ನಿಮ್ಮೆಲ್ಲಾ ಕಷ್ಟಗಳ ಪರಿಹಾರಕ್ಕಾಗಿ, ಶನಿ ದೋಷ ನಿವಾರಣೆಗಾಗಿ ಏಳೂರ ಒಡೆಯ ಈ ಯಲಗೂರ ಆಂಜನೇಯನ ದರ್ಶನ ಪಡೆಯಿರಿ…!!

0
3456

Kannada News | Karnataka Temple History

ಒಂದೆಡೆ ಸಾಗರದಂತೆ ಹಬ್ಬಿರುವ ಕೃಷ್ಣೇ, ಮತ್ತೊಂದೆಡೆ ಜಗದೊಡೆಯನ ಆವಾಸಸ್ಥಾನದಲ್ಲಿ ಆಸೀನರಾಗಿರುವ ಏಳೂರ ಒಡೆಯ ಈ ಯಲಗೂರ ಹನುಮಂತರಾಯ. ಬಿಜಾಪುರ ಜಿಲ್ಲೆಯ ಈ ಆಳೆತ್ತರದ ಭವ್ಯವಾದ ಸುಂದರ ಹನುಮ ನೆಲೆಸಿರುವ ಯೆಲಗೂರು ಮುದ್ದೇಬಿಹಾಳದಿಂದ 21 ಕಿಮಿ ದೂರದಲ್ಲಿದೆ. ಸಮೃದ್ಧವಾದ ಜಲಸಾಗರವನ್ನು ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುವ ಆಲಮಟ್ಟಿಯ ಜಲಾಶಯದಿಂದ ಕೇವಲ ೫ ಕಿಮಿ ದೂರದಲ್ಲಿದೆ.

ಶ್ರೀ ರಾಮನ ಅಣತಿಯಂತೆ ಎಲಗೂರಿನ ಸುತ್ತಮುತ್ತಲ ಏಳು ಹಳ್ಳಿಗಳ ರಕ್ಷಣೆಗಾಗಿ ನಿಂತ ಯಲಗೂರ ಆಂಜನೇಯ ಸುತ್ತಮುತ್ತಲಿನ ಚಂದ್ರಗಿರಿ, ಆಳಲದಿನ್ನಿ, ಕಾಶಿನಕುಂಟೆ, ಬೂದಿಹಾಳ,ಮಸೂತಿ, ನಾಗಸಂಪಿಗೆ ಹೀಗೆ ಏಳು ಹಳ್ಳಿಗಳ ಗ್ರಾಮಸ್ಥರ ಕುಲದೈವವೂ ಹೌದು.

ವಿಶಾಲವಾದ ಪ್ರಾಂಗಣದಲ್ಲಿನ ಗರ್ಭಗುಡಿಯಲ್ಲಿ ನೆಲೆಸಿರುವ ಆಳೆತ್ತರದ ಹನುಮನ ದಿವ್ಯ ತೇಜಸ್ಸನ್ನು ಬಣ್ಣಿಸಲು ಶಬ್ದಗಳು ಸಾಲದು. ದೂರದೂರುಗಳಿಂದ ಹನುಮನ ಶ್ರೀರಕ್ಷೆಗಾಗಿ ಅರಸಿ ಬರುವ ಭಕ್ತರಿಗೆ ಅಭಯ ನೀಡುತ್ತಾ ನಿಂತಿರುವ ಈ ಭವ್ಯ ಮೂರ್ತಿ ನಿಜಕ್ಕೂ ಯಲಗೂರನ್ನು ಪರಮ ಪವಿತ್ರ ಕ್ಷೇತ್ರವನ್ನಾಗಿಸಿದೆ. ಸುತ್ತಲಿನ ಗರುಡಗಂಬ, ಶಿವಲಿಂಗ, ಗಣಪತಿ, ಸೂರ್ಯನಾರಾಯಣ, ತುಳಸಿ ಬೃಂದಾವನ ಇದೆಲ್ಲವೂ ಆಸ್ತಿಕರನ್ನೂ ಪರಮಾರ್ಥದೆಡೆಗೆ ಕೊಂಡೊಯುತ್ತದೆ. ಗರ್ಭ ಗುಡಿಯ ಸುತ್ತಣ ಗೋಡೆಯನ್ನು ಆವರಿಸಿರುವ ವರ್ಣರಂಜಿತ ಹನುಮ ಕೀರ್ತಿಯನ್ನು ಬಿಂಬಿಸುವ ಕಲಾಕೃತಿಗಳು, ರಾಮಾಯಣದ ಚಿತ್ರಗಳು ಮೊದಲಾದವುಗಳು ಕಣ್ಮನ ಸೆಳೆಯುತ್ತವೆ.

