿ ಆರ್ಥಿಕ ವ್ಯವಸ್ಥೆ ನೆಲಕಚ್ಚಿದ್ದರೆ, ಹಣದುಬ್ಬರ ಮುಗಿಲು ಮುಟ್ಟಿದೆ. ವಿರೋಧಿಗಳನ್ನು ನಿರ್ದಯವಾಗಿ ಹತ್ತಿಕ್ಕಿದ ಆರೋಪ ಮುಗಾಬೆ ಮೇಲಿದೆ. ಮತದಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಟೀಕೆಯೂ ಸಹ ಮುಗಾಬೆ ಮೇಲಿವೆ.

ಮುಗಾಬೆಗೆ ಇಬ್ಬರು ಪತ್ನಿಯರು. ಮೊದಲನೇ ಪತ್ನಿ 1992ರಲ್ಲಿ ನಿಧನರಾದರು.. ಆ ಬಳಿಕ ತಮ್ಮ ಬಳಿ ಟೈಪಿಸ್ಟ್ ಆಗಿದ್ದ ಗ್ರೇಸ್ ಎಂಬಾಕೆಯನ್ನೇ ಎರಡನೇ ವಿವಾಹವಾಗಿದ್ದಾರೆ. ಮುಗಾಬೆ ಅಧಿಕಾರಾವಧಿ ಮುಗಿದ ಬಳಿಕ ಜಿಂಬಾಬ್ವೆ ಉಪಾಧ್ಯಕ್ಷರಾಗಿದ್ದ ಎಮ್ಮರ್‌ಸನ್ ಎಮ್ನಾನ್‌ಗಾಗ್ವಾ ಅವರು ಅಧ್ಯಕ್ಷ ಪಟ್ಟಕ್ಕೇರಬೇಕಿತ್ತು. ಆದರೆ ಅದನ್ನು ತಪ್ಪಿಸಿ, ತಮ್ಮ ಪತ್ನಿ ಗ್ರೇಸ್‌ರನ್ನು ಅಧ್ಯಕ್ಷ ಪಟ್ಟಕ್ಕೇರಿಸುವ ಕನಸನ್ನು ಮುಗಾಬೆ ಕಂಡಿದ್ದರು. ಹೀಗಾಗಿ ಎಮ್ಮರ್ ಸನ್‌ರನ್ನು ಪದಚ್ಯುತಗೊಳಿಸಿದ್ದರು. ಆನಂತರ ಎಮ್ಮರ್‌ಸನ್ ದೇಶ ಬಿಟ್ಟು ಹೋಗಿದ್ದರು.

ಮುಗಾಬೆ ಸರ್ವಾಧಿಕಾರಕ್ಕೆ ಮಿಲಿಟರಿ ಬ್ರೇಕ್..!

37 ವರ್ಷಗಳ ಕಾಲ ಸರ್ವಾಧಿಕಾರಿಯ ಆಡಳಿತದಿಂದ ನಲುಗಿದ್ದ ಆಫ್ರಿಕಾ ಖಂಡದ ರಾಷ್ಟ್ರ ಜಿಂಬಾಬ್ವೆಯಲ್ಲಿ ಕ್ಷಿಪ್ರಕ್ರಾಂತಿ ನಡೆಯಿತು. ಎಮ್ಮರ್‌ಸನ್ ರನ್ನು ಪದಚ್ಯುತಿಗೋಳಿಸಿದ ನಂತರ ಅವರು ದೇಶವನ್ನೇ ತೊರೆದರು. ಇದು ಸೇನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಕಳೆದವಾರ ಕ್ಷಿಪ್ರಕ್ರಾಂತಿ ನಡೆಸಿ ಮುಗಾಬೆಯನ್ನು ಸೇನೆ ಕೆಳಗಿಳಿಸಿತು. ಸೇನಾ ಪಡೆಗಳು ಮುಗಾಬೆ ಹಾಗೂ ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಂಡಿತ್ತು.

ಇದೀಗ ಜಿಂಬಾಬ್ವೆಯ ಪ್ರಜಾಪ್ರಭುತ್ವ ಎಲ್ಲಿ ಸೇನೆಯ ಕೈಗೆ ಹೋಗುತ್ತೋ ಎಂಬ ಭೀತಿ ಎದುರಾಗಿದರೂ, ಎಮ್ಮರ್‌ಸನ್ ಪಟ್ಟಾಭಿಷೇಕವಾದರೆ ಅದು ನಿವಾರಣೆಯಾಗಬಹುದು.