ದೇಶದ ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಕೆ: ಸೈನಿಕರ ದುಃಸ್ಥಿತಿ ಬಿಚ್ಚಿಟ್ಟ ವಿಡಿಯೋ

0
511

ಜಮ್ಮು: ಕೈಯಲ್ಲಿ ಅರೆ ಬೆಂದ ಪರೋಟಾ ಮತ್ತು ಚಹಾದ ಲೋಟ ತೋರಿಸಿ, ನೋಡಿ ಇದೇ ನಮ್ಮ ಬ್ರೇಕ್‍ಫಾಸ್ಟ್ ಎಂದು ಯೋಧರಿಗೆ ನೀಡುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಸಾಕಷ್ಟು ಚರ್ಚೆಗೀಡಾಗಿದೆ.

ಹೌದು ಬಿಎಸ್‌ಎಫ್ 29 ನೇ ಬೆಟಾಲಿಯನ್ ಯೋಧ ತೇಜ್ ಬಹಾದ್ದೂರ್ ಯಾದವ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮ ದುಃಸ್ಥಿತಿಯನ್ನು ಬಿಚ್ಚಿಟ್ಟಿದ್ದು ಈ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ.

ಬೆಳಗಿಂದ ಸಂಜೆಯವರೆಗೂ 11-12 ಗಂಟೆಗಳ ಕಾಲ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ನಿರಂತರವಾಗಿ ಗಡಿ ಕಾಯುತ್ತೇವೆ. ಆದರೆ ನಮಗೆ ನೀಡುವ ಬೆಳಗಿನ ಉಪಹಾರ ಅರಿಶಿಣ ಮಿಶ್ರಿತ ದಾಲ್, ಒಣಗಿದ ಪರೋಟಾ.

ಸರಿಯಾದ ಊಟ ತಿಂಡಿ ಇಲ್ಲ. ನೀರಿನಂತಿರುವ ದಾಲ್‍ನಲ್ಲಿ ಬರೀ ಉಪ್ಪು, ಅರಶಿನ ಬಿಟ್ಟರೆ ಬೇರೇನೂ ಇಲ್ಲ, ಪರೋಟಾ ಜತೆ ಉಪ್ಪಿನಕಾಯಿಯಾಗಲೀ, ಜಾಮ್ ಆಗಲಿ ಇಲ್ಲ. ಇದನ್ನು ತಿಂದು ನಾವು 11 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು. ಗಡಿ ಕಾಯುವ ಯೋಧರಿಗೆ ಕೊಡುವ ಆಹಾರ ಇದು ಎಂದು ಹೇಳಿ ಜಮ್ಮು ಕಾಶ್ಮೀರದಲ್ಲಿ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್‍ನ ಯೋಧ ತೇಜ್ ಬಹದ್ದೂರ್ ಯಾದವ್ ತಮ್ಮ ಫೇಸ್‍ಬುಕ್‍ನಲ್ಲಿ ನಾಲ್ಕು ವಿಡಿಯೊಗಳನ್ನು ಅಪ್‍ಲೋಡ್ ಮಾಡಿದ್ದರು.

ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಬೆಳಗಿನ ಉಪಹಾರಕ್ಕೆ ಸೀದು ಹೋಗಿರುವ ಆಹಾರವನ್ನು ನೀಡಲಾಗುತ್ತದೆ. ನಮಗೆ ಸಿಗುವ ರೇಷನ್ನಲ್ಲೂ ಮೇಲಾಧಿಕಾರಿಗಳ ಗೋಲ್ ಮಾಲ್ ಇರುತ್ತದೆ. ನಮ್ಮ ಪರಿಸ್ಥಿತಿ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ತೋರಿಸಲಾಗುವುದಿಲ್ಲ, ಎಂದು ಸ್ಪೋಟಕ ಸತ್ಯವನ್ನು ಹೊರಹಾಕುವ ಧೈರ್ಯ ತೋರಿದ್ದಾನೆ ಸೈನಿಕ. ಈ ಕುರಿತು ಗಮನ ನೀಡುವಂತೆ ಅವರು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.

ಗಡಿ ಕಾಯುವ ಸೈನಿಕರ ಬಗ್ಗೆ ರಾಜಕಾರಣಿಗಳು ಭಾಷಣದಲ್ಲಿ ಕರುಣಾಜನಕವಾಗಿ ಮಾತನಾಡುತ್ತಾರೆ. ಆದರೆ ಅವರ ದುಃಸ್ಥಿತಿಯ ಬಗ್ಗೆ ಅವರಿಗರಿವಾಗದಿರುವುದು ವಿಪರ್ಯಾಸ.

ನಮ್ಮ ದೇಶವನ್ನು ರಕ್ಷಿಸುವ ಸೈನಿಕರ ಈ ದುಃಸ್ಥಿತಿ ಈಗ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಸಚಿವರು ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

 

ಫೇಸ್‍ಬುಕ್‍ನಲ್ಲಿ ಫೋನ್‍ ನಂಬರ್

ಸೇನೆಯಲ್ಲಿ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ವಿಡಿಯೊ ಪೋಸ್ಟ್ ಮಾಡಿದ ನಂತರ ಯೋಧ ತೇಜ್ ಅವರು ಇಂದು ಫೋನ್‍ ಸಂಖ್ಯೆಯೊಂದನ್ನು ತಮ್ಮ ವಾಲ್‍ನಲ್ಲಿ ಬರೆದುಕೊಂಡಿದ್ಗಾರೆ. 6 ಗಂಟೆಯ ಹಿಂದೆ ಅವರು ಬರೆದ ಫೇಸ್‍ಬುಕ್ ಸ್ಟೇಟಸ್ ಹೀಗಿದೆ : ‘ನಾನೊಬ್ಬ ಯೋಧ, ನನಗೆ ಯಾವುದೇ ಧರ್ಮದ ಬಗ್ಗೆ ಕೆಟ್ಟ ಅಭಿಪ್ರಾಯಗಳೇನೂ ಇಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ನಾನು ಎಲ್ಲ ಧರ್ಮದವರಲ್ಲಿ ಕ್ಷಮೆ ಕೇಳುತ್ತೇನೆ. ಜೈ ಹಿಂದ್.’