ಕೃಷ್ಣೆಯ ತಟದಲ್ಲಿರುವ ಈ ಕ್ಷೇತ್ರದ ಯಲಗೂರೇಶನಿಗೆ ನಿತ್ಯ ಪೂಜೆಯಿದ್ದು, ಕಾರ್ತಿಕ ಮಾಸದ ಕಾರ್ತಿಕೋತ್ಸವವು ಬಹಳ ವಿಜೃಂಭಣೆಯಿಂದ ಜರಗುತ್ತದೆ.ಅಲ್ಲದೆ ಚೈತ್ರ ಮಾಸದ ಶ್ರೀ ರಾಮ ನವಮಿ ಉತ್ಸವ, ಹನುಮ ಜಯಂತಿಯನ್ನು ಸಹ ಅತ್ಯಂತ  ಭಕ್ತಿ ಬಾವಗಳಿಂದ ಆಚರಿಸಲಾಗುತ್ತದೆ. ಈ ಆಂಜನೇಯ  ಸ್ವಾಮೀ  ಸನ್ನಿಧಿಯೂ  ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವೆಂಬುದು ಎಲ್ಲರ ನಂಬಿಕೆ.ಶ್ರೀ ಕ್ಷೇತ್ರದ ತಾಯತಗಳನ್ನೂ ಸಕಲ ಪೂಜಾ ವಿಧಾನಗಳೊದಿಗೆ ಧರಿಸಿದ್ದಲ್ಲಿ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬುದು ಅನುಭವಿಗಳ ಮಾತು. ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುವ ಭಕ್ತರು ಇಲ್ಲಿ ತಪ್ಪದೆ ಒಂದು ರಾತ್ರಿ ಕಳೆದು ಯಲಗೂರೇಶ್ವರನ ದರ್ಶನ ಪಡೆದು ಪೂಜಾ ಪ್ರಸಾದವನ್ನು ಸ್ವೀಕರಿಸಿಯೇ ತಮ್ಮ ಪಾದಯಾತ್ರೆಯನ್ನು ಮುಂದುವರಿಸುವುದು ವಾಡಿಕೆಯಾಗಿದೆ.

ಜಿಲ್ಲಾ ಕೇಂದ್ರ ಬಿಜಾಪುರದಿಂದ ೬೫ ಕಿಮಿ ದೂರದಲ್ಲಿರುವ ಈ ಪುಣ್ಯಕ್ಷೇತ್ರವೂ ಆಲಮಟ್ಟಿ ಜಲಾಶಯದಿಂದ ಕೇವಲ ೫ ಕಿಮಿ ದೂರದಲ್ಲಿದ್ದು, ನಿಡಗುಂಡಿಯಿಂದ ೩ ಕಿಮಿ ದೂರದಲ್ಲಿದೆ. ಬಿಜಾಪುರ, ಬಾಗಲಕೋಟೆ, ಬಸವನ ಬಾಗೇವಾಡಿಗಳಿಂದ ಸಾಕಷ್ಟು ವಾಹನ ಸೌಲಭ್ಯಗಳಿವೆ. ಆಲಮಟ್ಟಿಯಿಂದ ರೈಲಿನಲ್ಲೂ, ಆಟೋ ರಿಕ್ಷಾ ಸೌಲಭಗಳು ಲಭ್ಯವಿದೆ.